ಪಿಎಂಶ್ರೀ ಸರ್ಕಾರಿ ಮಾದರಿ ಶಾಲೆಗೆ ಹೆಚ್ಚಿನ ಅನುದಾನ: ಎಂ.ವಿವೇಕಾನಂದ

| Published : Mar 03 2025, 01:47 AM IST

ಪಿಎಂಶ್ರೀ ಸರ್ಕಾರಿ ಮಾದರಿ ಶಾಲೆಗೆ ಹೆಚ್ಚಿನ ಅನುದಾನ: ಎಂ.ವಿವೇಕಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಕೋಟೆಕಲ್ ಪಿಕೆಪಿಎಸ್ ದತ್ತು ಪಡೆದು ₹1 ಲಕ್ಷ ದತ್ತು ನಿಧಿ ಇಟ್ಟಿರುವುದು, ಹಳೆಯ ವಿದ್ಯಾರ್ಥಿಗಳ ಸಂಘ ಶಾಲೆ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿರುವುದು ಶ್ಲಾಘನೀಯ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಹುಲ್ಲಿಕೇರಿ ಎಸ್.ಪಿ. ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಶಾಲೆಯ ಉನ್ನತೀಕರಣಕ್ಕೆ ಇಲಾಖೆ ಎಲ್ಲ ಸಹಕಾರ ನೀಡಲಿದೆ. ಇನ್ಮುಂದೆ ಶಾಲೆಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ವಿವೇಕಾನಂದ ಹೇಳಿದರು.

ಶನಿವಾರ ತಾಲೂಕಿನ ಹುಲ್ಲಿಕೇರಿ ಎಸ್.ಪಿ. ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆದ ಚಿಣ್ಣರ ಉತ್ಸವ ಕಾರ್ಯಕ್ರಮದಲ್ಲಿ ಪಿಎಂಶ್ರೀ ಶಾಲೆ ಉದ್ಘಾಟಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಕಲಿಕೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ದೊಡ್ಡದು ಎಂದು ಹೇಳಿದರು. ಗ್ರಾಮದ ಶಿಕ್ಷಕರ ಮತ್ತು ಶಿಕ್ಷಣ ವ್ಯವಸ್ಥೆ ಬಗ್ಗೆ ನನಗೆ ಮೆಚ್ಚುಗೆ ಇದೆ. ಈ ಶಾಲೆಯಲ್ಲಿ 430ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಕೋಟೆಕಲ್ ಪಿಕೆಪಿಎಸ್ ದತ್ತು ಪಡೆದು ₹1 ಲಕ್ಷ ದತ್ತು ನಿಧಿ ಇಟ್ಟಿರುವುದು, ಹಳೆಯ ವಿದ್ಯಾರ್ಥಿಗಳ ಸಂಘ ಶಾಲೆ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಚಿಣ್ಣರ ಉತ್ಸವ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಗ್ರಾಮೀಣ ಬಡ ಪ್ರತಿಭಾವಂತ ಮಕ್ಕಳ ಭವಿಷ್ಯ ಉಜ್ವಲವಾಗಬೇಕು. ಅವರ ಕಲಿಕೆಗೆ ಯಾವುದೇ ಕೊರತೆಯಾಗಬಾರದು. ಆ ನಿಟ್ಟಿನಲ್ಲಿ ಕೋಟೆಕಲ್ ಪಿಕೆಪಿಎಸ್ ಮಹತ್ವದ ನಿರ್ಧಾರ ತೆಗೆದುಕೊಂಡು ಮತಕ್ಷೇತ್ರದ ಇನ್ನೂ ಕೆಲವು ಶಾಲೆ ದತ್ತು ಪಡೆದುಕೊಂಡಿದೆ. ಹುಲ್ಲಿಕೇರಿ ಎಸ್.ಪಿ. ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಶಾಲೆಯನ್ನು ಕೋಟೆಕಲ್ ಕೃಷಿ ಪತ್ತಿನ ಸಹಕಾರಿ ಸಂಘದಿಂದ ದತ್ತು ಪಡೆದುಕೊಂಡು ಒಂದು ಲಕ್ಷ ರುಪಾಯಿ ದತ್ತು ನಿಧಿ ಘೋಷಣೆ ಮಾಡುತ್ತಿದ್ದೇವೆ. ಪ್ರತಿವರ್ಷ ಈ ನಿಧಿಯಿಂದ ಬರುವ ಬಡ್ಡಿ ಹಣ ಶಾಲೆಯ ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಹೇಳಿದರು.

ಬಾದಾಮಿಯ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ ದೊಡ್ಡಪ್ಪನವರ ಮಾತನಾಡಿ, ಶಾಲೆ ಅಭಿವೃದ್ಧಿಗೆ ಎಸ್.ಡಿ.ಎಂ.ಸಿ. ಅವರ ಸಹಕಾರ ಅಗತ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ನಾಗರಾಜ್ ಎಚ್. ಮಾತನಾಡಿ, ಶಾಲೆಯು ಎಲ್ಲಾ ರಂಗಗಳಲ್ಲೂ ಇಡೀ ಜಿಲ್ಲೆಯಲ್ಲೇ ಮಾದರಿಯಾಗಿದೆ ಎಂದು ಬಣ್ಣಿಸಿದರು.

ವೇದಿಕೆ ಮೇಲೆ ಜಿಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ರಾಠೋಡ, ಆಸೆಂಗೆಪ್ಪ ನೆಕ್ಕರಗುಂದಿ, ಗ್ರಾಪಂ ಅಧ್ಯಕ್ಷ ಆನಂದ ರಾಠೋಡ , ಸಿ.ಆರ್.ಪಿ. ರಾಮಚಂದ್ರ ಬಾಪಟ, ಮಾಜಿ ಗ್ರಾಪಂ ಅಧ್ಯಕ್ಷ ರಮೇಶ ಬೂದಿಹಾಳ , ಎಸ್ಡಿಎಂಸಿ ಸದಸ್ಯ ಥವರೆಪ್ಪ ರಾಠೋಡ, ಪಂಡಿತ ರಾಠೋಡ, ಮುತ್ತಪ್ಪ ಜಾಧವ, ಲಾಲಸಾಬ ವಾಲಿಕಾರ, ಶಾಲೆಯ ಮುಖ್ಯಗುರು ರವಿಚಂದ್ರ ಬೇನಾಳ, ನೌಕರರ ಸಂಘದ ಅಧ್ಯಕ್ಷ ಪಿ.ವಿ. ಜಾಧವ ಹಾಗೂ ಶಾಲಾ ಸಿಬ್ಬಂದಿ, ಗ್ರಾಮಸ್ಥರು ಇದ್ದರು.