ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲೆಯಲ್ಲಿ ಕೃಷಿ ಜೊತೆಗೆ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.ತಾಲೂಕಿನ ಈರೇಗೌಡ ದೊಡ್ಡಿ ಗ್ರಾಮದಲ್ಲಿ ಸಮಾಜ ಸೇವಕ ಸಿ.ಟಿ.ಶಂಕರ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಮಾತ್ರ ಇವೆ. ಇಲ್ಲಿ ಬೃಹತ್ ಕೈಗಾರಿಕೆಗಳ ಪ್ರದೇಶ ತಲೆಯೆತ್ತಿದರೆ ಆಗ ಸಾಕಷ್ಟು ಪ್ರಮಾಣದಲ್ಲಿ ಹಣ ಹೂಡಿಕೆಯಾಗುವುದರ ಜೊತೆಗೆ ಯುವ ಜನರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ ಎಂದು ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮದ್ದೂರು, ಮಂಡ್ಯ, ಚನ್ನಪಟ್ಟಣ ಹಾಗೂ ಕುಣಿಗಲ್ ಶಾಸಕರು ಹೆಚ್ಚಿನ ಆಸಕ್ತಿ ವಹಿಸಬೇಕು. ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಭೂಮಿ ಒದಗಿಸಲು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕ್ಷೇತ್ರದ ಶಾಸಕ ಉದಯ್ ಸೇರಿದಂತೆ ನಾವೆಲ್ಲರೂ ವಿಶೇಷ ಒತ್ತು ನೀಡುತ್ತಿದ್ದೇವೆ. ಜಿಲ್ಲೆಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರುಗಳು ಶ್ರಮಿಸುತ್ತಿದ್ದಾರೆ ಎಂದರು.
ನೀರಾವರಿ ಸಮಸ್ಯೆ, ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ದೊರಕಲಿದೆ. ಅದೇ ರೀತಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ವಿರೋಧ ಪಕ್ಷಗಳು ಸಹಕಾರ ನೀಡಬೇಕು ಮನವಿ ಮಾಡಿದರು.ಒಕ್ಕಲಿಗರು ಬೆಳೆಯಬಾರದೆಂದು ಎಚ್ಡಿಕೆ ಉದ್ದೇಶ: ಕೆ.ಎಂ.ಉದಯ್ ವಾಗ್ದಾಳಿ
ಮದ್ದೂರು:ಒಬ್ಬ ರೈತನ ಮಗ ಅಭಿವೃದ್ಧಿ ಕೆಲಸ ಮಾಡಿದರೆ ಅವರಿಂದ ಸಹಿಸಲಾಗುತ್ತಿಲ್ಲ. ಒಕ್ಕಲಿಗರು ಬೆಳೆಯಬಾರದು ಎಂಬ ಉದ್ದೇಶದಿಂದ ಇಲ್ಲಿಗೆ ಬಂದು ನಮ್ಮನ್ನು ಟೀಕೆ ಮಾಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಕೆ.ಎಂ.ಉದಯ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದರು.
ತಾಲೂಕಿನ ಈಡಿಗರ ದೊಡ್ಡಿ ಗ್ರಾಮದಲ್ಲಿ ಸಮಾಜ ಸೇವಕ ಸಿ.ಟಿ.ಶಂಕರ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಬಡವರ ಮನೆಯಿಂದ ಬಂದು ಜನರ ಕಷ್ಟ-ಸುಖ ಅರಿತಿದ್ದೇನೆ. ಜನರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ ಎಂದರು.ಚಾಕನಕೆರೆಗೆ ನಾನು ಈ ಹಿಂದೆ ಬಾಗಿನ ಅರ್ಪಿಸಿದ್ದೆ. ಇದನ್ನು ಸಹಿಸದ ಕೆಲವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರೆಸಿ ಬಾಗಿನ ಬಿಡಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಅವರದೇ ಪಕ್ಷದ ಶಾಸಕರು ಕ್ಷೇತ್ರದಲ್ಲಿದ್ದರೂ ಸಹ ಆಗ ಕೆರೆಗೆ ಇವರಿಂದ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ ಎಂದು ಟೀಕಿಸಿದರು.
ಕುಮಾರಸ್ವಾಮಿ ಮತ್ತು ಅವರ ಕುಟುಂಬದವರ ಕಣ್ಣೀರು ಮತ್ತು ಭಾವನಾತ್ಮಕ ಮಾತುಗಳಿಗೆ ಇನ್ನು ಮುಂದೆ ಜನ ಮರುಳಾಗುವುದಿಲ್ಲ. ಇಷ್ಟು ದಿನ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕಣ್ಣೀರು ಮತ್ತು ಭಾವನಾತ್ಮಕ ಮಾತುಗಳಿಂದ ಜನರನ್ನು ಮರಳು ಮಾಡುತ್ತಿದ್ದರು. ಈಗ ಬುದ್ಧಿವಂತರಾಗಿರುವ ಜನರು ಯಾವುದೇ ಕಾರಣಕ್ಕೂ ಕುಮಾರಸ್ವಾಮಿಯವರ ಕುಟುಂಬದ ಮಾತುಗಳನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ವ್ಯಂಗ್ಯವಾಡಿದರು.