ಸಾರಾಂಶ
ಹಾವೇರಿ: ನಾಗರಿಕತೆಯ ಹೆಸರಿನಲ್ಲಿ ಸಾಮಾಜಿಕ ವ್ಯವಸ್ಥೆ ನರಕವಾದರೆ, ದುರಭ್ಯಾಸಗಳೇ ಸಂಸ್ಕೃತಿ ಎಂದು ಭಾವಿಸಲು ಹೊರಟರೆ ನಾಳೆಗಳು ಮನುಷ್ಯನ ಅಧಃಪತನಕ್ಕೆ ದೊಡ್ಡ ಊರುಗೋಲಾಗುತ್ತವೆ ಎಂದು ಕೂಡಲದಗುರುನಂಜೇಶ್ವರ ಮಠದಗುರು ಮಹೇಶ್ವರ ಮಹಾಸ್ವಾಮಿಗಳು ಎಚ್ಚರಿಸಿದರು.ನಗರದ ಸುಮಂಗಲ ಗುಡ್ಡಪ್ಪ ಓಂಕಾರಣ್ಣನವರ ಅವರ ಮನೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ ಮನೆಯಲ್ಲಿ ಮಹಾಮನೆ-೬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ವ್ಯವಸ್ಥೆ ಹೊರಟಿರುವ ದಾರಿ ಈಗ ತೀರ ದುರ್ಗಮವಾಗಿದೆ. ಯುವಕರನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ, ಅದಕ್ಕಾಗಿ ಮನೆ, ಶಾಲೆ, ಸಮಾಜ ನೀಡಬೇಕಾದ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಮೈ ಮನಸ್ಸುಗಳನ್ನು ಚಿತ್ತ ಶುದ್ಧವಾಗಿ ನಡೆಸಿಕೊಳ್ಳುವ ನಡೆ ಈ ಸಮಾಜದ್ದಾಗಬೇಕಾಗಿದೆ. ಶರಣ ತತ್ವಗಳು ಮನುಷ್ಯನನ್ನು ಮಹಾ ಮಾನವನನ್ನಾಗಿ ಮಾಡುವ ದಿವ್ಯ ಶಕ್ತಿ ಹೊಂದಿವೆ. ವಚನಗಳು ನಮಗೆ ಕನ್ನಡಿಯಂತೆ. ಲಿಂಗ ಪೂಜೆ ಕೇವಲ ಧಾರ್ಮಿಕವಲ್ಲ ಅದರಲ್ಲಿ ವೈಜ್ಞಾನಿಕ ಸತ್ಯಗಳಿವೆ ಎಂಬುದನ್ನು ಸಮಾಜಕ್ಕೆ ತಿಳಿಸಬೇಕಾಗಿದೆ. ಮನುಷ್ಯನಲ್ಲಿ ಆಗಾಧ ಶಕ್ತಿ ಇದೆ. ಅದನ್ನು ಅರಿಯಬೇಕು. ಮಹಿಳೆಯರಿಗೆ ಸ್ವಾತಂತ್ರ್ಯ ಶಿಕ್ಷಣಕ್ಕಾಗಿ ಅವಕಾಶ ಕಲ್ಪಿಸಿದ ಹಾನಗಲ್ಲ ಲಿಂ. ಕುಮಾರಶಿವಯೋಗಿಗಳವರು ನೀಡಿದ ಸಮಾಜ ಸೇವಾ ಸಂಕಲ್ಪಎಲ್ಲರದ್ದಾದರೆ ಇಲ್ಲಿ ಸತ್ಸಮಾಜದ ಸಂಕಲ್ಪ ಯಶಸ್ವಿಯಾಗಬಲ್ಲದು ಎಂದರು.ನಿವೃತ್ತ ಉಪನ್ಯಾಸಕ ಎಸ್.ಎನ್. ಮಠಪತಿ ಮಾತನಾಡಿ, ಮಹಿಳೆಯನ್ನು ತಾಯಿದೇವಿ ಸ್ಥಾನದಲ್ಲಿ ಕಾಣುವ ಮನಸ್ಸು ನಮ್ಮದಾಗಬೇಕು. ಎಲ್ಲ ಕಾಲದಲ್ಲಿಯೂ ಮಹಿಳಾ ಶೋಷಣೆ ಇದ್ದೇ ಇದೆ. ಆದರೆ ಈ ಕಲಿಯುಗದಲ್ಲಿ ಅದು ಮೇರೆ ಮೀರಿದೆ. ಸಮಾಜವೇ ಮಾದಕವಾದರೆ ಮನುಷ್ಯನ ಅಳಿವು ಉಳಿವಿನ ಪ್ರಶ್ನೆ ಗಂಭೀರವಾಗುತ್ತದೆ. ಮನುಷ್ಯತ್ವದ ಗುಣ ನಮ್ಮಿಂದ ದೂರವಾಗುತ್ತಿವೆ. ಮಹಿಳೆಗೆ ಗೌರವ ಕೊಡುವ ಕಾಲ ಬರಬೇಕು. ಶರಣರು ಮಹಿಳೆಯರನ್ನು ಕಂಡ ಗೌರವದ ನಡೆ ಈ ಕಾಲದಲ್ಲೂ ಸಾಧ್ಯವಾಗಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಎಲ್ಲ ಕಾಲಕ್ಕೂ ಸಲ್ಲುವ ಶರಣರ ಸಂದೇಶಗಳು ಮನೆ ಮನೆಯ ಪಾಠಗಳಾಗಿ ವಿಚಾರ ಆಚಾರವಾದರೆ ಸತ್ಸಮಾಜ ನಿರ್ಮಾಣ ಶಕ್ತಿಯುತವಾಗಬಲ್ಲದು. ಅಂಕೆಯಿಲ್ಲದ ಸಾಮಾಜಿಕ ವ್ಯವಸ್ಥೆಯನ್ನು ಸರಿ ಮಾಡುವ ಸಂಕಲ್ಪಒಟ್ಟಾಗಿ ನಡೆಯಬೇಕು. ಪ್ರತಿ ಮನೆಗಳು ಶರಣರ ಮಹಾಮನೆಗಳಾಗಬೇಕು. ಶರಣ ಸಾಹಿತ್ಯ ಈ ಸಮಾಜಕ್ಕೆ ಸಂಜೀವಿನಿಯಾಗುವ ಚಿಂತನೆಗಳನ್ನು ಒಳಗೊಂಡಿದೆ ಎಂದರು.ಹೇರೂರುಗುಬ್ಬಿ ನಂಜುಂಡೇಶ್ವರ ಮಠದಗುಬ್ಬಿ ನಂಜುಂಡೇಶ್ವರ ಪಂಡಿತಾರಾದ್ಯ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ತಾಲೂಕು ಶರಣ ಸಾಹಿತ್ಯಪರಿಷತ್ತಿನ ಕಾರ್ಯದರ್ಶಿ ಎಂ.ಬಿ. ಸತೀಶ ಆಶಯ ನುಡಿ ನುಡಿದರು. ನಿವೃತ್ತಉಪನ್ಯಾಸಕ ಕೆ.ಎಂ. ಬಿಜಾಪುರ, ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಮಾಳಗಿ, ಕ್ಷೇತ್ರ ಸಮನ್ವಯಾಧಿಕಾರಿ ಸಿ. ಶ್ರೀನಿವಾಸ ಮುಖ್ಯ ಅತಿಥಿಗಳಾಗಿದ್ದರು. ಸುಮಾ ಗೌಳಿ, ರುದ್ರಪ್ಪ ಓಂಕಾರಣ್ಣನವರ, ಅನಿತಾ ಉಪಲಿ, ಆರ್.ಓ. ಲಿಂಗರಾಜ ಇದ್ದರು.ದಿವ್ಯಾ ಓಂಕಾರಣ್ಣನವರ, ನೇಹಾ ಓಂಕಾರಣ್ಣನವರ, ಪೂರ್ವಿ ಬೆನ್ನೂರ, ಭೂಮಿಕಾ ರಜಪೂತ, ಮೇಘನಾ ಬಾರ್ಕಿ, ಅಕ್ಕಮಹಾದೇವಿ ಹಾನಗಲ್ಲ, ರೂಪಾ ಅಸುಂಡಿ, ರಂಜನಾ ಭಟ್, ಲಿಪಿಕಾ ವಚನಗಳನ್ನು ಹಾಡಿದರು.ಸಾವಿತ್ರಿ ಬಾರ್ಕಿ ವಚನ ಪ್ರಾರ್ಥನೆ ಹೇಳಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಂ.ಓಂಕಾರಣ್ಣನವರ ಸ್ವಾಗತಿಸಿದರು. ಅಕ್ಕಮಹಾದೇವಿ ಹಾನಗಲ್ಲ ಕಾರ್ಯಕ್ರಮ ನಿರೂಪಿಸಿದರು. ರಂಜನಾ ಭಟ್ ವಂದಿಸಿದರು.