ಕನ್ನಡಪ್ರಭ ವಾರ್ತೆ ಗುಬ್ಬಿ
ಎಸ್ ಐಆರ್ ಸಮೀಕ್ಷೆ ಮಾಡುವಾಗ ಶಿಕ್ಷಕರು ಮಾನಸಿಕ ಒತ್ತಡ ಹಾಗೂ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ತಾಲೂಕು ಆಡಳಿತ ಶಿಕ್ಷಕರ ಸಮಸ್ಯೆಗಳ ಆಲಿಸಿ ಸಹಕಾರ ನೀಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಎಸ್. ಶಶಿಧರ ತಿಳಿಸಿದರು.ತಾಲೂಕು ಕಚೇರಿ ಮುಂದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಉಪ ತಹಸೀಲ್ದಾರ್ ಶಶಿಕಲಾ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಶಿಕ್ಷಕರಾದ ನಾವು ಶಿಕ್ಷಣ ಇಲಾಖೆಯ ಶೈಕ್ಷಣಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮೀಕ್ಷೆಗಳು, ಜನಗಣತಿ ಕಾರ್ಯ, ಚುನಾವಣಾ ಕಾರ್ಯ, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳು ಸೇರಿ ಅನೇಕ ಶಿಕ್ಷಣೇತರ ಸರ್ಕಾರಿ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು. ಪ್ರಸ್ತುತ ಬಿ.ಎಲ್.ಓ.ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಎಸ್.ಐ.ಆರ್. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಸಮೀಕ್ಷೆಯ ವಿಡಿಯೋ ಚಿತ್ರೀಕರಣ ಮಾಡುವುದು, ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳುವುದು, ಅವಹೇಳನಕಾರಿ ಹಾಗೂ ನಿಂದನಾತ್ಮಕವಾಗಿ ವರ್ತಿಸುವುದು ಮುಂತಾದ ಘಟನೆಗಳು ನಡೆಯುತ್ತಿದ್ದು, ಇದರಿಂದ ಹಲವಾರು ಶಿಕ್ಷಕರ ಮಾನಸಿಕ ಒತ್ತಡ, ನೆಮ್ಮದಿ ಕೆಡುತ್ತಿದೆ. ಬಿ.ಎಲ್.ಒಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಯಾವುದೇ ರೀತಿಯ ಮಾನಸಿಕ ಒತ್ತಡ ಅಥವಾ ಅನಗತ್ಯ ತೊಂದರೆಗೆ ಒಳಗಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು, ಅವರಿಗೆ ಸೂಕ್ತ ರಕ್ಷಣೆ, ನೈತಿಕ ಬೆಂಬಲ ಹಾಗೂ ಸಹಕಾರ ಒದಗಿಸಿ, ತಮ್ಮ ಕರ್ತವ್ಯವನ್ನು ನಿರ್ಭೀತಿಯಿಂದ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಖಜಾಂಚಿ ಗಂಗಾಧರಯ್ಯ ,ಪ್ರಧಾನ ಕಾರ್ಯದರ್ಶಿ ಎಂ.ಜಿ ಕಾಂತರಾಜ್, ಸಂಘಟನಾ ಕಾರ್ಯದರ್ಶಿ ಜಗದೀಶ್, ಪ್ರಧಾನ ಕಾರ್ಯದರ್ಶಿ ರಾಜಣ್ಣ, ಕೆ.ಎಂ .ರವೀಶ್, ಚನ್ನಬಸವರಾಧ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಚಂದ್ರಕಲಾ ಗುರುಪ್ರಸಾದ್, ಬಸವರಾಜು, ಮಂಜುನಾಥ್, ರಾಮಚಂದ್ರಯ್ಯ ನಾಗಭೂಷಣ್ ಇದ್ದರು.