ಜಿಲ್ಲೆಯಲ್ಲಿ ಹೆಚ್ಚು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

| Published : Jan 28 2025, 12:47 AM IST

ಸಾರಾಂಶ

ಇತ್ತೀಚಿನ ಕೆಲ ತಿಂಗಳುಗಳಿಂದ ಜಿಲ್ಲೆಯಲ್ಲಿ ಹೆಚ್ಚು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ಹಾಸನ ಜಿಲ್ಲೆ ರಾಜ್ಯ ಮಟ್ಟದಲ್ಲಿ ಅವಮಾನಕ್ಕೆ ಒಳಗಾಗಿದೆ. ಜಿಲ್ಲೆಯ ಮರ್ಯಾದೆ ಉಳಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಮೇಲಧಿಕಾರಿಗಳು ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಸಂಸದ ಶ್ರೇಯಸ್ ಎಂ. ಪಟೇಲ್ ಸೂಚಿಸಿದರು. ಹಾಸನ ಜಿಲ್ಲೆಯ ಮರ್ಯಾದೆಯನ್ನು ಕಳೆದುಕೊಳ್ಳುವ ಕೆಲಸ ಯಾರೂ ಮಾಡಬೇಡಿ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚಿನ ಕೆಲ ತಿಂಗಳುಗಳಿಂದ ಜಿಲ್ಲೆಯಲ್ಲಿ ಹೆಚ್ಚು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ಹಾಸನ ಜಿಲ್ಲೆ ರಾಜ್ಯ ಮಟ್ಟದಲ್ಲಿ ಅವಮಾನಕ್ಕೆ ಒಳಗಾಗಿದೆ. ಜಿಲ್ಲೆಯ ಮರ್ಯಾದೆ ಉಳಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಮೇಲಧಿಕಾರಿಗಳು ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಸಂಸದ ಶ್ರೇಯಸ್ ಎಂ. ಪಟೇಲ್ ಸೂಚಿಸಿದರು.

ಸೂಕ್ತ ಮಾರ್ಗದರ್ಶನ ನೀಡಿ: ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಮೂರನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾರಂಭದಲ್ಲೆ ಅಧಿಕಾರಿಗಳು ಲಂಚ ಪಡೆಯುವಾಗ ಲೋಕಾಯುಕ್ತ ದಾಳಿಗೆ ಸಿಕ್ಕಿಬಿದ್ದ ಬಗೆ ಚರ್ಚಿಸಿ ಅಧಿಕಾರಿಗಳ ನಡೆಗೆ ಸಂಸದರು ಕೆಂಡಾಮಂಡಲವಾದರು. ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಲೋಕಾಯುಕ್ತ ದಾಳಿ ನಡೆಯುತ್ತಿದೆ. ಲಂಚ ಪಡೆಯುವಾಗ ಅಧಿಕಾರಿಗಳು ಸಿಕ್ಕಿಬೀಳುತ್ತಿದ್ದಾರೆ, ಇದರಿಂದ ಇಡೀ ರಾಜ್ಯ ನಮ್ಮ ಜಿಲ್ಲೆಯತ್ತ ಗಮನಹರಿಸಿದೆ. ಹಾಸನ ಜಿಲ್ಲೆಯ ಮರ್ಯಾದೆಯನ್ನು ಕಳೆದುಕೊಳ್ಳುವ ಕೆಲಸ ಯಾರೂ ಮಾಡಬೇಡಿ. ಇಡೀ ಜಿಲ್ಲಾಡಳಿತದ ಗೌರವ ನಿಮ್ಮ ಕೈಯಲ್ಲಿದೆ. ನಿಮ್ಮ ಕೆಳಮಟ್ಟದ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ. ಲಂಚಕೋರರನ್ನು ನಿಯಂತ್ರಣದಲ್ಲಿಟ್ಟುಕೊಂಡು ಇನ್ಮುಂದೆ ಇಂತಹ ಘಟನೆಗಳ ಅವಕಾಶ ನೀಡಬೇಡಿ ಎಂದು ಸಲಹೆ ನೀಡಿದರು.

ಒಳ ಚರಂಡಿ ವ್ಯವಸ್ಥೆ ಕುರಿತಂತೆ ಸಂಸದರು ಆಕ್ರೋಶಗೊಂಡರು. ಇಲಾಖೆ ಒಳಗೆ ಹೇಳೋರು ಕೇಳೋರು ಯಾರು ಇಲ್ವಾ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಅರಸೀಕೆರೆ ಪಟ್ಟಣದ ಒಳ ಚರಂಡಿ ವ್ಯವಸ್ಥೆ ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಕಳೆದರೂ ಪೂರ್ಣವಾಗಿಲ್ಲ. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಇದೇ ವೇಳೆ ಆಕ್ರೋಶಗೊಂಡರು. ನಿಮಗೆ ಮಾನಮರ್ಯಾದೆ ಇದೆಯಾ ಎಂದು ಅಧಿಕಾರಿಗಳಿಗೆ ಛೀಮಾರಿ ಹಾಕದ ಪ್ರಸಂಗ ನಡೆಯಿತು. ನಿಮ್ಮಂಥ ಅಧಿಕಾರಿಗಳನ್ನು ದೆಹಲಿಗೆ ಅಲ್ಸೋದು ನಂಗೆ ಗೊತ್ತು ಎಂದು ಸಂಸದ ಶ್ರೇಯಸ್ ಪಟೇಲ್ ಗರಂಗೊಂಡರು. ನೀವು ಅಧಿಕಾರಿಯಾಗುವುದಕ್ಕಿಂತ ರಾಜಕೀಯಕ್ಕೆ ನಿಂತುಕೊಳ್ಳಿ ಎಂದು ಮಾರ್ಮಿಕವಾಗಿ ನುಡಿದು ಅಧಿಕಾರಿಗಳ ಮೇಲೆ ಕೆಂಡಾಮಂಡಲವಾದರು.

ಕೇಂದ್ರ ಸರ್ಕಾರ ೫೦ ಭಾಗ ಹಣ ಕೊಟ್ಟಿದೆ. ಏನು ನ್ಯೂನ್ಯತೆಗಳಿವೆ ಅದನ್ನ ಸರಿಪಡಿಸಿ ವರದಿ ಕೂಡ ಕೊಟ್ಟಿಲ್ಲ. ಅಲ್ಲಿಗೆ ಬಂದರೇ ಸರಿಯಾಗಿ ಮಾಹಿತಿ ಸಿಗಲ್ಲ. ಓರಿಯೆಂಟಲ್ ಸಂಸ್ಥೆ ಸರಿಯಾಗಿಲ್ಲ ಬಹಳ ಅನ್ಯಾಯ ಮಾಡುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ಇದೇ ವೇಳೆ ಗಂಭೀರವಾಗಿ ಆರೋಪಿಸಿದರು. ಕೃಷಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತ ಯಾವ ಸಾಮಗ್ರಿ ತೆಗೆದುಕೊಳ್ಳುತ್ತಾನೆ ಅದನ್ನು ಪರಿಶೀಲಿಸಿ ಅದಕ್ಕೆ ಸರ್ಟಿಫಿಕೇಟ್ ಕೊಡಬೇಕು. ಏಜೆಂಟ್ ಕಂಪನಿಗಳಿವೆ, ಎಲ್ಲಾ ಕಂಪನಿಗಳಲ್ಲೂ ಮೋಸ. ಒಂದು ಕೂಡ ಸರಿಯಾದ ರೀತಿ ಬೆಲೆ ಇಲ್ಲ. ನಿಮ್ಮ ಮಾರುಕಟ್ಟೆ ದರಕ್ಕೂ ಬೇರೆಯದಕ್ಕೂ ವ್ಯತ್ಯಾಸವಿದೆ. ರೈತನಿಗೆ ಸಬ್ಸಿಡಿ ಸಿಗುವುದೇ ಇಲ್ಲ. ನಿಮ್ಮ ಮಾರುಕಟ್ಟೆ ದರ ಇರುವ ದರಕ್ಕಿಂತ ಹೆಚ್ಚು ಇದೆ. ರೈತನಿಗೆ ನೇರವಾಗಿ ಗುಣಮಟ್ಟಕ್ಕೆ ಸರಿಯಾಗಿ ದರ ನೀಡಿ ಎಂದು ಅಧಿಕಾರಿಗೆ ಸಲಹೆ ನೀಡಿದರು. ನಮ್ಮ ಕೈಲೇ ರೈತರ ಸಾಮಗ್ರಿ ಹಂಚಿಸುತ್ತೀರಾ! ದರ ನೋಡಿದರೇ ರೈತರ ಸಬ್ಸಿಡಿ ಹಣವೇ ಇಲ್ಲ. ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. ಇದಾದ ನಂತರ ವಿವಿಧ ಇಲಾಖೆಗಳ ಕುರಿತು ಮಾಹಿತಿ ಪಡೆಯಲಾಯಿತು. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಇದೇ ವೇಳೆ ಸಂಸದರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆ ಒಳಗೆ ಮಧ್ಯಾಹ್ನವಾದರೂ ಸಂಸದರು ಹಾಗೂ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಪಕ್ಷದವರು ಬಿಟ್ಟರೇ ಇತರೆ ಪಕ್ಷದ ಶಾಸಕರು ಭಾಗವಹಿಸಲಿಲ್ಲ.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಎಂ. ತಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

-----------------------

*ಬಾಕ್ಸ್‌: ಕೇವಲ 1 ತಿಂಗಳಲ್ಲಿ ನಾಲ್ವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ

ಡಿಡಿಪಿಐ, ನಗರಸಭೆ ಆಯುಕ್ತರು, ಇತರೆ ಸೇರಿದಂತೆ ಒಟ್ಟು ನಾಲ್ವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಸಂಸದ ಶ್ರೇಯಸ್‌ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ನಮ್ಮನ್ನು ಬೇರೆಡೆ ಪ್ರಶ್ನಿಸುವ ಪರಿಸ್ಥಿತಿ ಉಂಟಾಗಬಾರದು ಎಂದು ಸೂಕ್ಷ್ಮವಾಗಿ ಸೂಚಿಸಿದರು. ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಜೊತೆಗೆ, ಪ್ರಾಮಾಣಿಕತೆಯಿಂದ ಜಿಲ್ಲಾ ಅಭಿವೃದ್ಧಿಗೆ ತಮಗೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.