ಮಂಡ್ಯ ತಾಲೂಕಿನ ಹಳೇ ಬೂದನೂರು ಇತಿಹಾಸದ ಹಲವು ಅಪರೂಪದ ಸಂಗತಿಗಳನ್ನು ಒಡಲಿನಲ್ಲಿಟ್ಟುಕೊಂಡಿರುವ ಊರು. ಶ್ರೀ ಅನಂತ ಪದ್ಮನಾಭಸ್ವಾಮಿ, ಶ್ರೀಕಾಶಿ ವಿಶ್ವನಾಥಸ್ವಾಮಿ ದೇಗುಲಗಳಿಂದ ವೈಶಿಷ್ಟ್ಯತೆಯನ್ನು ಮೆರೆಯುತ್ತಿದ್ದ ಗ್ರಾಮದಲ್ಲಿ ಒಂದು ಸಾವಿರ ವರ್ಷಕ್ಕೂ ಹಳೆಯದಾದ ಹಲವು ಪ್ರಾಚೀನ ವಿಗ್ರಹಗಳು, ಶಿಲಾಶಾಸನಗಳು ದೊರೆತು ಇತಿಹಾಸಕ್ಕೆ ಇನ್ನಷ್ಟು ಮೆರುಗು ಬಂದಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹಳೇ ಬೂದನೂರು ಇತಿಹಾಸದ ಹಲವು ಅಪರೂಪದ ಸಂಗತಿಗಳನ್ನು ಒಡಲಿನಲ್ಲಿಟ್ಟುಕೊಂಡಿರುವ ಊರು. ಶ್ರೀ ಅನಂತ ಪದ್ಮನಾಭಸ್ವಾಮಿ, ಶ್ರೀಕಾಶಿ ವಿಶ್ವನಾಥಸ್ವಾಮಿ ದೇಗುಲಗಳಿಂದ ವೈಶಿಷ್ಟ್ಯತೆಯನ್ನು ಮೆರೆಯುತ್ತಿದ್ದ ಗ್ರಾಮದಲ್ಲಿ ಒಂದು ಸಾವಿರ ವರ್ಷಕ್ಕೂ ಹಳೆಯದಾದ ಹಲವು ಪ್ರಾಚೀನ ವಿಗ್ರಹಗಳು, ಶಿಲಾಶಾಸನಗಳು ದೊರೆತು ಇತಿಹಾಸಕ್ಕೆ ಇನ್ನಷ್ಟು ಮೆರುಗು ಬಂದಿದೆ. ಅವುಗಳನ್ನು ಗ್ರಾಮದ ಯುವಕರು ಅತ್ಯುತ್ತಮ ರೀತಿಯಲ್ಲಿ ಸಂರಕ್ಷಿಸಿ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತೆ ಮಾಡಿದ್ದಾರೆ.

೧೯೭೨ರಲ್ಲಿ ಪ್ರಕಟಗೊಂಡ ಎಫಿಗ್ರಾಫಿಕ್ ಆಪ್ ಕರ್ನಾಟಕ ಪುಸ್ತಕದಲ್ಲಿ ದಾಖಲಾಗಿದ್ದ ಹಳೇ ಬೂದನೂರಿನ ಇತಿಹಾಸವನ್ನು ಓದಿ ಪ್ರೇರಣೆಗೊಂಡ ಯುವಕರು ಗ್ರಾಮದ ಇತಿಹಾಸದ ಸಂಗತಿಗಳನ್ನೆಲ್ಲಾ ಕಲೆ ಹಾಕುವುದಕ್ಕೆ ಶುರು ಮಾಡಿದರು. ಇದರಿಂದ ಆರು ಶಿಲಾ ಶಾಸನಗಳು, ೮ ಅಪರೂಪದ ಪುರಾತನ ವಿಗ್ರಹಗಳು, ೫ ವೀರಗಲ್ಲುಗಳು ದೊರಕಿದವು.

ಬೂದನೂರು ಕೆರೆಗೆ ಸಂಬಂಧಿಸಿದ ತಮಿಳು ಭಾಷೆಯ ಕನ್ನಡ ಲಿಪಿಯಲ್ಲಿರುವ ತಮಿಳು ಶಾಸನ ಕೆರೆಯ ಬಳಿ ದೊರಕಿದ್ದು, ಅದು ೧೦೨೪ನೇ ಸಾಲಿಗೆ ಸೇರಿದ್ದು ಎಂಬ ಉಲ್ಲೇಖವಿದೆ. ಶಾಸನದ ಮುಂಭಾಗ (ಪೂರ್ವಕ್ಕೆ)ದಲ್ಲಿ ಸತ್ಯವಾಕ್ಯ ಗೋವಿಂದ, ರಕ್ಕಸಗಂಗ, ಸೋವರಾಸಿ ಭಟ್ಟಾರಕ ಕೆರೆ ಕಟ್ಟಿಸಿರುತ್ತಾರೆ ಎಂಬ ಮಾಹಿತಿ ಇದ್ದರೆ, ಶಾಸನದ ಹಿಂಭಾಗ (ಪಶ್ಚಿಮಕ್ಕೆ)- ಬಿತ್ತುವಟ್ಟವಾಗಿ ಕೆರೆಗೆ ಜಯಮ್ಮ ಮತ್ತು ಚಾವಯ್ಯ (ಚಾಮಯ್ಯ) ರವರು ಭೂಮಿಯನ್ನು ದಾನ ನೀಡಿರುತ್ತಾರೆ ಎಂಬ ಉಲ್ಲೇಖವಿದೆ.

ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನಲ್ಲಿ ದೊರಕಿದ ಶ್ರೀವೇಣುಗೋಪಾಲಸ್ವಾಮಿ ವಿಗ್ರಹದ ಬಳಿಕ ಗ್ರಾಮದಲ್ಲಿ ಪುರಾತನ ಕಾಲದ ಶಿಲ್ಪಿಯ ಕಲಾತ್ಮಕ ಕೆತ್ತನೆಯಿಂದ ಮೂಡಿದ ಶ್ರೀವೇಣುಗೋಪಾಲ ಸ್ವಾಮಿ ವಿಗ್ರಹ, ಗಂಗರ ಕಾಲದ ದುಷ್ಟ ಶಕ್ತಿ ಸಂಹಾರ ಅವತಾರದ ಶ್ರೀಚಾಮುಂಡೇಶ್ವರಿ ವಿಗ್ರಹ, ಸಪ್ತಮಾತೃಕೆಯರಲ್ಲಿ ಬ್ರಹ್ಮಿಣಿ, ಕೌಮಾರಿ, ಮಹೇಶ್ವರಿ ವಿಗ್ರಹಗಳು, ಅಷ್ಟಭೈರವರಲ್ಲಿ ಮೂರನೆಯವನಾದ ಶ್ರೀಕಪಾಲಭೈರವ, ಇಬ್ಬರು ದ್ವಾರಪಾಲಕರ ವಿಗ್ರಹಗಳು ದೊರಕಿವೆ.

ವಿಶ್ವೇಶ್ವರಯ್ಯ ನಾಲೆ ಪಕ್ಕ ಏಕಾಂಗಿಯಾಗಿದ್ದ ಪಚ್ಚೆ ಕಲ್ಲಿನ ವಿನಾಯಕ, ೧೧ನೇ ಶತಮಾನದ ಒಂದನೇ ರಾಜೇಂದ್ರ ಚೋಳನ ತುರುಗೋಳ್ ವೀರಗಲ್ಲು, ತಮಿಳು ವೀರಗಲ್ಲು ಶಾಸನ ದೊರಕಿದೆ. ಗಂಗರ ಕಾಲಮಾನಕ್ಕೆ ಸೇರಿದ ಪ್ರಾಚೀನ ವೀರಗಲ್ಲು, ವಿನ್ಯಾಸ ಕೆತ್ತನೆಯ ಕಂಬ, ಪ್ರಾಚೀನ ಕಾಲದಲ್ಲಿ ಶ್ರೀಸೋಮೇಶ್ವರ ಗುಡಿಯ ಮುಂಭಾಗ ನಂದಿ ಕಂಭ, ಪುರಾತನ ಕಾಲದ ವಾಸ್ತುಶಿಲ್ಪ ಪ್ರವೇಶ ದ್ವಾರವನ್ನು ಕಾಯುವ ರಕ್ಷಕನ ವಿಗ್ರಹ, ಗಂಗರ ಕಾಲದ ಇತಿಹಾಸದ ಯುದ್ಧದಲ್ಲಿ ಬಿಲ್ಲು ಬಾಣ ಹಿಡಿದ ವೀರನು ಶತ್ರುಗಳ ಮೇಲೆ ದಾಳಿ ನಡೆಸುವ ದೃಶ್ಯದ ಶಿಲ್ಪಕಲೆಯ ಪ್ರಾಚೀನ ವೀರಗಲ್ಲು ಶಿಲಾ ಶಾಸನ, (ವೀರಗಲ್ಲಿನ ಮೇಲ್ಭಾಗದಲ್ಲಿ ಶಾಸನವನ್ನು ಹೊಂದಿದೆ).

ಗಂಗರ ಕಾಲದ ೯ನೇ ಶತಮಾನದ ಐತಿಹಾಸಿಕ ವಕೈ (ಬಲಗೈ) ಮಹಾಸತಿ ವೀರ ಮಾಸ್ತಿಗಲ್ಲು, ಶ್ರೀಸೋಮೇಶ್ವರ ಗುಡಿ ಮುಂಭಾಗ ನೆಟ್ಟಗಲ್ಲು . ಪ್ರಾಚೀನ ಕಾಲದ ನೆಟ್ಟಗಲ್ಲಿನಲ್ಲಿ ಶಿವಲಿಂಗದ ಆಕೃತಿ ಹಾಗೂ ಸೂರ್ಯ ಚಂದ್ರರ ಕೆತ್ತನೆಯನ್ನು ಕಾಣಬಹುದು.

ಬೂದನೂರಿನ ಮೂಲ ಜನ ವಸತಿ ಪ್ರದೇಶ (ಇಂದಿನ ನಿರ್ಜನ ವಸತಿ ಪ್ರದೇಶ)ದ ಪ್ರಾಚೀನ ಹೊಯ್ಸಳರ ಕಾಲದ ಯುದ್ಧ ಮತ್ತು ಅವನತಿಯ ಪ್ರಸಂಗದ ನಾಲ್ಕು ಹಂತದ ದೃಶ್ಯದ ಐತಿಹಾಸಿಕ ವೀರಗಲ್ಲು , ಭೂಮಿಯ ಒಳಗೆ ಸೇರಿಕೊಂಡಿದ್ದ ಚೋಳರ ಕಾಲಕ್ಕೆ ಸೇರಿದ ೭ ಅಡಿ ಎತ್ತರ , ೪ ಅಡಿ ಅಗಲ, ೧.೫ ಟನ್ ಗಾತ್ರದ ವೀರಗಲ್ಲನ್ನು ಸಂರಕ್ಷಣೆ ಮಾಡಲಾಗಿದೆ.

ಐತಿಹಾಸಿಕ ಪ್ರಾಚೀನ ಕಾಲದ ೯ ರಿಂದ ೧೩ನೇ ಶತಮಾನದ ವರೆಗಿನ ಶಿಲಾಶಾಸನಗಳು, ವೀರಗಲ್ಲುಗಳು, ವೀರಮಾಸ್ತಿಗಲ್ಲುಗಳು, ಮತ್ತು ಪುರಾತನ ಕಾಲದ ವಿಗ್ರಹಗಳು ಗ್ರಾಮದಲ್ಲಿ ಯಾವುದೇ ರಕ್ಷಣೆ ಇಲ್ಲದೆ ಕೆರೆ ಬದಿ ಹಾಗೂ ದೇವಾಲಯಗಳ ಆವರಣದಲ್ಲಿ ಅನಾಥವಾಗಿ ಬಿದ್ದಿದ್ದವು. ಗ್ರಾಮದಲ್ಲಿದ್ದ ಅಪರೂಪದ ಐತಿಹ್ಯಗಳು ಶಿಥಿಲಾವಸ್ಥೆಯಲ್ಲಿ ಭೂಗತವಾಗುತ್ತಿರುವುದನ್ನು ಕಂಡ ಯುವಕರು ಅವುಗಳಿಗೆ ನೆಲೆಯೊಂದನ್ನು ದೊರಕಿಸಲು ಟೊಂಕಕಟ್ಟಿ ನಿಂತರು.

ಇತಿಹಾಸ ತಜ್ಞ ಬಿ.ಎಸ್.ಪುಟ್ಟಸ್ವಾಮಿ ಅವರ ಮಾರ್ಗದರ್ಶನದಲ್ಲಿ ಇಂದಿನ ಜನಮಾನಸದಿಂದ ತೆರೆಯ ಮರೆಗೆ ಸರಿಯುತ್ತಿದ್ದ ಇತಿಹಾಸದ ಸಂಗತಿಗಳೆಲ್ಲವನ್ನೂ ಒಗ್ಗೂಡಿಸಿದರು. ಅವುಗಳೆಲ್ಲವನ್ನೂ ಶ್ರೀ ಸೋಮೇಶ್ವರಸ್ವಾಮಿ ಮತ್ತು ಶ್ರೀ ಅಂಕನಾಥೇಶ್ವರ ಸ್ವಾಮಿ ದೇವಸ್ಥಾನದ ಆವರಣಕ್ಕೆ ತಂದಿರಿಸಿದರು. ಅವುಗಳಿಗೆ ವೇದಿಕೆಯೊಂದನ್ನು ನಿರ್ಮಿಸಿ ಪ್ರತಿಷ್ಠಾಪಿಸಿದರಲ್ಲದೆ, ಪ್ರತಿಯೊಂದು ಶಿಲಾಶಾಸನ, ವಿಗ್ರಹಗಳು, ವೀರಗಲ್ಲುಗಳು, ಮಾಸ್ತಿಗಲ್ಲುಗಳ ಹಿನ್ನೆಲೆಯ ವಿವರಗಳನ್ನು ಅಧ್ಯಯನಕ್ಕೆ ಯೋಗ್ಯವಾಗುವ ರೀತಿಯಲ್ಲಿ ಅವುಗಳ ಕೆಳಗೆ ಬರೆಸಿದ್ದಾರೆ. ಇದು ಇತಿಹಾಸ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿದೆ.

ಗ್ರಾಮದ ಇತಿಹಾಸ ಆಸಕ್ತ ಯುವಕರು ಹಾಗೂ ಗ್ರಾಮಸ್ಥರ ನೆರವಿನಿಂದ ಇತಿಹಾಸದ ಸಂಗತಿಗಳನ್ನೊಳಗೊಂಡ ಸ್ಮಾರಕ ನಿರ್ಮಾಣ ಹಂತದಲ್ಲಿದೆ. ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಯುವಕರು ಕಾರ್ಯೋನ್ಮುಖರಾಗುವ ಮೂಲಕ ಇತರೆ ಯುವಕರಿಗೆ ಮಾದರಿಯಾಗಿದ್ದಾರೆ.

ಪ್ರಾಚೀನ ಶಾಸನಗಳ ಸಂರಕ್ಷಣೆ ನಮ್ಮ ಹೊಣೆ ಎಂಬ ಧ್ಯೇಯದೊಂದಿಗೆ ಹಳೇಬೂದನೂರಿನಲ್ಲಿ ಸಿಕ್ಕಂತಹ ಎಲ್ಲಾ ಇತಿಹಾಸದ ಸಂಗತಿಗಳನ್ನು ಕ್ರಮಬದ್ಧವಾಗಿ ಜೋಡಿಸಿ ಅಧ್ಯಯನಕ್ಕೆ ಅನುಕೂಲವಾಗುವಂತೆ ವಿವರಣೆಯನ್ನೂ ನೀಡಲಾಗಿದೆ. ಅಪರೂಪದ ದೇಗುಲಗಳನ್ನು ಒಳಗೊಂಡಿದ್ದ ಹಳೇಬೂದನೂರು ಇನ್ನಷ್ಟು ಅಪರೂಪದ ಶಿಲಾ ವಿಗ್ರಹಗಳು, ಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳೊಂದಿಗೆ ಇತಿಹಾಸದ ಗಣಿಯನ್ನು ಒಡಲಿನಲ್ಲಿರಿಸಿಕೊಂಡಿರುವುದು ನಮ್ಮ ಗ್ರಾಮದ ಹೆಮ್ಮೆಯಾಗಿದೆ.

- ಬಿ.ಜೆ.ಸ್ವರೂಪ್, ಗ್ರಾಮಮಟ್ಟದ ಪರಿಶೋಧನಾ ವಿದ್ಯಾರ್ಥಿ, ಹಳೇಬೂದನೂರು