ಮಡಿಕೇರಿ: ಸ್ವಾತಂತ್ರ್ಯದ 80ನೇ ವರ್ಷಾಚರಣೆಯ ಸಂದರ್ಭ ಆ.15ರಂದು ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಹಾಗು ಕೊಡವ ಸಮಾಜ, ಮೂರ್ನಾಡು ಸಹಯೋಗದಲ್ಲಿ ಎರಡನೇ ವರ್ಷದ ‘ನೆಪ್ಪುರ ನಳತ್ ಮಾಂಜತ ಮೊಟ್ಟ್ - ‘the ever lasting footprints in the shadow of memories’ ಎಂಬ ಕೊಡಗಿನ ನೈಜ ಸ್ವಾತಂತ್ರ್ಯ ಹೋರಾಟಗಾರರ ಕುರಿತ ವಿಶೇಷ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. ಇತ್ತೀಚೆಗೆ ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ತೇಲಪಂಡ ಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ, ಮೂರ್ನಾಡು ಕೊಡವ ಸಮಾಜದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.ಕಳೆದ ವರ್ಷ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯದಿನಾಚರಣೆಯಂದೇ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರನ್ನು ಅರ್ಥಪೂರ್ಣವಾಗಿ ಸ್ಮರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೀಗ ಎರಡನೇ ವರ್ಷದ ಕಾರ್ಯಕ್ರಮವನ್ನು ಮೂರ್ನಾಡು ಕೊಡವಸಮಾಜದಲ್ಲಿ ಅರ್ಧಪೂರ್ಣವಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆ ಹಿರಿಯರ ನೆನಪುಗಳು ಹಾಗು ಅವರ ತ್ಯಾಗ‌ ಬಲಿದಾನಗಳನ್ನು ಮೆಲುಕು ಹಾಕುವ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ಇದು ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ಮಾತನಾಡಿ, ಆ. 15ರಂದು, ಅಪರಾಹ್ನ 1 ಗಂಟೆಗೆ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ವಿರಾಜಪೇಟೆ ಹಾಗು ಮಡಿಕೇರಿ ಶಾಸಕರು, ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಮೂರ್ನಾಡು ಕೊಡವ ಸಮಾಜದ ಉಪಾಧ್ಯಕ್ಷ ಕೋಟೆರ ರಾಜ, ಕಾರ್ಯದರ್ಶಿ ಚಂಗಂಡ ಸೂರಜ್ ತಮ್ಮಯ್ಯ, ಖಜಾಂಚಿ ಅಮ್ಮಾಟಂಡ ದೇವಯ್ಯ, ತಿರುಟೆರ ಮುದ್ದಯ್ಯ, ಚೇನಂಡ ಮಾದಪ್ಪ, ಪುದಿಯೊಕ್ಕಡ ವಿಪನ್ ಸೋಮಯ್ಯ, ಅಮ್ಮಾಟಂಡ ಕಾವೇರಪ್ಪ, ಚೌಕೀರ ಅಪ್ಪಣ್ಣ, ಪಳಂಗಂಡ ಹರೀಶ್, ಮುಂಡಂಡ ಜಮುನಾ ಪೆಮ್ಮಯ್ಯ, ಪಾಂಡಂಡ ಸ್ವಾತಿ ಗಣಪತಿ, ಕುಂಜಿಲಂಡ ಗ್ರೇಸಿ ಪೂಣಚ್ಚ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪಳಂಗಂಡ ರೇಖ, ಉಪಾಧ್ಯಕ್ಷೆ ಪೆಮ್ಮಂಡ ಗೀತಾ ಪವಿತ್ರ, ಅಮ್ಮಾಟಂಡ ವಿಂದ್ಯಾ ದೇವಯ್ಯ, ಯುಕೊ ಸದಸ್ಯರಾದ ಪುದಿಯೊಕ್ಕಡ ದಿನೇಶ್ ಹಾಗು ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ ಉಪಸ್ಥಿತರಿದ್ದರು.