ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಕಾಡುಕೊತ್ತನಹಳ್ಳಿ ಮದ್ದೂರು ಕ್ಷೇತ್ರದಲ್ಲಿಯೇ ಅತಿ ದೊಡ್ಡ ಗ್ರಾಮ. ಹೀಗಾಗಿ ಗ್ರಾಮದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 10 ಲಕ್ಷ ರು. ವೆಚ್ಚದಲ್ಲಿ ಶ್ರೀವೀರಭದ್ರಶ್ವರ ಸಮುದಾಯ ಭವನದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ ಕೆಆರ್‌ಡಿಎಲ್‌ನಿಂದ 20 ಲಕ್ಷ ರು. ವೆಚ್ಚದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸುಮಾರು 5 ಕೋಟಿ ರು. ವೆಚ್ಚದಲ್ಲಿ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮದ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ದೇವಾಲಯಗಳ ಅಭಿವೃದ್ಧಿಗೆ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.ಈ ಹಿಂದೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಶ್ರೀವೀರಭದ್ರೇಶ್ವರ ಸಮುದಾಯ ಭವನಕ್ಕೆ ಊಟದ ಟೇಬಲ್ ಹಾಗೂ ಕುರ್ಚಿಗಳು ನೀಡಿದ್ದೆ. ಈಗ ಶಾಸಕನಾಗಿ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ಅನುದಾನ ನೀಡಿದ್ದೇನೆ ಎಂದರು.
ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿಗಾಗಿ ಸುಮಾರು 1 ಕೋಟಿ ರು. ವೆಚ್ಚದಲ್ಲಿ ರಸ್ತೆ ಚರಂಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಈಗ ಕಾಮಗಾರಿಯೂ ಮುಕ್ತಾಯದ ಹಂತದಲ್ಲಿದೆ. ಸುಸಜ್ಜಿತ ಸ್ಮಶಾನಕ್ಕಾಗಿ 20 ಲಕ್ಷ ರು.ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ತಾಪಂ ಮಾಜಿ ಅಧ್ಯಕ್ಷ ಕಪನಿಗೌಡ, ಕೆಪಿಸಿಸಿ ಸದಸ್ಯ ಎಸ್.ಚಿದಂಬರಮೂರ್ತಿ ಮುಖಂಡರಾದ ಕೆ.ಸಿ.ಮಹದೇವು, ಸ್ವಾಮಿ, ಯಡಗನಹಳ್ಳಿ ಕೆಂಚೆಗೌಡ, ಪುಟ್ಟೇಗೌಡ, ಲಕ್ಷಣ, ವೀರಭದ್ರ, ಗ್ರಾಪಂ ಮಾಜಿ ಅಧ್ಯಕ್ಷ ಜಯರಾಜು, ಸದಸ್ಯರಾದ ಈ.ರುದ್ರಯ್ಯ, ಮರಿಸ್ವಾಮಿ, ನಿವೃತ್ತ ಎಇಇ ಮಹಾದೇವಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಗ್ರಾಮಗಳು ನಗರಸಭೆಗೆ ಸೇರಿದರೆ ಸಾಕಷ್ಟು ಅಭಿವೃದ್ಧಿ, ರೈತ ಮಕ್ಕಳಿಗೆ ಉದ್ಯೋಗ: ಕೆ.ಎಂ.ಉದಯ್
ಕೆ.ಎಂ.ದೊಡ್ಡಿ:ಮದ್ದೂರು ನಗರಸಭೆ ವ್ಯಾಪ್ತಿಗೆ ಈಗಾಗಲೇ ಗ್ರಾಮಗಳು ಸೇರಿರುವುದರಿಂದ ಸಾಕಷ್ಟು ಅಭಿವೃದ್ಧಿ ಹೊಂದುವ ಜೊತೆಗೆ ಭೂಮಿ ಮೌಲ್ಯ ಹೆಚ್ಚಾಗಿ ರೈತ ಮಕ್ಕಳಿಗೆ ಉದ್ಯೋಗ ಲಭಿಸಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿ, ನಗರಸಭೆ ವ್ಯಾಪ್ತಿಯಿಂದ ಗ್ರಾಮಗಳನ್ನು ಕೈಬಿಡುವಂತೆ ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ಅಭಿವೃದ್ಧಿ ಬೇಡ ಎಂದು ಹೋರಾಟ ಮಾಡುವುದು ಎಲ್ಲರಿಗೂ ಹಕ್ಕಿದೆ. ಆದರೆ, ಗ್ರಾಮಗಳು, ನಗರಗಳ ಅಭಿವೃದ್ಧಿ ಮಾಡುವುದಷ್ಟೇ ನನ್ನ ಕೆಲಸ. ಆ ನಿಟ್ಟಿನಲ್ಲಿ ನಾನು ಕಾಯೋನ್ಮುಖನಾಗಿದ್ದೇನೆ. ನಾನು ನನ್ನ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇನೆ ಎಂದರು.ಜನರ ಮನವಿ ಹಿನ್ನೆಲೆಯಲ್ಲಿ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆ ಮಾಡಿದ್ದು, ಇದರಿಂದ ಮದ್ದೂರು ಪಟ್ಟಣ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಇದಕ್ಕೆ ಪೂರಕವಾಗಿ ತಾಲೂಕಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಪ್ರಸುತ್ತ ದಿನಗಳಲ್ಲಿ ರೈತರ ಮಕ್ಕಳು ಬರಿ ಕೃಷಿ ನಂಬಿ ಜೀವನ ಸಾಗಿಸುವುದು ಕಷ್ಟಕರ. ಕೂಲಿ ಆಳುಗಳ ಸಮಸ್ಯೆ ಎದುರಾಗಿದೆ. ರೈತ ಮಕ್ಕಳಿಗೆ ಉದ್ಯೋಗವಿಲ್ಲ. ಸ್ವತಃ ದುಡಿಮೆಗೆ ಅನುಕೂಲವಾಗಲು ಗ್ರಾಮಗಳನ್ನು ನಗರಸಭೆಗೆ ಸೇರಿಸಲಾಗಿದೆ ಎಂದರು.ಕಾಂಗ್ರೆಸ್ ಸರ್ಕಾರದ ಸಾಧನೆಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಗ್ಯಾರಂಟಿ ಯೋಜನೆಗಳ ಫಲವಾಗಿ ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನು ಪಡೆದು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.