ಏಡ್ಸ್ ವಿರುದ್ಧ ಹೆಚ್ಚು ಅರಿವು ಅಗತ್ಯ: ನ್ಯಾಯಾಧೀಶೆ ಭಾರತಿ

| Published : Dec 05 2024, 12:31 AM IST

ಏಡ್ಸ್ ವಿರುದ್ಧ ಹೆಚ್ಚು ಅರಿವು ಅಗತ್ಯ: ನ್ಯಾಯಾಧೀಶೆ ಭಾರತಿ
Share this Article
  • FB
  • TW
  • Linkdin
  • Email

ಸಾರಾಂಶ

ಅರಿವಿನ ಕೊರತೆಯಿಂದ ಏಡ್ಸ್ ಸೋಂಕು ಹೆಚ್ಚಾಗುತ್ತಿದೆ. ಸೋಂಕಿತರನ್ನು ಸಮಾಜದಲ್ಲಿ ತಾರತಮ್ಯದಿಂದ ನೋಡಲಾಗುತ್ತಿದ್ದು ಅವರನ್ನು ಇತರರಂತೆ ಸಹಜವಾಗಿ ಕಾಣಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್ ಭಾರತಿ ತಿಳಿಸಿದರು. ಚಾಮರಾಜನಗರದಲ್ಲಿ ವಿಶ್ವ ಏಡ್ಸ್ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅರಿವಿನ ಕೊರತೆಯಿಂದ ಏಡ್ಸ್ ಸೋಂಕು ಹೆಚ್ಚಾಗುತ್ತಿದೆ. ಸೋಂಕಿತರನ್ನು ಸಮಾಜದಲ್ಲಿ ತಾರತಮ್ಯದಿಂದ ನೋಡಲಾಗುತ್ತಿದ್ದು ಅವರನ್ನು ಇತರರಂತೆ ಸಹಜವಾಗಿ ಕಾಣಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್ ಭಾರತಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚೈತನ್ಯ ನೆಟ್‌ವರ್ಕ್ ಇನ್ನಿತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರ ಮಾತನಾಡಿದರು.

ಜ್ಞಾನದ ಕೊರತೆಯಿಂದ ಏಡ್ಸ್ ಸೋಂಕು ಹೆಚ್ಚಾಗುತ್ತಿದೆ. ಇದೊಂದು ಮಾರಕ ಕಾಯಿಲೆಯಾಗಿದ್ದು ಲೈಂಗಿಕ ಆಕರ್ಷಣೆಗೆ ಒಳಗಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕೆಲ ಸಂದರ್ಭದಲ್ಲಿ ಅರಿವಿಲ್ಲದೆ ಸೋಂಕು ಹರಡುತ್ತದೆ. ಇದರಿಂದ ಬಹಳ ಜಾಗರೂಕರಾಗಿರಬೇಕು. ಎಚ್.ಐ.ವಿ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಈ ರೀತಿಯ ಅರಿವು ಕಾರ್ಯಕ್ರಮಗಳು ಇನ್ನಷ್ಟು ಆಗಬೇಕಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎಸ್ ಗುರುಪ್ರಸಾದ್ ಮಾತನಾಡಿ, ಎಚ್.ಐ.ವಿ ಸೋಂಕು ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಕೆ ಇದೆ. ಇದರಿಂದ ಅರಿವು ಮೂಡಿಸಲು ಸಾಧ್ಯವಾಗುತ್ತಿಲ್ಲ. ಏಡ್ಸ್ ಬಗ್ಗೆ ಮಾತನಾಡುವುದಕ್ಕೆ ನಾಚಿಕೆ ಪಡದೆ ತಿಳಿವಳಿಕೆ ನೀಡಬೇಕು. ನಾಟಕ ಇನ್ನಿತರ ಕಾರ್ಯಕ್ರಮಗಳ ಮೂಲಕ ಸೋಂಕು ಹರಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಸಮತಾ ಸೊಸೈಟಿಯ ದೀಪ ಬುದ್ದೆ ಮಾತನಾಡಿ, ನಮ್ಮ ಸಂಸ್ಥೆಯಿಂದ ಎಚ್.ಐ.ವಿ ವಿರುದ್ದ ನಿರಂತರವಾಗಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಒಬ್ಬರಿಂದ ಮತ್ತೊಬ್ಬರಿಗೆ ರಕ್ತ ನೀಡುವಾಗ ಸೂಜಿ, ಸಿರಂಜುಗಳನ್ನು ಬಳಸುವಾಗ ಜಾಗರೂಕರಾಗಿರಬೇಕು. ಜಾಗೃತಿಯಿಂದಲೇ ಎಚ್.ಐ.ವಿ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಎಲ್ಲರ ಜವಾಬ್ದಾರಿ ಇದೆ ಎಂದು ತಿಳಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್ ರವಿಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಪ್ರೊ. ಶಿವಸ್ವಾಮಿ, ಚೈತನ್ಯ ನೆಟ್‌ವರ್ಕ್ ಸಂಸ್ಥೆಯ ಭಾಗ್ಯಮ್ಮ, ಸ್ನೇಹ ಜ್ಯೋತಿ ಸಂಸ್ಥೆಯ ಚಂದ್ರಶೇಖರ ಪಾಟೀಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗ ಏಡ್ಸ್ ಜಾಗೃತಿ ಜಾಥಾಗೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರೆಲಾಲ್, ಇನ್ನಿತರ ಗಣ್ಯರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಈಶ್ವರ ಮಾತನಾಡಿ, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಏಡ್ಸ್ ಹರಡುತ್ತದೆ. ಈ ರೋಗದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರು ವಿಶೇಷವಾಗಿ ಜಾಗೃತರಾಗಬೇಕು ಎಂದು ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀಪತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್ ರವಿಕುಮಾರ್, ಇನ್ನಿತರ ಅಧಿಕಾರಿಗಳು ಇದ್ದರು. ಜಾಥಾ ಬಳಿಕ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಬಳಿ ಕಲಾವಿದರಾದ ಶಾಂತರಾಜು ನೇತೃತ್ವದ ರಂಗದೇಗುಲ ಕಲಾ ತಂಡದವರಿಂದ ಏಡ್ಸ್ ವಿರುದ್ದ ಜಾಗೃತಿ ಬೀದಿನಾಟಕ ಪ್ರದರ್ಶನ ನಡೆಯಿತು.