ಮೂರೇ ಗಂಟೇಲಿ ಪಾಕ್‌ ನರಿ ಬುದ್ಧಿ ಪ್ರದರ್ಶನ

| Published : May 11 2025, 11:45 PM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮ‌ ಸೈನಿಕರ ಶಕ್ತಿ ಸಾಮರ್ಥ್ಯವೇನು ಎಂಬುದನ್ನು ಪ್ರಪಂಚಕ್ಕೆ ತೋರಿಸಿ ಸೈ ಎನಿಸಿಕೊಂಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರ ಅವರು, ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರದಿಂದ ಪಾಕಿಸ್ತಾನಕ್ಕೆ ತಿನ್ನೊದಕ್ಕೆ ಅನ್ನ, ಕುಡಿಯೋಕೆ ನೀರಿಲ್ಲದ ಸ್ಥಿತಿ ಬಂದಿತ್ತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಮ್ಮ‌ ಸೈನಿಕರ ಶಕ್ತಿ ಸಾಮರ್ಥ್ಯವೇನು ಎಂಬುದನ್ನು ಪ್ರಪಂಚಕ್ಕೆ ತೋರಿಸಿ ಸೈ ಎನಿಸಿಕೊಂಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರ ಅವರು, ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರದಿಂದ ಪಾಕಿಸ್ತಾನಕ್ಕೆ ತಿನ್ನೊದಕ್ಕೆ ಅನ್ನ, ಕುಡಿಯೋಕೆ ನೀರಿಲ್ಲದ ಸ್ಥಿತಿ ಬಂದಿತ್ತು. ಆದರೆ, ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಯುದ್ಧವಿರಾಮ ಆಗಿತ್ತು. ಆದರೆ ಕದನ ವಿರಾಮವಾದ ಬಳಿಕ ಕೇವಲ ಮೂರೇ ಗಂಟೆಯಲ್ಲಿ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ. ಇದೇ ರೀತಿ ಮುಂದುವರಿದರೆ ಪಾಕಿಸ್ತಾನ ಭೂಪಟದಲ್ಲೇ ಇಲ್ಲದಂತಾಗುತ್ತದೆ. ನಮ್ಮ ಸೈನಿಕರು ಅಂತಹ ಶಕ್ತಿ ತೋರಲಿದ್ದಾರೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ ಎಂದರು.

ಈ ಸಮಯದಲ್ಲಿ ಎಲ್ಲ ಪಕ್ಷಗಳು ರಾಜಕಾರಣ ಬಿಟ್ಟು ನಾವೆಲ್ಲ ಒಂದು ಎಂದು ತೋರಿಸಿದ್ದು ಸಂತಸವಾಗಿದೆ. ನಮ್ಮ ದೇಶದ 26 ಜನ ಅಮಾಯಕರನ್ನು ಹತ್ಯೆ ಮಾಡಿದಾಗಲೇ ಪಾಕಿಸ್ತಾನ ಭೂಪಟದಲ್ಲಿ ಅಳಿಯಲು ಮೊದಲ ಮೊಳೆ ಹೊಡೆದುಕೊಂಡಿದೆ. ಪ್ರಧಾನಿಯವರ ದಿಟ್ಟ ಹೆಜ್ಜೆಯಿಂದ ಎರಡೇ ದಿನದಲ್ಲಿ ಅವರಿಗೆ ಭಾರತದ ಶಕ್ತಿ ತೋರಿಸಿದೆ. ಪಾಕಿಸ್ತಾನ ಮತ್ತೆ ಪ್ರಯತ್ನ ಮಾಡಿದರೆ ಪಾಕಿಸ್ತಾನದ ಬಾಲ‌ ಕಟ್ ಮಾಡಲಾಗುವುದು. ಅದು ಭೂಪಟದಿಂದಲೇ ಅಳಸಿ ಹೋಗಲಿದೆ ಎಂದು ಎಚ್ಚರಿಕೆ ನೀಡಿದರು.

ಕೆಲವರು ರಾಷ್ಟ್ರ ದ್ರೋಹಿಗಳಿದ್ದಾರೆ. ಹೊರಗಡೆ ಇರುವವರನ್ನು ಸೈನಿಕರು ಹೊಡೆದು ಹಾಕ್ತಾರೆ. ಆದರೆ, ಒಳಗಡೆ ಇರುವವರನ್ನು ರಾಷ್ಟ್ರಭಕ್ತರು ಗಮನಿಸಬೇಕು. ರಾಷ್ಟ್ರದ್ರೋಹಿಗಳಿಗೆ ಶಿಕ್ಷೆ ಆಗುವ ಹಾಗೆ ಕಾನೂನು ತಿದ್ದುಪಡಿ ಆಗಬೇಕಿದೆ. ಈಗಾಗಲೇ 1008 ಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಆರಂಭಿಸಿದ್ದೇವೆ. ಇದೀಗ ಹಿಂದೂಗಳಿಗೆ ಅನ್ಯಾಯವಾದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಹಾವೇರಿಯಲ್ಲಿ ನಡೆದ ಮಹಿಳೆಯ ಕೊಲೆ, ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ನಡೆದಲ್ಲೆಲ್ಲ ಹೋಗಿದ್ದೇವೆ. ಅವರಿಗೆ ಪರಿಹಾರ ಹಾಗೂ ನ್ಯಾಯ ಕೊಡಬೇಕು ಎಂಬ ಒತ್ತಾಯ ಮಾಡುತ್ತಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿನ ಚಟುವಟಿಕೆಗಳನ್ನು ರಾಷ್ಟ್ರನಾಯಕರು ಗಮನಿಸುತ್ತಾರೆ. ರಾಜ್ಯದಲ್ಲಿನ ವಿಚಾರಗಳನ್ನು ಗಮನ ಸೆಳೆಯಲೆಂದೇ ನಾನು ಚುನಾವಣೆಗೆ ನಿಂತಿದ್ದೆ. ನಾನು ಚುನಾವಣೆಗೆ ನಿಂತ ಬಳಿಕ ಇಲ್ಲಿ ಏನಾಗಿದೆ ಎಂದು ರಾಷ್ಟ್ರಮಟ್ಟದಲ್ಲಿ ಪಕ್ಷದಲ್ಲಿ ಚರ್ಚೆ ಆಗುತ್ತಿದೆ ಎಂದರು.

ಯತ್ನಾಳ ಮತ್ತು ನೀವು ಹೊಸ ಪಕ್ಷ ಕಟ್ಟುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಪಕ್ಷವನ್ನು ಯತ್ನಾಳ ಕಟ್ಟುತ್ತಾರೋ ಇಲ್ಲವೋ ಗೊತ್ತಿಲ್ಲ. ಅದನ್ನು ಅವರಿಗೆ ಕೇಳಬೇಕು. ಆದರೆ ನನ್ನ ಕುತ್ತಿಗೆ ಕೊಯ್ದರೂ ನಾನು ಬೇರೆ ಪಾರ್ಟಿಗೆ ಹೋಗಲ್ಲ. ನಾನು ಯಾವತ್ತೂ ಬೇರೆ ಪಾರ್ಟಿಯನ್ನು ಕಟ್ಟಲ್ಲ ಎಂದು ಸ್ಪಷ್ಟಪಡಿಸಿದರು.-------------

---ಕೋಟ್‌

ನಾನು ಯತ್ನಾಳ ಪಕ್ಷವನ್ನು ಶುದ್ಧೀಕರಣ ಮಾಡಲು ಯತ್ನಿಸುತ್ತಿದ್ದೇವೆ. ಒಂದೇ ಕುಟುಂಬದ ಕೈಗೆ ಪಕ್ಷ ಇರಬೇಕು ಎಂಬುದನ್ನು ಹಾಗೂ ಹಿಂದುತ್ವ ಬಿಟ್ಟು ರಾಜಕಾರಣ ಮಾಡುವುದನ್ನು ಯಾರು ಒಪ್ಪುತ್ತಾರೆ?. ಪಕ್ಷದ ಶುದ್ಧೀಕರಣಕ್ಕೆಲ್ಲ ಸಮಯ ಬೇಕು, ಇಂದಲ್ಲಾ ನಾಳೆ ಅದು ಆಗುತ್ತದೆ. ಪ್ರಧಾನಿ ಮೋದಿ ಅವರು ಸಣ್ಣ ಹಾಗೂ ಕೆಟ್ಟ ರಾಜಕಾರಣ ಮಾಡುವವರಲ್ಲ. ಶುದ್ಧೀಕರಣ ಒಂದೇ ಹಂತದಲ್ಲಿ ಒಂದೇ ಬಾರಿಗೆ ಆಗಲ್ಲ, ಅದಕ್ಕೆ ಸಮಯ ಬೇಕಾಗುತ್ತದೆ.

ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ