ಮೂಡುಬಿದಿರೆ: ಮೂಡುಬಿದಿರೆ ಕಲ್ಲಬೆಟ್ಟುಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ 2025–26ನೇ ಸಾಲಿನ ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳ ಗ್ರಾಜುಯೇಷನ್ ದಿನವನ್ನು ಶಾಲಾ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಮುಖ್ಯ ಅತಿಥಿ ಉಜಿರೆಯ ಡೆಂಟಲ್‌ ಸರ್ಜನ್‌ ಡಾ. ದೀಪಾಲಿ ಡೋಂಗ್ರೆ ಮಾತನಾಡಿ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿ, ಮಗುವಿನ ಬೆಳವಣಿಗೆಗೆ ತಂದೆ- ತಾಯಿಯರಿಬ್ಬರೂ ಜವಾಬ್ದಾರರಾಗಿರುತ್ತಾರೆ. ಪೋಷಕತ್ವ ಜೀವನದುದ್ದಕ್ಕೂ ಸಾಗುವ ಪಯಣವಾಗಿದ್ದು, ಮಗುವಿನ ಗೆಲುವಿನಷ್ಟೇ ಅಲ್ಲದೆ ಸೋಲಿನಲ್ಲಿಯೂ ಪೋಷಕರ ಪ್ರೋತ್ಸಾಹದ ನುಡಿ ಅಗತ್ಯವೆಂದರು.ಪ್ರತಿ ಮಗು ತನ್ನದೇ ಸಾಮರ್ಥ್ಯ, ಶಕ್ತಿ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ಹೆತ್ತವರು ತಮ್ಮ ಜೀವನದ ಅನುಭವಗಳನ್ನು ಮಕ್ಕಳಿಗೆ ತಿಳಿಸಿ, ಅವರ ಜೀವನ ರೂಪಿಸುವಲ್ಲಿ ಸರಿಯಾದ ಮಾರ್ಗದರ್ಶನ ನೀಡಬೇಕು. ಮಕ್ಕಳಲ್ಲಿ ಓದುವ ಕೌಶಲ್ಯವನ್ನು ವೃದ್ಧಿಸಲು ಪ್ರಯತ್ನಿಸಿ, ಅವರ ಭವಿಷ್ಯವನ್ನು ಉತ್ತಮ ದಾರಿಗೆ ನಡೆಸುವುದು ಪೋಷಕರ ಕರ್ತವ್ಯವಾಗಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು. ಮುಖ್ಯ ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಹಾಗೂ ಸಂಸ್ಥೆಯ ಕಾರ್ಯದರ್ಶಿಯವರು ಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು. ಎಲ್ ಕೆ ಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪುಟಾಣಿ ಹೆಜ್ಜೆಗಳಲ್ಲಿ ಕನಸುಗಳ ಹೊನಲು ಹೊತ್ತ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಕುದುರೆ ಸವಾರಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಪುಷ್ಪರಾಜ್, ಶಾಲಾ ಪ್ರಾಂಶುಪಾಲರಾದ ಶ್ರೀಪ್ರಸಾದ್ ಮತ್ತು ಸಿ ಬಿ ಎಸ್ ಇ ಸಂಯೋಜಕಿ ವಿಮಲ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಲ್ ಕೆ ಜಿ ವಿದ್ಯಾರ್ಥಿನಿ ಅಮೂಲ್ಯ ಸ್ವಾಗತಿಸಿ, ರಿಷಿಕಾ ಆರ್. ಪೂಜಾರಿ ವಂದಿಸಿ, ಕಾರ್ಯಕ್ರಮವನ್ನು ಎಲ್ ಕೆಜಿ ವಿದ್ಯಾರ್ಥಿನಿಯರಾದ ದಿಯಾ ದೀಕ್ಷಿತ್ ಮತ್ತು ನಿಯತಿ ನಿರೂಪಿಸಿದರು.