ಸಾರಾಂಶ
ಕಾಮನಕೆರೆ ಮೊರಾರ್ಜಿ ವಸತಿ ಶಾಲೆಗೆ ದಿಢೀರ್ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ ಕನ್ನಡಪ್ರಭ ವಾರ್ತೆ, ಬೀರೂರು:ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಆರಂಭಿ ಸಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಸತಿ ಶಾಲೆಗಳು ಮಕ್ಕಳ ವಿದ್ಯಾರ್ಜನೆಗೆ ಸಹಕಾರಿಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪೋಷಕರ ದೂರಿನ ಮೇರೆಗೆ ಕಾಮನಕರೆ ಮೊರಾರ್ಜಿ ವಸತಿ ಶಾಲೆಗೆ ದಿಢೀರ್ ಭೇಟಿ ಸಂದರ್ಭದಲ್ಲಿ ಪತ್ರಿಕೆ ಯೊಂದಿಗೆ ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಸಮವಸ್ತ್ರ, ವೈದ್ಯಕೀಯ ಸೌಲಭ್ಯ ಮತ್ತು ಉತ್ತಮ ಶಿಕ್ಷಣ ಒದಗಿಸುವುದರಿಂದ ಈ ಶಾಲೆಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುತ್ತವೆ ಎಂದರು. ನಂತರ ಪಿಯುಸಿ ವಿಭಾಗಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕಾಲೇಜಿನಲ್ಲಿ ಉಪನ್ಯಾಸಕರು ನಿಮಗೆ ಅರ್ಥವಾಗುವಂತೆ ಪಾಠ ಪ್ರವಚನ ಮಾಡುತ್ತಿದ್ದಾರಾ? ಎಂದು ವಿಚಾರಿಸಿದರಲ್ಲದೆ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಕುಳಿತು ಶಾಸಕ ಆನಂದ್ ಭೌತ ಶಾಸ್ತ್ರ ಉಪನ್ಯಾಸಕಿ ಬೋಧಿಸಿದ ಪಾಠ ಆಲಿಸಿದರು.ನಂತರ ವಸತಿ ನಿಲಯದ ಮೇಲ್ವಿಚಾರಕರ ಕಚೇರಿಗೆ ತೆರಳಿ, ವಸತಿ ಶಾಲೆಯಲ್ಲಿ ಏನಾದರೂ ತೊಂದರೆ ಇದೆಯೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪೋಷಕರು ಶಾಲೆ ಶಿಕ್ಷಕರು ಮತ್ತು ಮೇಲ್ವಿಚಾರಕರಿಗೆ ಸ್ಥಳೀಯ ಸಂಘಟನೆ ಕೆಲವು ಖಾಸಗಿ ವ್ಯಕ್ತಿಗಳು ಸಂಘಟನೆ ಹೆಸರು ಹೇಳಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇವರಿಗೆ ಯಾವ ನೈತಿಕಥೆ ಇದೆ. ಇಲ್ಲಿ ಏನಾದರೂ ಸಂಭವಿಸಿದರೇ ಅದನ್ನು ಪ್ರಶ್ನಿಸಲು ಪೋಷಕರಿದ್ದೇವೆ. ಇಲ್ಲಿಗೆ ಬರುವ ಆಹಾರ ಪದಾರ್ಥ ಗಳನ್ನು ನೋಡಲು ಅವರಿಗೇನು ಅಧಿಕಾರ. ಸರ್ಕಾರ ನೀಡುವ ಪದಾರ್ಥಗಳನ್ನು ಅವರ ಮೇಲಾಧಿಕಾರಿಗಳು ಮಾತ್ರ ಪರಿಶೀ ಲಿಸಬೇಕು. ಇಂತಹವರಿಂದ ವಸತಿ ಶಾಲೆಗಳಿಗೆ ಕೆಟ್ಟ ಹೆಸರು ಬರುತ್ತಿದ್ದು ಇದಕ್ಕೆ ಕಡಿವಾಣ ಹಾಕ ಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಶಾಸಕ ಆನಂದ್ ಮಾತನಾಡಿ, ನಿಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಕಂಡು ಬಂದರೆ, ಪೊಲೀಸ್ ಇಲಾಖೆ ಮತ್ತು ನನ್ನ ಗಮನಕ್ಕೆ ತನ್ನಿ ಎಂದು ಬೀರೂರು ಪಿಎಸೈ ತಿಪ್ಪೇಶ್ ಗೆ ಸೂಚಿಸಿ, ವಸತಿ ನಿಲಯಕ್ಕೆ ಪ್ರತಿ ದಿನ ಭೇಟಿ ನೀಡಿ, ತೊಂದರೆ ಕೊಡುತ್ತಿರುವವರ ಬಗ್ಗೆ ಪರಿಶೀಲಿಸಿ, ಜೊತೆಗೆ ಖಾಸಗಿ ಸಂಘಟನೆಯೊಂದಿಗೆ ವಸತಿ ನಿಲಯದ ಯಾವ ಸಿಬ್ಬಂದಿ ವಿಷಯ ತಿಳಿಸುತ್ತಾರೋ ಅಂತವರ ಕಾಲ್ ಡೀಟೇಲ್ಸ್ ತೆಗೆದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದರು.ನಂತರ ವಿದ್ಯಾರ್ಥಿಗಳಿಗೆ ಈ ರಾಜ್ಯದ ಮುಖ್ಯಮಂತ್ರಿ ಯಾರು? ರಾಜ್ಯ ಸರ್ಕಾರ ಯಾವ್ಯಾವ ಉಚಿತ ಯೋಜನೆಗಳನ್ನು ನೀಡಿದೆ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳು ಪಂಚ ಉಚಿತ ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಸರ್ಕಾರ ನೀಡಿ ದ್ದಾರೆ ಇದರಿಂದ ಅನೇಕ ನಮ್ಮಂತಹ ಬಡ ವರ್ಗದವರಿಗೆ ಅನುಕೂಲವಾಗುತ್ತಿದೆ ಎಂದು ಶಾಸಕರಿಗೆ ತಿಳಿಸಿದರು.ನಂತರ ಕಾಲೇಜು ವಿದ್ಯಾರ್ಥಿಗಳು ನಾವು ಧ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನಮ್ಮ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಕಂಪ್ಯೂಟರ್ ಟ್ಯಾಬ್ ನೀಡಿದ್ದರು ಸಹ ಉಪನ್ಯಾಸಕರು ನೀಡಿಲ್ಲ ಜೊತೆಗೆ ನಮ್ಮ ಕ್ರೀಡಾ ಆಟಕ್ಕೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.ಉಪನ್ಯಾಸಕರೊಂದಿಗೆ ಚರ್ಚಿಸಿದ ಶಾಸಕ ಆನಂದ್ ವಿದ್ಯಾರ್ಥಿಗಳಿಗೆ ಮೊದಲು ಟ್ಯಾಬ್ ಕೊಡಿ, ಶಿಕ್ಷಣದಷ್ಟೇ ಆದ್ಯತೆಯನ್ನು ಕ್ರೀಡೆಗೂ ನೀಡಬೇಕು. ವಾರಕೊಮ್ಮೆ ಕ್ರಿಡಾ ಆಟೋಟಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.ವಸತಿ ಶಾಲೆಗೆ ಪೋಷಕರು ಮತ್ತು ಶಿಕ್ಷಕರನ್ನು ಹೊರತು ಪಡಿಸಿ ಯಾರೇ ಬಂದರೂ ತಕ್ಷಣವೇ ದೂರು ನೀಡಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾರೂ ಕೂಡ ಅಡ್ಡಿ ಪಡಿಸಬಾರದು ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕಾಮನಕರೆ ಗ್ರಾಪಂ ಅಧ್ಯಕ್ಷ ಶೇಖರಪ್ಪ, ಕಾಂಗ್ರೆಸ್ ಮುಂಖಂಡ ಪಂಚಾಕ್ಷರಿ, ವಸತಿ ಶಾಲೆ ಶಿಕ್ಷಕರಾದ ಅಭಿಷೇಕ್, ಜಗದೀಶ್, ಯಲ್ಲಪ್ಪ, ಸಂತೋಷ್, ಕಡೂರು , ಬೀರೂರು ಪೊಲೀಸ್ ಠಾಣೆ ಪಿಎಸೈ ಗಳಾದ ಸಜಿತ್ ಕುಮಾರ್, ತಿಪ್ಪೇಶ್, ಬಿ.ಟಿ.ಚಂದ್ರಶೇಖರ್ ಸೇರಿದಂತೆ ಮತ್ತಿತರಿದ್ದರು.1 ಬೀರೂರು 1ಬೀರೂರು ಸಮೀಪದ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಕೆ.ಎಸ್.ಆನಂದ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಲಯ ಪಾಲಕಿ ವೀಣಾ ಮತ್ತಿತರ ಸಿಬ್ಬಂದಿ ಇದ್ದರು.
1 ಬೀರೂರು 2ಬೀರೂರು ಸಮೀಪದ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಕೆ.ಎಸ್.ಆನಂದ್ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಇಲ್ಲಿನ ಮಾಹಿತಿ ಪಡೆದರು.