ಸಾರಾಂಶ
ಹಾವೇರಿ: ತಾಲೂಕಿನ ದೇವಿಹೊಸೂರ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಎಫ್.ಪಿ.ಒ.ರೈತರಿಗೆ ಮಾವು ಮತ್ತು ಅದರ ಉತ್ಪನ್ನಗಳ ರಫ್ತಿನ ಕುರಿತು ಒಂದು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ನಡೆಯಿತು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ದೇವಿಹೊಸೂರ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಕಾರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಿದ್ಯಾಧಿಕಾರಿ ಡಾ.ಲಕ್ಷಣ ಕುಕನೂರ ಮಾತನಾಡಿ, ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಬೆಳೆಗೆ ನಮ್ಮ ದೇಶದಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲಿಯೂ ಸಹ ಹೆಚ್ಚಿನ ಬೇಡಿಕೆ ಇದೆ. ರೈತರು ಬೆಳೆದ ಮಾವು ಮತ್ತು ಅದರ ಮೌಲ್ಯರ್ವತ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವು ಮಾವು ಮತ್ತು ಅದರ ಉತ್ಪನ್ನಗಳ ರಫ್ತು ಹಾಗೂ ಮಾವು ಬೆಳೆಯ ಸುಧಾರಿತ ಬೇಸಾಯ ಕ್ರಮಗಳು ಮಾವು ಮೌಲ್ಯರ್ವತ ಉತ್ಪನ್ನಗಳ ತಯಾರಿಕೆಯ ಕುರಿತು ಸಮಗ್ರ ಮಾಹಿತಿ ನೀಡುವ ಮೂಲಕ ಮಾವು ಬೆಳೆಗಾರರಿಗೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಯಕಾರಿಯಾಗಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಕಾರದ ಅಧಿಕಾರಿ ಕಾರಂತ್ ಬಿ. ಮಾವು ಮತ್ತು ಅದರ ಉತ್ಪನ್ನಗಳ ರಫ್ತಿನ ಬಗ್ಗೆ ಮಾವು ಬೆಳೆಗಾರರು ಹಾಗೂ ಎಫ್.ಪಿ.ಒ ರೈತರಿಗೆ ಮಹಿತಿ ಸವಿಸ್ತಾರವಾಗಿ ತಿಳಿಸಿದರು.ಹಾನಗಲ್‌ನ ಮಾವು ಬೆಳೆಗಾರರ ಸಂಘದ ಮುಖಂಡ ಬಸವಂತಪ್ಪ ಮಲ್ಲೇನಹಳ್ಳಿ, ತೋಟಗಾರಿಕೆ ಇಲಾಖೆಯಿಂದ ಮಾವು ಮೇಳ ಆಯೋಜಿಸಿ ಮಾವು ಮತ್ತು ಅದರ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಪುಷ್ಪಾ ಪಿ., ಡಾ.ರವಿಕುಮಾರ ಬಿ., ಡಾ. ವಿನಯಕುಮಾರ ಎಂ.ಎಂ.,ಡಾ.ನೇತ್ರಾವತಿ ಪಾಟೀಲ, ಡಾ.ಲಾವಣ್ಯ ಎಂ.ಎನ್. ಹಾಗೂ ಡಾ. ತಿಪ್ಪಣ್ಣ ಕೆ. ಎಸ್. ಉಪಸ್ಥಿತರಿದ್ದು ರೈತರಿಗೆ ಹೆಚ್ಚಿನ ಮಾಹಿತಿ ಹಾಗೂ ಮಾವು ಮೌಲ್ಯವರ್ಧನೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮುಖಾಂತರ ತಿಳಿಸಿಕೊಟ್ಟರು.ಜಿಲ್ಲೆಯ ವಿವಿಧ ತಾಲೂಕುಗಳಿಂದ ಎಫ್.ಪಿ.ಒ. ಸಂಸ್ಥೆಗಳಿಂದ ಸುಮಾರು 70 ಜನ ರೈತರು ಭಾಗವಹಿಸಿದ್ದರು.