ಕಾಫಿ ದಸರಾದಿಂದ ರೈತರಿಗೆ ಹೆಚ್ಚಿನ ಮಾಹಿತಿ: ಮಂತರ್‌ ಗೌಡ ಸಲಹೆ

| Published : Sep 26 2024, 11:45 AM IST / Updated: Sep 26 2024, 11:46 AM IST

ಸಾರಾಂಶ

ಮಡಿಕೇರಿ ದಸರಾ ಉತ್ಸವದಲ್ಲಿ ಅ.6 ಮತ್ತು 7 ರಂದು ಆಯೋಜಿತ ಕಾಫಿ ದಸರಾ ಸಂಬಂಧಿತ ಜಿಲ್ಲೆಯ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪೂರ್ವಭಾವಿ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ಆಯೋಜಿತ ಕಾಫಿ ದಸರಾ ಯಶಸ್ವಿಗೊಳಿಸುವುದರೊಂದಿಗೆ ಕೃಷಿಕ ವರ್ಗಕ್ಕೆ ಹೆಚ್ಚಿನ ಮಾಹಿತಿ ದೊರಕುವಂತಾಗಬೇಕೆಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದ್ದಾರೆ.

ಮಡಿಕೇರಿ ದಸರಾ ಉತ್ಸವದಲ್ಲಿ ಅ.6 ಮತ್ತು 7 ರಂದು ಆಯೋಜಿತ ಕಾಫಿ ದಸರಾ ಸಂಬಂಧಿತ ಜಿಲ್ಲೆಯ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.ಮಕ್ಕಳ ದಸರಾ, ಮಹಿಳಾ ದಸರಾ, ಯುವದಸರಾ, ಜಾನಪದ ದಸರಾದಂತೆಯೇ ಕಾಫಿ ದಸರಾ ಕೂಡ ಜನಾಕರ್ಷಣೆ ಪಡೆಯಬೇಕು, ಜಿಲ್ಲೆಯಾದ್ಯಂತದ ಕೃಷಿಕರಿಗೆ ಕಾಫಿ ದಸರಾ ಉತ್ಸವದ ಪ್ರಯೋಜನ ದೊರಕುವಂತಾಗಬೇಕು, ಕಾಫಿಗೆ ಸಂಬಂಧಿಸಿದ ಮಾಹಿತಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳು, ಕೃಷಿ ಪದ್ಧತಿ, ಜೇನು ಕೃಷಿ, ಬಿದಿರು ಕೃಷಿ, ಹೈನೋದ್ಯಮ ಸೇರಿದಂತೆ ಪರ್ಯಾಯ ಕೃಷಿ ಮಾಹಿತಿಯೂ ಕಾಫಿ ದಸರಾದಲ್ಲಿ ದೊರಕಬೇಕೆಂದು ಸಲಹೆ ನೀಡಿದರು,ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಸೇರಿದಂತೆ ಕಾಫಿ ಮತ್ತು ಇತರ ಕೃಷಿ ತಜ್ಞರನ್ನೂ ಕಾಫಿ ದಸರಾಕ್ಕೆ ಆಹ್ವಾನಿಸಿ ಉತ್ತಮ ಮಾಹಿತಿ ಬೆಳೆಗಾರರಿಗೆ ನೀಡುವಂತೆಯೂ ಮಂತರ್ ಗೌಡ ಸೂಚಿಸಿದರು.

ಉತ್ತಮ ಗುಣಮಟ್ಟದಲ್ಲಿ ಮಳಿಗೆಗಳನ್ನು ನಿರ್ಮಿಸಿ ಎಲ್ಲ ಸೌಲಭ್ಯ ಒದಗಿಸಬೇಕು, ಮಳಿಗೆಗಳಲ್ಲಿ ಕಾಫಿ ಕೆಫೆ ತೆರೆಯುವ ಮೂಲಕ ಕಾಫಿ ಕ್ಷೇತ್ರದ ನವೀನತೆಯ ಪರಿಚಯ ಮಾಡಿಕೊಡಬೇಕೆಂದೂ ಮಂತರ್ ಗೌಡ ಹೇಳಿದರು.

ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಉತ್ಸವದಲ್ಲಿ 32 ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಅ.6ರಂದು ಬೆಳಗ್ಗೆ 10ರಿಂದ ರಾತ್ರಿ 7ರ ವರೆಗೆ ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದರು.

ವೇದಿಕೆಯಲ್ಲಿ ಎರಡೂ ದಿನಗಳ ಕಾಲ ಮಧ್ಯಾಹ್ನ 11 ಗಂಟೆಯಿಂದ 1 ಗಂಟೆಯವರೆಗೂ ಕೃಷಿ ರಂಗಕ್ಕೆ ಸಂಬಂಧಿಸಿದ ವಿಚಾರಸಂಕಿರಣಗಳನ್ನು ಬೆಳೆಗಾರ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಕಾಫಿ ಸೇರಿದಂತೆ ಕೃಷಿ ಕ್ಷೇತ್ರದ ಆಗುಹೋಗುಗಳ ಬಗ್ಗೆ ಕೃಷಿಕರಿಗೆ ತಜ್ಞರು ಮಾಹಿತಿ ನೀಡುವಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಕೊಡಗಿನ ಕಾಫಿ ಕೃಷಿಕರಿಗ ವಿವಿಧ ಕೃಷಿ ವಿಚಾರದಲ್ಲಿ ಸೂಕ್ತ ಮಾಹಿತಿ ತಿಳಿವಳಿಕೆ ನಿಟ್ಟಿನಲ್ಲಿ ಕಾಫಿ ದಸರಾ ಒಂದು ಉತ್ತಮ ಪ್ರಯತ್ನವಾಗಿದೆ ಎಂದರು.

ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ರಾಜೀವ್ ಮಾತನಾಡಿ, ಕಾಫಿ ಜಿಲ್ಲೆಯಾದ ಕೊಡಗಿನ ದಸರಾ ಉತ್ಸವದಲ್ಲಿ ಕಾಫಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ಸಂಘದ ನಿರ್ದೇಶಕ ಕೆ.ಕೆ.ವಿಶ್ವನಾಥ್ ಮಾತನಾಡಿ, ಕಾಫಿ ದಸರಾದಲ್ಲಿ ಪಾಲ್ಗೊಂಡ ಕೃಷಿಕ ಸಮುದಾಯದವರು ವಿಷಯ ತಜ್ಞರೊಂದಿಗೆ ಪ್ರಶ್ನೆಗಳನ್ನು ಕೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ, ಖಜಾಂಚಿ ಅರುಣ್ ಶೆಟ್ಟಿ ಕಾಫಿ ದಸರಾಕ್ಕೆ ಸಮಿತಿಯಿಂದ ಸಹಕಾರ ನೀಡುವುದಾಗಿ ಹೇಳಿದರು.

ಕಾಫಿ ಮಂಡಳಿ, ತೋಟಗಾರಿಕೆ, ಚೆಸ್ಕಾಂ, ನಗರಸಭೆ, ಕೃಷಿ ಇಲಾಖೆ, ಕೈಗಾರಿಕಾ ಅಭಿವೃದ್ದಿ ಇಲಾಖೆ, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.