ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ: ಕಲಾಪದಿಂದ ಹೊರಗುಳಿದ ವಕೀಲರು

| Published : Mar 23 2025, 01:38 AM IST

ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ: ಕಲಾಪದಿಂದ ಹೊರಗುಳಿದ ವಕೀಲರು
Share this Article
  • FB
  • TW
  • Linkdin
  • Email

ಸಾರಾಂಶ

ಮೇಲಿಂದ ಮೇಲೆ ಕನ್ನಡಿಗರ ಮೇಲೆ ಹಲ್ಲೆ ನಡೆಸುವ ಮರಾಠಿಗರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಜೊತೆಗೆ ಕನ್ನಡಿಗರಿಗೆ ರಕ್ಷಣೆ ನೀಡಬೇಕು. ಅಲ್ಲದೆ ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಎಂಇ ಎಸ್ ಸಂಘಟನೆ ನಿಷೇಧಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕನ್ನಡಿಗರ ಮೇಲಿನ ದಬ್ಬಾಳಿಕೆ ಖಂಡಿಸಿ ವಿವಿ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಪಟ್ಟಣದ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ಹೊರಗುಳಿದರು.

ಶನಿವಾರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ನೇತೃತ್ವದಲ್ಲಿ ಕಚೇರಿ ಸಭಾಂಗಣದಲ್ಲಿ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ, ನಾಡು ನುಡಿ ಕುರಿತು ಚರ್ಚೆ ನಡೆಸಿದರು.

ಬೆಳಗಾವಿಯ ಸಣ್ಣ ಗ್ರಾಮವಾದ ಬಾಳೆಕುಂದ್ರಿಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕ ಮಹದೇವ್ ಅವರ ಮೇಲೆ ನಡೆದ ಹಲ್ಲೆ ಮತ್ತು ರಾಜ್ಯದ ಗಡಿ ಭಾಗದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಸಭೆಯಲ್ಲಿ ಖಂಡಿಸಿದರು.

ಮೇಲಿಂದ ಮೇಲೆ ಕನ್ನಡಿಗರ ಮೇಲೆ ಹಲ್ಲೆ ನಡೆಸುವ ಮರಾಠಿಗರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಜೊತೆಗೆ ಕನ್ನಡಿಗರಿಗೆ ರಕ್ಷಣೆ ನೀಡಬೇಕು. ಅಲ್ಲದೆ ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಎಂಇ ಎಸ್ ಸಂಘಟನೆ ನಿಷೇಧಿಸಬೇಕು. ಕನ್ನಡಿಗರ ಹಿತ ರಕ್ಷಿಸಲು ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎನ್ನುವ ಮೂಲಕ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ ವಕೀಲರು ನ್ಯಾಯಾಲಯದ ಕಲಾಪದಿಂದ ಹೊರಗುಳಿದರು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಪವನ್ ಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಕರ್ನಾಟಕ ಬಂದ್‌ಗೆ ಬೆಂಬಲವಿಲ್ಲ.. ಎಂದಿನಂತೆ ವಹಿವಾಟು, ಜನ, ವಾಹನ ಸಂಚಾರ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮರಾಠಿ ಪುಂಡರ ವಿರುದ್ಧ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಯಾವುದೇ ಪತ್ರಿಕ್ರಿಯೆ ವ್ಯಕ್ತವಾಗಲಿಲ್ಲ.

ಬೆರಳೆಣಿಕೆಯಷ್ಟು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದ ಆವರಣದೊಳಗೆ ಕುಳಿತು ಮರಾಠಿಗರ ದಬ್ಬಾಳಿಕೆ ವಿರುದ್ಧ ಖಂಡನಾ ಘೋಷಣೆಗಳನ್ನು ಕೂಗಿದರೆ ಹೊರತು ಅವರು ಕೂಡ ಬೀದಿಗಿಳಿದು ಹೋರಾಟದ ಕಹಳೆ ಮೊಳಗಿಸಲಿಲ್ಲ.

ಪಟ್ಟಣದಲ್ಲಿ ರಸ್ತೆ ಸಂಚಾರಕ್ಕೆ ಯಾವುದೇ ರೀತಿಯ ಅಡೆತಡೆ ಎದುರಾಗಲಿಲ್ಲ. ಬಸ್ ಸಂಚಾರ ಸೇರಿದಂತೆ ಸಾರ್ವಜನಿಕರ ವಾಹನ ಸಂಚಾರ ಸಹಜವಾಗಿತ್ತು. ಆಟೋ ಸೇರಿದಂತೆ ಎಲ್ಲಾ ಬಗೆಯ ವಾಹನಗಳು ಎಂದಿನಂತೆ ಚಲಿಸಿದವು.

ಶಾಲಾ ಕಾಲೇಜುಗಳು. ಬೀದಿ ವ್ಯಾಪಾರ, ಹೋಟೆಲುಗಳು, ಅಂಗಡಿ ಮುಂಗಟ್ಟುಗಳ ವ್ಯವಹಾರ ಎಂದಿನಂತಿದ್ದವು. ಸರ್ಕಾರಿ ಕಚೇರಿಗಳು ಕೂಡ ಕಾರ್ಯನಿರ್ವಹಿಸಿದ ಪರಿಣಾಮ ಸಾರ್ವಜನಿಕರ ಓಡಾಟ ಸಾಮಾನ್ಯವಾಗಿತ್ತು. ಬಸ್ ಸಂಚಾರಕ್ಕೆ ಯಾವುದೇ ಅಡೆತಡೆ ಎದುರಾಗದ ಪರಿಣಾಮ ಗ್ರಾಮೀಣ ಪ್ರದೇಶದ ವ್ಯವಹಾರಿಕ ಚಟುವಟಿಕೆಗಳ ಮೇಲೂ ಬಂದ್ ಕರೆ ಯಾವುದೇ ಪರಿಣಾಮ ಬೀರಲ್ಲಿಲ್ಲ.