ಸಾರಾಂಶ
ಆನಂದಪುರಂನಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಲೋಕಾರ್ಪಣೆ ಮಾಡಿ, ವೇದಿಕೆ ಕಾರ್ಯಕ್ರಮವನ್ನು ಶಾಸಕ ಅರಣ್ಯ ಹಾಗೂ ಕೈಗಾರಿಕಾ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಆನಂದಪುರ
ಗ್ರಾಮ ಆಡಳಿತಗಳು ಸುಧಾರಣೆಯಾಗಬೇಕಾದರೆ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಶಾಸಕ, ಅರಣ್ಯ ಮತ್ತು ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.ಇಲ್ಲಿನ ಆನಂದಪುರದಲ್ಲಿ ನಿರ್ಮಿಸಿರುವ ಭಾರತ್ ನಿರ್ಮಾಣ ಸೇವಾ ಕೇಂದ್ರದ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮಾಡಳಿತಗಳು ಜನಸಾಮಾನ್ಯರ ಸಮಸ್ಯೆಯನ್ನು ಪರಿಹರಿಸುವಲ್ಲಿ ಮುಂದಾಗಬೇಕು ಎಂದರು.
ಗ್ರಾಮದ ಜನರ ಸೇವೆಯನ್ನು ಮಾಡುವಂತಹ ಈ ಗ್ರಾಮಸೌಧದ ಅಡಿ ಪಕ್ಷ ಭೇದ ಮರೆತು ಎಲ್ಲರೂ ಅಭಿವೃದ್ಧಿಯ ಕಡೆ ಚಿಂತಿಸಬೇಕು. ಸಾಗರ ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳು ಪ್ರತಿ ವಾರ್ಡಿಗೂ 2 ರಿಂದ 3 ದಿನಕ್ಕೆ ಒಮ್ಮೆ ಔಷಧಿ ಸಿಂಪಡನೆ ಮಾಡಬೇಕು. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕಾಗಿದೆ ಎಂದು ಹೇಳಿದರು.ಸಾಗರ ಸರ್ಕಾರಿ ಆಸ್ಪತ್ರೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ 1.85 ಲಕ್ಷ ರು. ವೆಚ್ಚದಲ್ಲಿ ನವೀಕರಿಸಲಾಗುವುದು. 25 ಡಯಾಲಿಸಿಸ್ ಯಂತ್ರವನ್ನು ಅಳವಡಿಸಲಾಗುತ್ತಿದೆ. ಪಿಜೋಯೋ ಥೆರಪಿ ಮೂರು ಯಂತ್ರಗಳಿದ್ದು ಮುಂದಿನ ದಿನದಲ್ಲಿ 25 ಯಂತ್ರಗಳನ್ನು ಅಳವಡಿಸಲಾಗುವುದು ಎಂದರು.
ಆನಂದಪುರ ಸಮುದಾಯ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಕ್ಕಾಗಿ 60 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಪ್ರತಿಯೊಂದು ವಾರ್ಡುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ 1994 ರಿಂದ 2024 ವರೆಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಪಂಚಾಯತ್ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ಅಧಿಕಾರಿ ವರ್ಗದವರ ಸಹಕಾರದಿಂದ ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಪಂಚಾಯತ್ ಕಟ್ಟಡ ನಿರ್ಮಾಣ ಮಾಡಿದ್ದು. ಇದರಲ್ಲಿ ಪ್ರತಿಯೊಂದು ಇಲಾಖೆಗಳ ವಿಭಾಗಗಳನ್ನು ಮಾಡಲಾಗಿದ್ದು. ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಪರಿಹಾರ ಸಿಗಲಿದೆ ಎಂದರು.
ಉಪಾಧ್ಯಕ್ಷ ರೂಪ ಲತಾ, ಸದಸ್ಯರಾದ ಸುಶೀಲಮ್ಮ, ರಾಘವೇಂದ್ರ, ವೆಂಕಟೇಶ್, ಚೌಡಪ್ಪ, ರೇಖಾ ಹರೀಶ್ , ಲಲಿತಮ್ಮ, ಸೌಮ್ಯ , ಸಿರಿಜಾನ್, ಗುರುರಾಜ್, ಮೂಕಾಂಬು, ಗಜೇಂದ್ರ, ನವೀನ, ಶಂಕರ್, ಮೋಹನ್ ಕುಮಾರ್, ನೇತ್ರಾವತಿ, ಪಿಡಿಒ ಮಂಜ ನಾಯಕ್, ಸೋಮಶೇಖರ್ ಲೌಗೆರೆ, ರವಿಕುಮಾರ ದಾಸ್ ಕೊಪ್ಪ, ತಾಲೂಕು ಅಧಿಕಾರಿಗಳಾದ ಅನಿಫ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.