ಸಾರಾಂಶ
ಇಡೀ ಕ್ಷೇತ್ರದ ದೊಡ್ಡ ಅಭಿವೃದ್ಧಿ ಕೆಲಸಗಳಲ್ಲಿ ಶಾಸಕರ ಪಾತ್ರ ಪ್ರಮುಖವಾಗಿದ್ದರೆ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿ ಅಭಿವೃದ್ಧಿ ಪಡಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚು ಅಧಿಕಾರ ಹೊಂದಿದ್ದಾರೆ. ಇಂಥವರಿಗೆ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸಿಕೊಡುವುದು ಕ್ಷೇತ್ರದ ಶಾಸಕರ ಕರ್ತವ್ಯವಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಶಾಸಕರಿಗಿಂತ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹೆಚ್ಚು ಅಧಿಕಾರ ಹೊಂದಿರುತ್ತಾರೆ ಎಂದು ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಗುರುವಾರ ಹೇಳಿದರು.ಪಟ್ಟಣದ ತಮ್ಮ ನಿವಾಸದಲ್ಲಿ ತಾಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಗೆ ನಡೆದ ಉಪಚುನಾವಣೆಯಲ್ಲಿ ಎರಡನೇ ಕ್ಷೇತ್ರದಿಂದ ಆಯ್ಕೆಯಾದ ತಿಮ್ಮ ಶೆಟ್ಟಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಇಡೀ ಕ್ಷೇತ್ರದ ದೊಡ್ಡ ಅಭಿವೃದ್ಧಿ ಕೆಲಸಗಳಲ್ಲಿ ಶಾಸಕರ ಪಾತ್ರ ಪ್ರಮುಖವಾಗಿದ್ದರೆ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿ ಅಭಿವೃದ್ಧಿ ಪಡಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚು ಅಧಿಕಾರ ಹೊಂದಿದ್ದಾರೆ. ಇಂಥವರಿಗೆ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸಿಕೊಡುವುದು ಕ್ಷೇತ್ರದ ಶಾಸಕರ ಕರ್ತವ್ಯವಾಗಿದೆ ಎಂದರು.ನಾನು ಶಾಸಕನಾಗಿದ್ದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ 550 ಕಿಲೋಮೀಟರ್ ರಸ್ತೆಗಳನ್ನು ಉನ್ನತೀಕರಣ ಗೊಳಿಸಿರುವುದು ಮಾತ್ರವಲ್ಲದೆ 35 ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯ ಅನುದಾನ ತಂದು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಈಗ ಈ ಕ್ಷೇತ್ರದಲ್ಲಿ ಹಳ್ಳಗಳಿಗೂ ತೇಪೆ ಹಾಕಲು ಹಣವಿಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು. ಈ ವೇಳೆ ಗ್ರಾಪಂ ಸದಸ್ಯ ಸುಂದರೇಶ್, ಮಾಜಿ ಉಪಾಧ್ಯಕ್ಷರಾದ ಮರಿಸ್ವಾಮಿ, ಶಿವಲಿಂಗ, ಮಾಜಿ ಸದಸ್ಯ ಶಿವರಾಜು, ಕೆ.ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ. ರಘು. ಸದಸ್ಯ ಕುಮಾರ್ ಹಾಗೂ ಗ್ರಾಮದ ಮುಖಂಡರು ಇದ್ದರು.