ಸಾರಾಂಶ
ಹಿರೇಕೆರೂರು: ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದ ಸಂಘಟನೆಯ ಕಡೆ ಹೆಚ್ಚಿನ ಒತ್ತು ನೀಡಬೇಕು. ಪಕ್ಷ ಸಂಘಟನೆಯಾದರೇ ಮಾತ್ರ ಪಕ್ಷವನ್ನು ಬಲಪಡಿಸಲು ಸಾಧ್ಯ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.
ಪಟ್ಟಣದ ಅವರ ಗೃಹ ಕಚೇರಿಯಲ್ಲಿ ಶನಿವಾರ ಹಿರೇಕೆರೂರ ಪಿಎಲ್‌ಡಿ ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.ಮುಂಬರುವ ಚುನಾವಣಾ ಸಂದರ್ಭದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುವದು ಮುಖ್ಯ. ಸಂಘಟನಾ ಶಕ್ತಿ ಬಲವಾಗಿದ್ದರೇ ಯಾವುದೇ ಚುನಾವಣೆಯನ್ನು ಗೆಲ್ಲಬಹುದು. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಲ್ಲಿ ರಾಜ್ಯ ಜನರನ್ನು ಕೊಳ್ಳೆ ಹೊಡೆಯುತ್ತಿದೆ.ಗಂಡನ ಹಣ ಕಿತ್ತು ಹೆಂಡತಿಗೆ ನೀಡುವ ಮೂಲಕ ಜನರಿಗೆ ಗ್ಯಾರಂಟಿ ಕೊಡುತ್ತಿದೆ.ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಕಾರ್ಯಕರ್ತರು ಸಹ ಜನರಿಗೆ ಸರಕಾರ ವೈಫಲ್ಯಗಳನ್ನು ಮನವರಿಕೆ ಮಾಡಬೇಕು. ಬಸ್ ದರ ಏರಿಕೆ ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳದಂತಾಗಿದೆ. ಇದಲ್ಲದೇ ಪ್ರತಿಯೊಂದರ ದರ ಹೆಚ್ಚಳ ನಿರಂತರವಾಗಿ ನಡೆಯುತ್ತಿದೆ. ನಮ್ಮ ಸರಕಾರ ಇದ್ದಾಗ ರೈತರಿಗೆ ಅನೇಕ ಯೋಜನೆಗಳು ಜನರಿಗೆ ದೊರೆಯುತ್ತಿದ್ದವು. ರೈತರಿಗೆ 24 ಸಾವಿರ ರು.ಗಳಲ್ಲಿ ಸಿಗುತ್ತಿದ್ದ ಟ್ರಾನ್ಸಫಾರ್ಮರ್ ದರವನ್ನು ಇಂದು 1 ಲಕ್ಷ 50 ಸಾವಿರಕ್ಕೂ ಹೆಚ್ಚು ಮಾಡಿದ್ದು, ರೈತರು ಆರ್ಥಿಕವಾಗಿ ಪರದಾಡುವಂತಾಗಿದೆ. ಬಾಂಡ್ ಪೇಪರ್ ಬೆಲೆ, ರೈತರಿಗೆ ಸಬ್ಸಿಡಿ ದರದಲ್ಲಿ ಸಿಗುವ ಪೈಪುಗಳ ಬೆಲೆ ಹೆಚಿಸಿರುವುದು ಹಾಗೂ ದಿನನಿತ್ಯದ ವಸ್ತುಗಳ ಗಗನಕ್ಕೇರಿದ್ದು, ಮದ್ಯಮ ವರ್ಗದ ಜನರು ಜೀವನ ಸಾಗಿಸುವುದು ಕಷ್ಟಸಾಧ್ಯವಾಗಿದೆ ಎಂದರು.
ಇದೇ ವೇಳೆ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಾವರಗಿ ಕ್ಷೇತ್ರದ ವೆಂಕಟೇಶ ಹಂಚಿನಮನಿ, ಚಿನ್ನಮುಳಗುಂದ ಕ್ಷೇತ್ರದ ಮಹೇಶ ಅಗಸನಹಳ್ಳಿ, ಚಿಕ್ಕೇರೂರ ಕ್ಷೇತ್ರದ ತಿರುಕಮ್ಮ ಸಪ್ಪಾಳಿ ಹಾಗೂ ಕೋಡ ಕ್ಷೇತ್ರದ ಮಹೇಶ ಸಪ್ಪಾಳೆ ಅವರನ್ನು ಸನ್ಮಾನಿಸಲಾಯಿತು.ಈ ಸಂದಭದಲ್ಲಿ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಪಪಂ ಸದಸ್ಯ ಹನುಮಂತಪ್ಪ ಕುರಬರ್, ಪಕ್ಷದ ಮುಖಂಡರಾದ ಮಾಲತೇಶ ಗಂಗೋಳ, ಜಗದೇಶ ದೊಡಗೌಡ್ರ, ಪ್ರದೀಪ ಪಾಟೀಲ, ಹುಚ್ಚನಗೌಡ ಕಬ್ಬಕ್ಕಿ, ನಾಗರಾಜ ಬಣಕಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.