ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಒತ್ತು ನೀಡಿ

| Published : Dec 02 2024, 01:15 AM IST

ಸಾರಾಂಶ

ಸಾವಯವ ಗೊಬ್ಬರ ಮೊದಲು ಬಳಕೆ ಮಾಡಿ ನಂತರ ಅಗತ್ಯತೆ ಅವಲೋಕಿಸಿ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು

ಗದಗ: ಸಾವಯವ ಕೃಷಿ ಪದ್ಧತಿಗೆ ಮಹತ್ವ ನೀಡದಿದ್ದರೆ ಬರಲಿರುವ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸುವ ಸ್ಥಿತಿ ಬರಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೆಶಕ ಹಾಗೂ ಸಮೇತಿ (ಉತ್ತರ) ಯ ನಿರ್ದೆಶಕ ಡಾ. ಬಿ.ಡಿ. ಬಿರಾದಾರ ಹೇಳಿದರು.

ಅವರು ಗದುಗಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹೈದ್ರಾಬಾದ್‌ನ ಮ್ಯಾನೇಜ್, ಸಮೇತಿ (ಉತ್ತರ) ಕೃಷಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ದೇಶಿ ತರಬೇತಿ (ಡಿಪ್ಲೋಮಾ) ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಇಳುವರಿ ಇಳಿತ, ಭೂಮಿ ಫಲವತ್ತೆತೆಗೆ ಹಾನಿಯಾಗುವುದು, ಆದ್ದರಿಂದ ಸಾವಯವ ಗೊಬ್ಬರ ಮೊದಲು ಬಳಕೆ ಮಾಡಿ ನಂತರ ಅಗತ್ಯತೆ ಅವಲೋಕಿಸಿ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು. ಭೂಮಿ ತನ್ನ ಹದ ಕಳೆದುಕೊಳ್ಳದಂತೆ ಮುಂಜಾಗ್ರತೆ ವಹಿಸುವದು ಅಗತ್ಯ.

ಅಧಿಕ ಇಳುವರಿಗೆ ಸುಧಾರಿತ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವದು ಅಗತ್ಯವಿದೆ. ಸಂಶೋಧನೆಯ ಫಲದ ಫಲಿತಾಂಶ ಕ್ರೂಢೀಕರಿಸಿರುವ ಸುಧಾರಿತ ಬೇಸಾಯಿ ಪದ್ಧತಿ ಅನುಸರಿಸಿ. ಹೊಸ ತಂತ್ರಜ್ಞಾನ, ಬೀಜೋಪಚಾರದಿಂದ ಅಧಿಕ ಇಳುವರಿ ಪಡೆಯಬಹುದು ಎಂಬುದನ್ನು ಇಲ್ಲಿ ತರಬೇತಿ ಹೊಂದಿದ ನೀವು ರೈತರಿಗೆ ಮನವರಿಕೆ ಮಾಡಬೇಕು ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ರಾಜ್ಯ ನೋಡಲ್ ಅಧಿಕಾರಿ (ದೇಸಿ) ಹಾಗೂ ಸಮೇತಿ ಸಂಯೋಜಕ ಡಾ.ಎಸ್.ಎನ್. ಜಾಧವ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಉದ್ಯೋಗ ಅವಕಾಶಗಳು ಎಷ್ಟೇ ಸೃಷ್ಠಿಯಾಗಿದ್ದರೂ ಇವುಗಳು ಎಂದಾದರೂ ಕೈ ಕೊಡಬಹುದು ಆದರೆ ಭೂಮಿ ತಾಯಿ ಹಾಗಲ್ಲ ನಂಬಿದವರಿಗೆ ಅನ್ನದಾತೆ-ಜೀವದಾತೆ. ಕೃಷಿಯಲ್ಲಿ ವಿಫುಲವಾದ ಉದ್ಯೋಗ ಅವಕಾಶಗಳಿಗೆ ಸಾಧನೆ ಮಾಡಬೇಕೆನ್ನುವವರಿಗೆ ಅವಕಾಶಗಳು ಹೆಚ್ಚಾಗಿವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗದಗ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕಿ ಜಿ.ಎಚ್. ತಾರಾಮಣಿ, ರೈತರೊಂದಿಗೆ ನೇರ ಸಂಪರ್ಕಕ್ಕೆ ಬರುವ ಕೃಷಿ ಪರಿಕರ ವಿತರಕರಾದ ನೀವು ಇಲ್ಲಿ ಪಡೆದುಕೊಂಡ ತರಬೇತಿ ಸದುಪಯೋಗ ಮಾಡಿಕೊಳ್ಳಿ ಎಂದರು.

ತರಬೇತಿ ಪಡೆದ ಕೃಷಿ ಪರಿಕರ ವಿತರಕರಿಗೆ ಪ್ರಮಾಣ ಪತ್ರ ನೀಡಿ ಪ್ರಮಾಣ ವಚನ ಬೋಧಿಸಲಾಯಿತು. ಕೃಷಿ ವಿಜ್ಞಾನಿ ಎಸ್.ಎ. ಸೂಡಿಶೆಟ್ಟರ ಸ್ವಾಗತಿಸಿ ನಿರೂಪಿಸಿದರು. ಡಾ. ಸಿ.ಎಂ.ರಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಲ್.ಪಾಟೀಲ ಉಪಸ್ಥಿತರಿದ್ದರು. ಕೃಷಿ ವಿಜ್ಞಾನಿ ಎಸ್.ಕೆ. ಮುದ್ಲಾಪೂರ ವಂದಿಸಿದರು.