ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಸ್ವಂತ ಭೂಮಿ ಹೊಂದಿರುವವರು ನಾಲ್ಕು ಜಾತಿಗಳು ಮಾತ್ರ!

| N/A | Published : Aug 18 2025, 12:00 AM IST / Updated: Aug 18 2025, 10:49 AM IST

Land
ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಸ್ವಂತ ಭೂಮಿ ಹೊಂದಿರುವವರು ನಾಲ್ಕು ಜಾತಿಗಳು ಮಾತ್ರ!
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟಜಾತಿಯ 101 ಜಾತಿಗಳಲ್ಲಿ ಸ್ವಂತ ಭೂಮಿ ಹೊಂದಿರುವವರಲ್ಲಿ ಪ್ರಾಬಲ್ಯ ಹೊಂದಿರುವುದು ಕೇವಲ ನಾಲ್ಕು ಜಾತಿಗಳು ಮಾತ್ರ!

 ಬೆಂಗಳೂರು :  ಪರಿಶಿಷ್ಟಜಾತಿಯ 101 ಜಾತಿಗಳಲ್ಲಿ ಸ್ವಂತ ಭೂಮಿ ಹೊಂದಿರುವವರಲ್ಲಿ ಪ್ರಾಬಲ್ಯ ಹೊಂದಿರುವುದು ಕೇವಲ ನಾಲ್ಕು ಜಾತಿಗಳು ಮಾತ್ರ!

ಹೀಗಂತ ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾ.ನಾಗಮೋಹನದಾಸ್‌ ಆಯೋಗ ನಡೆಸಿರುವ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಾಲ್ಕು ಜಾತಿಗಳು ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ.

ಸ್ವಂತ ಭೂಮಿ ಹೊಂದಿದ ಕುಟುಂಬಗಳ ಪೈಕಿ 26.77 ಲಕ್ಷ ಕುಟುಂಬಗಳು 5 ಎಕರೆಗಿಂತ ಕಡಿಮೆ ಅಥವಾ ಭೂಮಿಯನ್ನೇ ಹೊಂದಿಲ್ಲದ ವರ್ಗದಲ್ಲಿದ್ದಾರೆ. ಉಳಿದ 60 ಸಾವಿರ ಕುಟುಂಬಗಳು 5ರಿಂದ 15 ಎಕರೆ ಮತ್ತು 23 ಸಾವಿರ ಕುಟುಂಬಗಳು ಮಾತ್ರ 15 ಎಕರೆಗಿಂತ ಹಚ್ಚಿನ ಭೂಮಿ ಹೊಂದಿವೆ. ಹೀಗೆ ಭೂಮಿ ಹೊಂದಿದ ಕುಟುಂಬಗಳಲ್ಲಿ ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ ಉಪಜಾತಿಯ ಕುಟುಂಬಗಳದ್ದೇ ಸಿಂಹಪಾಲಿದೆ.

5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಉಪಜಾತಿಗಳಲ್ಲಿ ನಾಲ್ಕು ಜಾತಿಗೆ ಸೇರಿದ ಕುಟುಂಬಗಳ ಸಂಖ್ಯೆ 19.50 ಲಕ್ಷ (ಶೇ.72.84), ಉಳಿದ 97 ಉಪಜಾತಿಗಳ ಕುಟುಂಬಗಳ ಸಂಖ್ಯೆ 7.27 ಲಕ್ಷ (ಶೇ. 27.16), ಹಾಗೆಯೇ, 5ರಿಂದ 15 ಎಕರೆ ಹೊಂದಿರುವವರಲ್ಲಿ ನಾಲ್ಕು ಉಪಜಾತಿಗಳ 38,636 (ಶೇ. 64.18) ಕುಟುಂಬಗಳಿದ್ದರೆ, ಉಳಿದ 21,563 ಕುಟುಂಬಗಳು 97 ಉಪಜಾತಿಗೆ ಸೇರಿದ್ದಾಗಿವೆ. ಉಳಿದಂತೆ 15 ಎಕರೆಗಿಂತ ಹೆಚ್ಚು ಭೂಮಿ ಹೊಂದಿದವರಲ್ಲಿ ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ ಉಪಜಾತಿಗೆ ಸೇರಿದ 16,507 (ಶೇ.71.61) ಕುಟುಂಬಗಳಿದ್ದರೆ, 6,543 (ಶೇ.28.39) ಕುಟುಂಬಗಳು ಉಳಿದ 97 ಉಪಜಾತಿಗಳಿಗೆ ಸೇರಿದವಾಗಿವೆ.

ಗುಡಿಸಲ ವಾಸ!:

ಇನ್ನು ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ 25.34 ಲಕ್ಷ ಕುಟುಂಬಗಳು ಸ್ವಂತ ಮನೆಗಳನ್ನು ಹೊಂದಿದ್ದು, ಅದರಲ್ಲಿ ಶೇ.18.69ರಷ್ಟು ಕುಟುಂಬಗಳು ಇನ್ನೂ ಗುಡಿಸಲಿನಲ್ಲೇ ವಾಸಿಸುತ್ತಿವೆ. 1.89 ಲಕ್ಷ ಕುಟುಂಬಗಳಿಗೆ ಸ್ವಂತ ಸೂರಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಮೀಕ್ಷೆಯಲ್ಲಿ ಒಟ್ಟಾರೆ 27.60 ಲಕ್ಷ ಕುಟುಂಬಗಳ 1.07 ಕೋಟಿ ಜನ ಪಾಲ್ಗೊಂಡಿದ್ದರು. ಸಮೀಕ್ಷೆಯಂತೆ ರಾಜ್ಯದ ಒಟ್ಟು ಕುಟುಂಬಗಳಲ್ಲಿ 25.34 ಲಕ್ಷ ಕುಟುಂಬಗಳು ಸ್ವಂತ ಮನೆ ಹೊಂದಿದ್ದು, 1.89 ಲಕ್ಷ ಕುಟುಂಬಗಳಿಗೆ ಸ್ವಂತ ಮನೆಯಿಲ್ಲ. ಸ್ವಂತ ಮನೆ ಹೊಂದಿದವರ ಪಟ್ಟಿಯಲ್ಲಿ ಶೇ.18.69ರಷ್ಟು ಕುಟುಂಬಗಳು ಇನ್ನೂ ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. ಬಂಜಾರ ಜಾತಿಯಲ್ಲಿ ಸ್ವಂತ ಮನೆ ಹೊಂದಿದವರ ಪ್ರಮಾಣ ಶೇ.3.10, ಹೊಲೆಯ ಜಾತಿ 83.90 ಹಾಗೂ ಮಾದಿಗ ಜಾತಿಯ ಪ್ರಮಾಣ ಶೇ. 80.11ರಷ್ಟಿದೆ.

42 ಉಪ ಜಾತಿಗಳಿಗಿಲ್ಲ ರಾಜಕೀಯ ಪ್ರಾತಿನಿಧ್ಯ

ದೇಶದಲ್ಲಿ ಮೊದಲ ಚುನಾವಣೆ ಆದಾಗಿನಿಂದ ಈವರೆಗೆ 101 ಉಪಜಾತಿಗಳಲ್ಲಿ 42 ಉಪಜಾತಿಗಳಿಗೆ ಈವರೆಗೆ ಲೋಕಸಭೆಯಿಂದ ಗ್ರಾಪಂ ಮಟ್ಟದಲ್ಲಿ ಯಾವುದೇ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ!

2024ರ ಲೋಕಸಭೆ ಚುನಾವಣೆಯಲ್ಲಿ ಮಾದಿಗ, ಹೊಲೆಯ ಮತ್ತು ಭೋವಿ ಸಮುದಾಯಕ್ಕೆ ಸೇರಿದವರಿಗೆ ಮಾತ್ರ ಪ್ರಾತಿನಿಧ್ಯ ದೊರೆತಿದ್ದು, ಉಳಿದ 98 ಉಪಜಾತಿಗಳಿಗೆ ಅವಕಾಶ ದೊರೆತಿಲ್ಲ. ಇನ್ನು ಪ್ರಸ್ತುತ ರಾಜ್ಯದ ಗ್ರಾಪಂ ಸದಸ್ಯರಲ್ಲಿ 41 ಉಪಜಾತಿಯ ಸದಸ್ಯರಿಗೆ ಮಾತ್ರ ಪ್ರಾತಿನಿಧ್ಯ ದೊರೆತಿದೆ. ಉಳಿದ 60 ಉಪಜಾತಿಯವರಿಗೆ ಗ್ರಾಪಂ ಸದಸ್ಯರೂ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Read more Articles on