ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ತಂದೆ-ತಾಯಿ ತಮ್ಮ ಮಕ್ಕಳು ಈ ಸಮಾಜದಲ್ಲಿ ಆದರ್ಶವಾಗಿ ಹೇಗೆ ಬೆಳೆಯಬೇಕು ಎಂಬುದನ್ನು ತಿಳಿಸಿಕೊಡುತ್ತಾರೆ. ಆದರೆ ಪ್ರಸ್ತುತದಲ್ಲಿ ಮಕ್ಕಳಲ್ಲಿ ಆಗಿರುವ ನೈತಿಕ ಅಧಃಪತನವೇ ವೃದ್ಧಾಶ್ರಮಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಮಗಂಗೋತ್ರಿ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ಎಸ್.ಜಿ. ಮಹೇಶ್ ತಿಳಿಸಿದರು.ನಗರದ ಹೊರವಲಯದಲ್ಲಿರುವ ಕಾಮಧೇನು ಸಹಕಾರಿ ವೃದ್ಧಾಶ್ರಮ ಆವರಣದಲ್ಲಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಪ್ರಸ್ತುತ ವಿದ್ಯಮಾನದಲ್ಲಿ ವೃದ್ಧರ ಸಮಸ್ಯೆಗಳು ಮತ್ತು ಅವರ ಆರೋಗ್ಯದ ಜವಾಬ್ದಾರಿಗಳ ಪಾತ್ರ ಉಪನ್ಯಾಸದಲ್ಲಿ ಸಂಪನ್ಮೂಲವ್ಯಕ್ತಿಗಳಾಗಿ ಮಾತನಾಡಿದ ಅವರು, ವಯಸ್ಸಾದ ವೃದ್ಧರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಸಮಾಜ ಕಾರ್‍ಯ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕರು ಇಡೀ ಸಮಾಜದ ಸಮಸ್ಯೆಗಳನ್ನು ಪ್ರತಿಯೊಂದು ವಿಚಾರವನ್ನು ಅಧ್ಯಯನಕ್ಕೆ ಒಳಪಡಿಸುತ್ತಾರೆ. ನಮ್ಮಲ್ಲಿರುವ ಸಾಮಾನ್ಯ ಜ್ಞಾನವು ಪ್ರಸ್ತುತದಲ್ಲಿ ಕುಂದುತಿದ್ದು, ತಾಯಿ ಮತ್ತು ತಂದೆಯನ್ನು ಆರೈಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದು ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಮನೆಯಲ್ಲಿ ತಂದೆತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ ೧೫೦೦ ವೃದ್ಧಾಶ್ರಮಗಳು ಇದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಇದೆ. ಮಕ್ಕಳಿಂದಲೇ ಹಿರಿಯರು ದೂರವಾದ ಹಿನ್ನೆಲೆಯಲ್ಲಿ ಇಂತಹ ವೃದ್ಧಾಶ್ರಮದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೈಹಿಕ ಆರೋಗ್ಯದ ಬಗ್ಗೆ ಗಮನಹರಿಸಿ ಸಕ್ಕರೆ ಕಾಯಿಲೆ, ಬಿಪಿ ಇತರೆ ಕಾಯಿಲೆಗಳನ್ನು ನೋಡಿದರೇ ಈ ಬಗ್ಗೆ ನಿಯಂತ್ರಣಕ್ಕಾಗಿ ವೈದ್ಯರ ಸಲಹೆಯಂತೆ ಸರಿಯಾದ ಸಮಯಕ್ಕೆ ವಾಕ್, ಯೋಗ ಹಾಗೂ ಮಾತ್ರೆಗಳನ್ನು ಸೇವಿಸುವುದನ್ನು ಇಂತಹ ವೃದ್ಧಾಶ್ರಮಗಳು ನಿರ್ವಹಿಸುತ್ತಿದೆ ಎಂದರು. ತಂದೆ ತಾಯಿಯಾದವರು ತಮ್ಮ ಮಕ್ಕಳನ್ನು ಆದರ್ಶವಾಗಿ ಬೆಳೆಸಿರುತ್ತಾರೆ. ಸಮಾಜದಲ್ಲಿ ಹೇಗೆ ಬೆಳೆಯಬೇಕು ಎಂಬುದನ್ನು ತಿಳಿಸಿಕೊಟ್ಟಿರುತ್ತಾರೆ. ಪ್ರಸ್ತತದಲ್ಲಿ ಮಕ್ಕಳ ವಿರೋಧಕ್ಕೆ ಹೊರಗಾಗಿ ವೃದ್ಧಾಶ್ರಮಗಳು ಹೆಚ್ಚಾಗುತ್ತ ಹೋಗುತ್ತಿದೆ. ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ಕೂಡ ಇಲ್ಲದಂತಾಗಿದೆ. ಇಂತಹ ವೇಳೆ ಸಮಾಜದ ಕಾರ್ಯಕರ್ತರು ಅಧ್ಯಯನಕ್ಕೆ ಒಳಪಡಿಸಿ ಯಾವ ಕುಟುಂಬಕ್ಕೆ ಸಮಸ್ಯೆ ಆಗಿದೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ದಿನನಿತ್ಯ ಒಳ್ಳೆ ಆಹಾರ, ವಾಕ್, ಯೋಗ ಮಾಡಿದರೇ ವಯಸ್ಸಾದವರು ತಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇಡಬಹುದು. ಮಾನಸಿಕವಾಗಿ ಘಟನೆ ಮೆಲುಕು ಹಾಕಿದಾಗ ನಿದ್ದೆ ಬರುವುದಿಲ್ಲ ಎಂದರು.ಸಮಾಜ ಕಾರ್ಯ ಇದ್ದಾಗ ಕುಟುಂಬ ಹೇಗೆ ನಡೆಸಿಕೊಂಡು ಹೋಗಬೇಕೆಂಬ ಬಗ್ಗೆ ಇಡೀ ಕುಟುಂಬಕ್ಕೆ ತಿಳಿಸಿಕೊಡಬೇಕು. ಈ ವೃದ್ಧಾಶ್ರಮ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಬಗ್ಗೆ ಗಮನಕೊಡಬೇಕು. ಸಾಮಾಜಿಕ ಸಂಬಂಧಗಳ ಬಲೆ ಸಮಾಜದೊಳಗೆ ಒಂಟಿತನ ಕಾಡಬಾರದು. ಇದರಿಂದ ಇಡೀ ದೇಹ ದೈಹಿಕವಾಗಿ ಕುಗ್ಗುತ್ತದೆ. ವೃದ್ಧರು ಆತ್ಮೀಯವಾದ ಪ್ರೀತಿಯ ಗುಣಗಳ ಬೆಳೆಸಿಕೊಳ್ಳಿ. ಮಕ್ಕಳ ಮದುವೆ ಅದ ಮೇಲೆ ಯಾರು ನೋಡಿಕೊಳ್ಳದ ಮೇಲೆ ವಯಸ್ಸಾದಂತೆ ಭಯದ ವಾತಾವರಣ ಉಂಟಾಗುತ್ತದೆ. ನೆಮ್ಮದಿ ವಾತಾವರಣ ಸೃಷ್ಠಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ ಹೇಮಗಂಗೋತ್ರಿ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ವಿನಯ್, ಕಾಮಧೇನು ಸಹಕಾರಿ ವೃದ್ಧಾಶ್ರಮದ ನಿರ್ದೇಶಕ ಕೃಷ್ಣ ಅಯ್ಯಂಗಾರ್, ಪ್ರಭುಧರ್, ಕಾಮಧೇನು ಸಹಕಾರಿ ವೃದ್ಧಾಶ್ರಮದ ಮುಖ್ಯಸ್ಥರಾದ ಪುನೀತಾ, ದಿವ್ಯ, ಶಿಲ್ಪಾ ಶಾಲಿನಿ, ಇತರರು ಉಪಸ್ಥಿತರಿದ್ದರು. ಶಾಂತಲ್ಯ ಪ್ರಾರ್ಥಿಸಿದರೆ, ಎಚ್.ಡಿ. ಅಖಿಲಾ ಸ್ವಾಗತಿಸಿದರು. ಟಿ.ಕೆ. ಭೂಮಿಕ ನಿರೂಪಿಸಿದರು.