ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆ
ನಾನು ಶಾಸಕನಾಗಿ ಆಯ್ಕೆಯಾದ ಅಂದಿನಿಂದ ಇಂದಿನವರೆಗೂ ತಾಲೂಕಿನಲ್ಲಿ ಆರೋಗ್ಯಕ್ಕೆ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲೂ ಸಹ ಇದೇ ರೀತಿಯ ಒತ್ತನ್ನು ನೀಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಚ್.ಡಿ.ಕೋಟೆ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ ಸಂಘದಿಂದ ಮಂಗಳವಾರ ನಡೆದ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹುಟ್ಟಿದ ಮಗುವಿನಿಂದಿಡಿದು ಆ ವ್ಯಕ್ತಿ ಮರಣ ಹೊಂದುವ ವರೆಗೂ ಸಹ ವೈದ್ಯರು ಸೇವೆಯನ್ನು ನೀಡುತ್ತಿದ್ದಾರೆ ಎಂದರು.ತಾಲೂಕು ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಎದ್ದು ಕಾಣುತ್ತಿದ್ದು, ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಔಷಧಗಳ ವಿತರಣೆಗೆ ಹೆಚ್ಚು ಒತ್ತು ನೀಡಲು ಬೇಡಿಕೆ ಇಡಲಾಗುವುದು ಎಂದರು.
ಒಟ್ಟು 380 ಔಷಧಗಳ ಬೇಡಿಕೆ ಇದ್ದು, ಕೇವಲ 80 ಔಷಧಗಳು ಮಾತ್ರ ಸರಬರಾಜಾಗುತ್ತಿರುವುದು ಸಹ ನನ್ನ ಗಮನಕ್ಕೆ ಬಂದಿದೆ ಎಂದರು.
ಇದೇ ತಿಂಗಳ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾಲೂಕಿಗೆ ಆಗಮಿಸುತ್ತಿದ್ದು, ಆ ವೇಳೆ ತಮ್ಮ ಬೇಡಿಕೆಗಳ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು, ಅಲ್ಲದೇ ನಿಮಗೂ ಸಹ ಅವರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗುವುದು, ಆಗ ನಿಮ್ಮ ಬೇಡಿಕೆಯನ್ನು ಸಲ್ಲಿಸಿ ಎಂದರು.
ಎಚ್.ಡಿ.ಕೋಟೆ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ರಾಮಚಂದ್ರನಾಯಕ ಮಾತನಾಡಿ, ಎಚ್.ಡಿ.ಕೋಟೆ ತಾಲೂಕು ಆರೋಗ್ಯ ಕ್ಷೇತ್ರದಲ್ಲಿ ಎಲ್ಲ ವಿಭಾಗಗಳಲ್ಲೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುತ್ತಿದೆ, ಆದರೆ ಆರೋಗ್ಯ ಇಲಾಖೆಯಲ್ಲಿ ನೌಕರರ ಸಂಖ್ಯೆ ಹೇರಳವಾಗಿ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ತಾಲೂಕು ಕೇರಳ ಗಡಿಯಲ್ಲಿರುವುದರಿಂದ, ವಿಸ್ತೀರ್ಣದಲ್ಲಿ ವಿಶಾಲ ಪ್ರದೇಶ ಇರುವುದರಿಂದ ಹಾಗೂ ಅರಣ್ಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದಾಗಿ ನೌಕರರು ತಾಲೂಕಿಗೆ ಬಂದು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ, ಇದರಿಂದಾಗಿ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇಲಾಖೆಯ ಸಿಬ್ಬಂದಿಗೆ ಏರ್ಪಡಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಲಾನ ವಿತರಿಸಲಾಯಿತು.ವಿವಿಧ 16 ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ವೈದ್ಯಾಧಿಕಾರಿ ಸಂಘದ ಅಧ್ಯಕ್ಷ ಶರತ್, ವೈದ್ಯರಾದ ರೋಹನ್, ತಿರು ಮಹದೇವಸ್ವಾಮಿ, ಕೀರ್ತಿ, ಸೋಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಜಗದೀಶ್, ಸೋಮಶೇಖರ್, ಚಂದ್ರು, ಪರಮೇಶ್, ಜಯಮ್ಮ, ಉದಯಕುಮಾರ್, ನಾಗೇಂದ್ರ, ನಿವೃತ್ತ ವೈದ್ಯ ಜಯಂತ್, ಡಿವೈಎಸ್ಪಿ ರವಿ, ಸಿಪಿಐ ಎಸ್. ಗಂಗಾಧರ್, ಮುಖಂಡರಾದ ಮಧುಕುಮಾರ್, ಅನಿಲ್, ಸುವರ್ಣ, ಮುದ್ದುಮಲ್ಲಯ್ಯ, ಪ್ರಕಾಶ್, ನಾಗರಾಜು, ಪಾಲಾಕ್ಷ, ಎಂ. ನಾಗು, ರವಿರಾಜ್ ಇದ್ದರು.