ನೈತಿಕತೆಯ ಶಿಕ್ಷಣ ಸಾಧನೆಗೆ ಪೂರಕ

| Published : Aug 06 2024, 12:40 AM IST

ಸಾರಾಂಶ

ಕಲಿಯುತ್ತಿರುವಾಗಲೇ ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳಲ್ಲಿ ಆನ್‌ಜಾಬ್ ಟ್ರೈನಿಂಗ್‌ ನಿಯೋಜಿಸುವ ಮೂಲಕ ಹೆಚ್ಚಿನ ತಾಂತ್ರಿಕ ತರಬೇತಿ, ಕಲಿಕೆಯ ನಂತರ ಎಂತಹ ಉದ್ಯೋಗ ಆಯ್ಕೆ ಮಾಡಿಕೊಳ್ಳಬೇಕು.

ಧಾರವಾಡ:

ಆರ್ಥಿಕವಾಗಿ ಹಿಂದುಳಿದು, ಜೀವನೋಪಾಯ ಕಂಡಕೊಳ್ಳಲು ಪರಿತಪಿಸುತ್ತಿರುವ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ನಂತರ ಐಟಿಐ ತರಬೇತಿ ಅತ್ಯುತ್ತಮ ಆಯ್ಕೆ. ಮಕ್ಕಳು ಕೇವಲ ವಿದ್ಯಾಭ್ಯಾಸ ಮಾಡಿದರೆ ಸಾಲದು. ಜೀವನ ನಿರ್ವಹಣೆ ಮಾಡುವುದನ್ನು ಕಲಿಯಬೇಕು, ಅಂತಹ ಕೌಶಲ್ಯವನ್ನು ಐಟಿಐ ತರಬೇತಿ ನೀಡುತ್ತದೆ ಎಂದು ಜೆಎಸ್ಸೆಸ್‌ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಜೆಎಸ್‌ಎಸ್ ಮಂಜುನಾಥೇಶ್ವರ ಹಾಗೂ ಜೆಎಸ್‌ಎಸ್ ಕೌಶಲ್ಯ ಕೈಗಾರಿಕಾ ತರಬೇತಿ ಸಂಸ್ಥೆಗಳ ಆಶ್ರಯದಲ್ಲಿ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಅತಿಥಿ ಉಪನ್ಯಾಸ ಉದ್ಘಾಟಿಸಿದ ಅವರು, ಒಬ್ಬ ವಿದ್ಯಾರ್ಥಿ ತನ್ನ ಯಶಸ್ಸು ಪಡೆಯಬೇಕಾದರೆ ಆತನಿಗೆ ನೈತಿಕ ಶಿಕ್ಷಣ ದೊರೆಯಬೇಕು. ಅಂದಾಗ ಮಾತ್ರ ಆತನಿಗೆ ಒಳಿತು-ಕೆಡಕುಗಳ ದರ್ಶನವಾಗುತ್ತದೆ ಎಂದರು.

ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಅತಿ ಹೆಚ್ಚು ಅವಕಾಶಗಳಿವೆ. ಈಗಾಗಲೇ ನಾವು ವಿವಿಧ ಕಂಪನಿಗಳೊಂದಿಗೆ ತರಬೇತಿ ಹಾಗೂ ಉದ್ಯೋಗಕ್ಕಾಗಿ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಕಲಿಯುತ್ತಿರುವಾಗಲೇ ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳಲ್ಲಿ ಆನ್‌ಜಾಬ್ ಟ್ರೈನಿಂಗ್‌ ನಿಯೋಜಿಸುವ ಮೂಲಕ ಹೆಚ್ಚಿನ ತಾಂತ್ರಿಕ ತರಬೇತಿ, ಕಲಿಕೆಯ ನಂತರ ಎಂತಹ ಉದ್ಯೋಗ ಆಯ್ಕೆ ಮಾಡಿಕೊಳ್ಳಬೇಕು, ಕಂಪನಿಗಳಲ್ಲಿ ಉದ್ಯೋಗ ಹೇಗೆ ಮಾಡಬೇಕೆಂಬುದನ್ನು ಮೊದಲೇ ಹೇಳಿಕೊಡಲಾಗುತ್ತದೆ. ಇದರಿಂದ ತರಬೇತಿ ನಂತರ ವಿದ್ಯಾರ್ಥಿಗಳು ನೇರವಾಗಿ ಕೆಲಸಕ್ಕೆ ಸೇರಿಕೊಂಡು ತಮ್ಮ ಜೀವನೋಪಾಯಕ್ಕೆ ದಾರಿ ಮಾಡಿಕೊಳ್ಳುತ್ತಿದ್ದಾರೆ. ಆನ್‌ಜಾಬ್ ತರಬೇತಿಯಿಂದ ಬಂದ ಶಿಷ್ಯವೇತನದಿಂದ ಶಿಕ್ಷಣ ಸಾಲದ ಮರುಪಾವತಿಯ ವ್ಯವಸ್ಥೆ ಸಹ ಇಲ್ಲಿದೆ ಎಂದರು.

ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ಒಂದೇ ಕ್ಷಣದಲ್ಲಿ ವಿಕಸನ ಆಗುವಂತಹದಲ್ಲ. ಎಲ್ಲ ಮಕ್ಕಳಿಗೂ ಒಂದೇ ತರಹದ ಮೆದುಳು ಇರುತ್ತದೆ. ಯಾವ ರೀತಿ ವಿಚಾರಗಳನ್ನು ಅವರಲ್ಲಿ ತುಂಬುತ್ತೇವೆಯೋ ಹಾಗೇ ಅವರ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು.

ಪ್ರಾಚಾರ್ಯ ಮಹಾವೀರ ಉಪಾದ್ಯೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿನಾಯಕ ಗವಳಿ, ದೀಪಾ ಕುಲಕಣ ಪ್ರಾರ್ಥಿಸಿದರು. ಮಂಜುನಾಥ ಚಟ್ಟೇರ ನಿರೂಪಿಸಿದರು. ವಿದ್ಯಾ ಹಿರೇಮಠ ವಂದಿಸಿದರು.