ಮೂರ್ನಾಡು ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜಿಸಲಾದ 18ನೇ ವರ್ಷದ ಓಣಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಮಡಿಕೇರಿ : ಮೂರ್ನಾಡು ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜಿಸಲಾದ 18ನೇ ವರ್ಷದ ಓಣಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಮೂರ್ನಾಡು ಗೌಡ ಸಮಾಜದಲ್ಲಿ ಆಯೋಜಿಸಲಾದ ಓಣಂ ಹಬ್ಬಾಚರಣೆಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ‘ಡಾ.ಮಂತರ್ ಗೌಡ ಆಗಮಿಸಿ ಮಾತನಾಡಿ, ಓಣಂ ಹಬ್ಬ ಕೇವಲ ಕೇರಳ ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರದಾದ್ಯಂತ ಎಲ್ಲೆಲ್ಲಿ ಮಲಯಾಳಿ ಹಿಂದೂ ಬಾಂಧವರು ಇದ್ದಾರೋ ಅಲ್ಲಿ ಓಣಂ ಹಬ್ಬ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಇಲ್ಲಿ ಜನಾಂಗದ ಒಗ್ಗಟ್ಟನ್ನು ಎತ್ತಿಹಿಡಿಯುವುದಲ್ಲದೆ, ತಮ್ಮ ಸಮಾಜದ ಆಚಾರ-ವಿಚಾರ, ಸಂಸ್ಕೃತಿಗಳನ್ನು ಬೆಳೆಸಿ ಉಳಿಸಿಕೊಂಡು ಹೋಗುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಹಿಂದೂ ಮಲಯಾಳಿ ಸಂಘಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದರು.
ವಿರಾಜಪೇಟೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿ ಮಾತನಾಡಿ, ಓಣಂ ಹಬ್ಬವು ಸಾಮಾಜಿಕ ಉತ್ಸವವಾಗಿ ಆಚರಣೆಗೊಳ್ಳುತ್ತಿದೆ. ಇದರಿಂದ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಬೆಳೆಯುತ್ತದೆ. ಹಿಂದೂಗಳು ತಮ್ಮ ಸಂಸ್ಕೃತಿಗಳನ್ನು ಚಾಚೂ ತಪ್ಪದೆ ಪಾಲಿಸಿದಾಗ ಮಾತ್ರ ಹಿಂದೂ ಸಮಾಜ ಗಟ್ಟಿಗೊಳ್ಳುತ್ತದೆ. ಹೀಗೆ ತಮ್ಮ ಆಚಾರ- ವಿಚಾರ ಪಾಲನೆಗಳಿಂದ ಸಮಾಜ ಒಳಿತು ಕಂಡಾಗ ದೇಶದ ಅಭಿವೃದ್ಧಿ ಕಾಣಬಹುದು. ನಮ್ಮ ಶಿಸ್ತುಬದ್ಧ ಜೀವನ ಬೇರೆಯವರಿಗೆ ಪ್ರೇರಣೆ ನೀಡುವಂತಾಗಬೇಕು ಎಂದು ಹೇಳಿದರು.ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ವಿ.ಎಂ.ವಿಜಯನ್, ಜಿಲ್ಲಾ ಸಮಿತಿ ಸಲಹೆಗಾರ ವಾಸುದೇವನ್ ಮತ್ತು ಸ್ಥಾಪಕಾಧ್ಯಕ್ಷ ಕೆ.ಎಸ್.ರಮೇಶ್ ಸಭೆಯನ್ನುದ್ದೇಶಿಸಿ ಮಾತನಾಡಿದರು.ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಕೆ.ಸುಧೀರ್, ಮುಖ್ಯ ಕಾರ್ಯದರ್ಶಿ ಎನ್.ವಿ.ಉನ್ನಿಕೃಷ್ಣನ್, ಕುಶಾಲನಗರದ ಕೇರಳ ಸಮಾಜದ ಅಧ್ಯಕ್ಷ ಪಿ.ರವೀಂದ್ರನ್, ಎಐಸಿಸಿ ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ ಹೊದವಾಡ, ಜಿಲ್ಲಾ ಸಮಿತಿಯ ಸದಸ್ಯರಾದ ಆರ್.ಗಿರೀಶ್, ಕೆ.ವಿ.ಸುಬ್ರಮಣಿ ಮತ್ತು ಎಂ.ಆರ್.ರತಿಕೇಶನ್, ವಿರಾಜಪೇಟೆ ಹಿಂದೂ ಮಲಯಾಳಿ ಅಸೋಸಿಯೇಷನ್ ಅಧ್ಯಕ್ಷ ವಿನುಪ್, ವಿರಾಜಪೇಟೆ ಶ್ರೀ ಮುತ್ತಪ್ಪ ಮಲಯಾಳಿ ಸಂಘದ ಅಧ್ಯಕ್ಷ ಸುಮೇಶ್, ಅಮ್ಮತ್ತಿ-ಒಂಟಿಯಂಗಡಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಪುಷ್ಕರನ್ ಕೆ.ಸಿ, ಸುಂಟಿಕೊಪ್ಪದ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಾಸುದೇವ್ ಕೆ.ಕೆ, ಮಹಿಳಾ ಸಮಿತಿಯ ಅಧ್ಯಕ್ಷೆ ಶೀಬಾ ಪೃಥ್ವಿನಾಥ್, ಗೋಣಿಕೊಪ್ಪ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆ.ಪಿ, ಮೂರ್ನಾಡು ಹಿಂದೂ ಮಲಯಾಳಿ ಸಂಘದ ಕಾರ್ಯದರ್ಶಿ ಟಿ.ಕೆ.ಸಂತೋಷ್, ಖಜಾಂಚಿ ಎನ್.ಕೆ.ಮುರಳಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಬಾಬು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಂಗೋಲಿ (ಪೂಕಳಂ) ಸ್ಪರ್ಧೆಯಲ್ಲಿ ಹಾಕತ್ತೂರುವಿನ ಇಷ್ಟ ರಾಜೇಶ್ (ಪ್ರಥಮ), ಕೋರಂಬಾಣೆಯ ಬಿಂದು ಕಾರ್ತಿಕ್ (ದ್ವಿತೀಯ) ಹಾಗೂ ಮೂರ್ನಾಡುವಿನ ನಿಶಾ ಕಿಶೋರ್ (ತೃತೀಯ) ಸ್ಥಾನ ಪಡೆದು ನಗದು ಬಹುಮಾನ ಮತ್ತು ಟ್ರೋಫಿಗಳನ್ನು ಪಡೆದರು.
ಸಮಾರಂಭಕ್ಕೂ ಮುಂಚೆ ಮೂರ್ನಾಡಿನ ಮುಖ್ಯ ಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ಕೇರಳದ ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು, ಮಕ್ಕಳು ಮತ್ತು ಹಿರಿಯರು, ಚಂಡೆ ಮೇಳದವರು, ಮಾವೇಲಿ ಮತ್ತು ಕೃಷ್ಣನ ಪಾತ್ರಧಾರಿಗಳು ಪಾಲ್ಗೊಂಡು ನೋಡುಗರ ಗಮನ ಸೆಳೆದರು.ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಕೆ.ಸುಧೀರ್ ಸ್ವಾಗತಿಸಿದರು. ಮೂರ್ನಾಡು ಹಿಂದೂ ಮಲಯಾಳಿ ಸಂಘದ ಕಾರ್ಯದರ್ಶಿ ಟಿ.ಕೆ.ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಓಣಂ ಸದ್ಯ ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.