ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು ಅಗತ್ಯ

| Published : Mar 24 2024, 01:31 AM IST

ಸಾರಾಂಶ

ಪುರಾಣ ಪ್ರವಚನ ಆಲಿಸುವುದರಿಂದ ಮಾನಸಿಕ ಮತ್ತು ದೈಹಿಕ ಬದಲಾವಣೆಯಾಗಲಿದ್ದು, ಅದರ ಮೂಲ ಆಶಯ ನೈತಿಕ ಮೌಲ್ಯವಾಗಿರುತ್ತದೆ.

ಸುರಪುರ: ಪುರಾಣ ಪ್ರವಚನ ಆಲಿಸುವುದರಿಂದ ಮಾನಸಿಕ ಮತ್ತು ದೈಹಿಕ ಬದಲಾವಣೆಯಾಗಲಿದ್ದು, ಅದರ ಮೂಲ ಆಶಯ ನೈತಿಕ ಮೌಲ್ಯವಾಗಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸಾತ್ವಿಕ ಮನೋಭಾವ ಬೆಳೆಯುತ್ತದೆ ಎಂದು ಶಹಾಪುರದ ಹಿರಿಯ ಸಾಹಿತಿ ಡಾ.ಸಿದ್ಧರಾಮ ಹೊನ್ಕಲ್ ಹೇಳಿದರು.

ನಗರದ ಕಡ್ಲಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿ 48ನೇ ಪುಣ್ಯಸ್ಮರಣೋತ್ಸವದ ಶರಣ ಚರಿತಾಮೃತ ಕಾರ್ಯಕ್ರಮದ ನಿಮಿತ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಕಡ್ಲಪ್ಪನವರ ಮಠ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿ ಪುಣ್ಯಸ್ಮರಣೋತ್ಸವದಲ್ಲಿ ಶರಣ ಚರಿತಾಮೃತ ಪ್ರವಚನದ ಮೂಲಕ ಸಂತರ, ಶರಣರ, ಮಹಾತ್ಮರ ಆದರ್ಶ ಬಿತ್ತರಿಸುತ್ತಿರುವುದು ಶ್ಲಾಘನೀಯ ಎಂದರು.

ದೇಶದ ಪ್ರಮುಖ ಆಸ್ತಿಯಾಗಿರುವ ಮಕ್ಕಳಿಗೆ ನೈತಿಕ ಮೌಲ್ಯತಿಳಿಸಿ ಉತ್ತಮವಾದ ಗುಣ ಹಾಗೂ ಅಭ್ಯಾಸ ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡುವುದು ಪಾಲಕರ ಕರ್ತವ್ಯ. ಈ ಹಿಂದೆ ಹಿರಿಯರು ಮಕ್ಕಳಿಗೆ ವಿವಿಧ ಕಥೆಗಳ ಮೂಲಕ ನೈತಿಕ ಮೌಲ್ಯ ತಿಳಿಸುತ್ತಿದ್ದರು ಎಂದು ಹೇಳಿದರು.

ಗಮಕ ಕಲೆ ಕುರಿತು ಸವಿತಾ ಸಿರಗೋಜಿ ತಿಳಿಸಿದರು. ಸುರೇಂದ್ರ ವಿಶ್ವಕರ್ಮ ಮಾತನಾಡಿದರು. ರುಕ್ಮಾಪುರ ಹಿರೇಮಠದ ಗುರುಶಾಂತ ಮೂರ್ತಿ ಶಿವಾಚಾರ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಪ್ರಭುಲಿಂಗ ಸ್ವಾಮೀಜಿ ನೇತೃತ್ವವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಪ್ರಮುಖರಾದ ಪಂಕಜ್‌ಕುಮಾರ ಜೋಶಿ, ಶಿಲ್ಪಾ ಅವಂಟಿ ಸೇರಿದಂತೆ ಇತರರಿದ್ದರು. ಎಚ್.ಠಾರೋಡ ನಿರೂಪಿಸಿದರು. ಶರಣಬಸವ ಯಾಳವಾರ ವಂದಿಸಿದರು.