ನೈತಿಕ ಪೊಲೀಸ್‌ಗಿರಿ ಎಂಬುದು ಆರೆಸ್ಸೆಸ್‌, ಬಜರಂಗದಳ ಕುತಂತ್ರ: ಗುಂಡೂರಾವ್‌

| Published : Feb 10 2024, 01:46 AM IST

ನೈತಿಕ ಪೊಲೀಸ್‌ಗಿರಿ ಎಂಬುದು ಆರೆಸ್ಸೆಸ್‌, ಬಜರಂಗದಳ ಕುತಂತ್ರ: ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ನೈತಿಕ ಪೊಲೀಸ್‌ಗಿರಿ ವಿರುದ್ಧ ಪೊಲೀಸ್ ಕ್ರಮವಾಗುತ್ತಿದೆ. ಇಂಥ ಕೃತ್ಯವನ್ನು ಯಾರೇ ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನೈತಿಕ ಪೊಲೀಸ್‌ಗಿರಿ ದ.ಕ ಜಿಲ್ಲೆಗೆ ಕಳಂಕ. ಈ ಕಾರಣದಿಂದಲೇ ದ.ಕ. ಜಿಲ್ಲೆಗೆ ಜನರು ಬರಲು ಒಪ್ಪುತ್ತಿಲ್ಲ. ಇದೆಲ್ಲ ಆರೆಸ್ಸೆಸ್‌, ಬಜರಂಗದಳ ಕುತಂತ್ರ ಎಂದು ಆರೋಗ್ಯ ಸಚಿವ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿಯಲ್ಲಿ ವೈಯಕ್ತಿಕ ಕಾರಣಕ್ಕೆ ಜಗಳವಾಗಿ ಮುಸ್ಲಿಂ ವ್ಯಕ್ತಿಯೊಬ್ಬರ ಮರಣ ಸಂಭವಿಸಿತ್ತು. ಅದೇ ಹಿಂದೂ ಆಗಿದ್ದರೆ ಊರೆಲ್ಲ ಬೆಂಕಿ ಹಚ್ಚುತ್ತಿದ್ದರು. ಆದರೆ ಇತ್ತೀಚೆಗೆ ನೈತಿಕ ಪೊಲೀಸ್‌ಗಿರಿ ವಿರುದ್ಧ ಪೊಲೀಸ್ ಕ್ರಮವಾಗುತ್ತಿದೆ. ಇಂಥ ಕೃತ್ಯವನ್ನು ಯಾರೇ ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಅಭಿವೃದ್ಧಿ ಮಾತಾಡಲ್ಲ: ಇಂತಹ ದ್ವೇಷ ರಾಜಕೀಯದಿಂದ ಅನಂತ್ ಕುಮಾರ್ ಹೆಗಡೆ, ಸಿಟಿ ರವಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಲಾಭ ಪಡೆದುಕೊಳ್ಳುತ್ತಾರೆ. ಅವರಿಗೆ ಇದೇ ಬಂಡವಾಳ, ಅಭಿವೃದ್ಧಿ ವಿಚಾರದಲ್ಲಿ ಮಾತನಾಡೋದಿಲ್ಲ. ಇದನ್ನೇ ಹಿಡ್ಕೊಂಡು ಜನರ ಭಾವನೆ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಈ ರಾಜಕಾರಣ ಎಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದರು.

ದ.ಕ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕ ನಿರ್ಬಂಧ ವಿಚಾರದ ಕುರಿತು ನನಗೆ ಯಾವುದೇ ದೂರು ಬಂದಿಲ್ಲ. ನನ್ನ ಗಮನಕ್ಕೆ ಯಾರೂ ತಂದಿಲ್ಲ. ಈ ವಿಚಾರ ಬಂದರೆ ಚರ್ಚೆ ಮಾಡುತ್ತೇನೆ. ಆಟಕ್ಕೋಸ್ಕರ ಮತ್ತು ಜೂಜಿಗಾಗಿ ಕೋಳಿ ಅಂಕ ಮಾಡಲಾಗುತ್ತದೆ. ಆದರೆ‌ ಜೂಜು ಹೆಚ್ಚಾದಾಗ ಕ್ರಮ ಆಗಲಿದೆ ಎಂದು ದಿನೇಶ್ ಗುಂಡೂರಾವ್‌ ಹೇಳಿದರು.

ಪೂಂಜ ಮೊಂಡುವಾದ: ‘ಹಿಂದೂಗಳ ತೆರಿಗೆ ಹಣ ಹಿಂದೂಗಳಿಗೆ ಕೊಡಬೇಕು’ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ವಿವಾದಾತ್ಮಕ ಪೋಸ್ಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಉದ್ದೇಶ ಹರೀಶ್ ಪೂಂಜ ಪೋಸ್ಟ್‌ನಲ್ಲಿಲ್ಲ. ರಾಜ್ಯ ಸರ್ಕಾರದ ವಾದದಲ್ಲಿ ಸತ್ಯಾಂಶ ಇದ್ದರೆ ಹರೀಶ್ ಪೂಂಜ ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳದೆ ಮೊಂಡುವಾದ ಪ್ರದರ್ಶನ ಮಾಡುವುದು ಸರಿಯಲ್ಲ ಎಂದರು.

ಯುಪಿಎ ಅವಧಿಯಲ್ಲಿ ಎಷ್ಟು ಹಣ ಬಂದಿದೆ, ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಹಣ ಬಂದಿದೆ ಎನ್ನುವುದು ಜನರಿಗೆ ಗೊತ್ತಿದೆ. ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಏನೂ ವೃದ್ಧಿಯಾಗಿಲ್ಲ. ಕೇಂದ್ರಕ್ಕೆ ರಾಜ್ಯದಿಂದ ಹೆಚ್ಚು ಹಣ ಹೋಗುತ್ತಿದ್ದರೂ ಕೇಂದ್ರದಿಂದ ಬರೋದು ಕಡಿಮೆಯಾಗುತ್ತಿದೆ. ಹತ್ತು ವರ್ಷದಿಂದ ಒಂದೇ ಪ್ರಮಾಣದಲ್ಲಿ ಹಣ ಬರುತ್ತಿದೆ. ಇದರ ಬಗ್ಗೆ ಬಿಜೆಪಿ ಶಾಸಕರು ಯಾರೂ ಮಾತನಾಡುತ್ತಿಲ್ಲ. ಇದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.

ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಕುರಿತು ಪ್ರತಿಕ್ರಿಯಿಸಿ, ಕಾನೂನು ಕೈಗೆ ತೆಗೆದುಕೊಳ್ಳುವುದನ್ನು ಸಹಿಸಲಾಗದು. ಇದನ್ನು ನಿಗ್ರಹಿಸುವ ಶಕ್ತಿ ಪೊಲೀಸ್ ಇಲಾಖೆಗೆ ಇದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.ಕೆಂಪಣ್ಣ ದಾಖಲೆ ನೀಡಿದರೆ ತನಿಖೆ: ಗುಂಡೂರಾವ್

ರಾಜ್ಯ ಸರ್ಕಾರದ ವಿರುದ್ದ ಕೆಂಪಣ್ಣ 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ನಮ್ಮ ಸರ್ಕಾರ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ಕೆಂಪಣ್ಣ ಅವರು ಹೇಳಿದ ವಿಷಯ ನಿಜವಾಗಿದ್ದರೆ ಸಿಎಂಗೆ ನೇರವಾಗಿ ಹೇಳಬಹುದು. ಅವರು ಯಾವ ವಿಚಾರ, ಎಲ್ಲಿ, ಏನಾಗ್ತಿದೆ ಅಂತ ಸ್ಪಷ್ಟವಾಗಿ ಹೇಳಲಿ. ನನ್ನ ಇಲಾಖೆಯಲ್ಲಿ ಆಗುತ್ತಿದ್ದರೆ ತನಿಖೆ ಮಾಡಿಸ್ತೇನೆ ಎಂದಿದ್ದಾರೆ.

ಕಳೆದ ಬಾರಿ ಅವರು ಅನೇಕ ವಿಷಯ ಪ್ರಸ್ತಾಪ ಮಾಡಿದ್ದರು. ಅದರ ತನಿಖೆ ಮಾಡಿಸ್ತಾ ಇದ್ದೇವೆ. ಅದೇ ರೀತಿ ಈಗ ಇದ್ದರೂ ಕ್ರಮ ತೆಗೆದುಕೊಳ್ಳೋಣ. ಭ್ರಷ್ಟಾಚಾರಕ್ಕೆ ಯಾವುದೇ ಸಹನೆ ಇರಬಾರದು. ನಮ್ಮಲ್ಲಿ ಯಾರಾದರೂ ಭ್ರಷ್ಟಾಚಾರ ನಡೆಸುತ್ತಿರುವ ಮಾಹಿತಿ ಇದ್ದರೆ ತನಿಖೆ ಮಾಡಿಸೋಣ ಎಂದು ಹೇಳಿದರು.ಚುನಾವಣೆ ಎದುರಿಸಲು ಗುಂಡೂರಾವ್‌ ಮಹತ್ವದ ಸಭೆ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ದಿನವಿಡಿ ಮಹತ್ವದ ಸಭೆಗಳು ನಡೆದಿವೆ.

ಜಿಲ್ಲಾ ಕಾಂಗ್ರೆಸ್‌ ವ್ಯಾಪ್ತಿಯ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ವಿವಿಧ 20 ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆ ನಡೆಸಿದ ಗುಂಡೂರಾವ್‌, ಚುನಾವಣೆ ಎದುರಿಸಲು ಅಗತ್ಯ ಸಲಹೆ ಸೂಚನೆ ನೀಡಿದರು. ವಿಶೇಷವಾಗಿ ಪ್ರತಿಯೊಂದು ಮುಂಚೂಣಿ ಘಟಕಗಳ ಪ್ರತ್ಯೇಕ ಸಭೆ ಕರೆದು ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಜಾನ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಬಾವ, ಮಿಥುನ್ ರೈ, ಇನಾಯತ್ ಅಲಿ, ಮಮತಾ ಗಟ್ಟಿ, ಕೃಪಾ ಆಳ್ವ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಮುಖಂಡರಾದ ಕಣಚೂರು ಮೋನು, ಭರತ್ ಮುಂಡೋಡಿ ಮತ್ತಿತರರು ಭಾಗವಹಿಸಿದ್ದರು.

ಬಳಿಕ ಮಾತನಾಡಿದ ದಿನೇಶ್‌ ಗುಂಡೂರಾವ್‌, ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಅನೇಕ ಕ್ರಮಗಳನ್ನು ಬಿಜೆಪಿ ಮಾಡುತ್ತಿದೆ. ಇಂಥ ಸನ್ನಿವೇಶದಲ್ಲಿ ದಕ್ಷಿಣ ಕನ್ನಡ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗೆ ಎದುರಿಸಬೇಕು, ಯಾವ ರೀತಿ ಸಂಘಟನೆ ಮಾಡಬೇಕು, ಯಾವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಇತ್ಯಾದಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಖಂಡರು ಆಸಕ್ತಿಯಿಂದ ಭಾಗವಹಿಸಿದ್ದರು. ಪಕ್ಷವನ್ನು ಹೇಗೆ ಬಲವರ್ಧನೆ ಮಾಡಬೇಕು, ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಹೇಗೆ ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಅಗತ್ಯ ಸಲಹೆ ನೀಡಲಾಗಿದೆ ಎಂದು ಹೇಳಿದರು.