ಸಾರಾಂಶ
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆಯಲ್ಲಿ ಮಂಡಿ ಉದ್ದದ ಗುಂಡಿಗಳು ಹೆಚ್ಚಾಗಿದ್ದು ವಾಹನ ಸವಾರರು ಹೈರಾಣು ಪಡುವಂತಾಗಿದೆ.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ರಾಜ್ಯದಲ್ಲಿ ಅತೀ ಹೆಚ್ಚು ಟ್ಯಾಕ್ಸ್ ಕಟ್ಟುವ ಏಷ್ಯಾದ ಅತೀ ದೊಡ್ಡ ಕೈಗಾರಿಕಾ ಪ್ರದೇಶದಲ್ಲಿ ಪ್ರತಿನಿತ್ಯ ನರಕಯಾತನೆಯಾಗಿದೆ. ರಸ್ತೆಯಲ್ಲಿ ಮಂಡಿ ಉದ್ದದ ಗುಂಡಿಗಳು, ಕೆರೆಯಂತಾದ ರಸ್ತೆಗಳು. ರಸ್ತೆಯಲ್ಲಿ ಹಳ್ಳ ಗುಂಡಿ ಇದೆಯೋ ಅಥವಾ ಹಳ್ಳ ಗುಂಡಿಯಲ್ಲಿ ರಸ್ತೆ ಇದೆಯೋ ಎಂಬ ಅನುಮಾನ ಸಾಮಾನ್ಯವಾಗಿದೆ.ರಾಜ್ಯದ ಅತೀ ಹೆಚ್ಚು ತೆರಿಗೆ ಕಟ್ಟುವ ಪೀಣ್ಯ ಕೈಗಾರಿಕಾ ಪ್ರದೇಶದ ನಾಡಕೇರಪ್ಪ ಸರ್ಕಲ್, ಭೈರವೇಶ್ವರನಗರದಲ್ಲಿ ರಸ್ತೆಗಳು ಮಳೆಯಿಂದಾಗಿ ಸಂಪೂರ್ಣವಾಗಿ ಹದಗೆಟ್ಟು ಓಡಾಡುವ ಪರಿಸ್ಥಿತಿಯನ್ನು ಕಳೆದುಕೊಂಡಿವೆ. ಇನ್ನು ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಹಳ್ಳ ಗುಂಡಿ ಸೃಷ್ಟಿಯಾಗಿವೆ. ಇದರ ನಡುವೆಯೇ ವಾಹನಗಳು ಸಂಚಾರ ಮಾಡಲಾಗುವ ಸ್ಥಿತಿಯಲ್ಲಿವೆ.
ಉದ್ಯಮಿ ಆರ್.ಕೆ.ಕುಮಾರ್ ಮಾತನಾಡಿ, ಪೀಣ್ಯ ಕೈಗಾರಿಕಾ ಪ್ರದೇಶದ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಕೈಗಾರಿಕೆಗಳನ್ನು ನಡೆಸಲಾಗದ ಪರಿಸ್ಥಿತಿಗೆ ಬಂದಿದೆ. ಸರಿಯಾದ ರಸ್ತೆಗಳಿಲ್ಲದೆ ತಯಾರಾದ ವಸ್ತುಗಳನ್ನು ಸಾಗಿಸುವುದು ದುಸ್ಥರವಾಗಿದೆ. ವಸ್ತುಗಳು ಒಡೆದು ಹೋಗಿ ವಾಪಸ್ ಫ್ಯಾಕ್ಟರಿಗಳಿಗೆ ಬರುತ್ತಿವೆ. ಇದರಿಂದ ಮಾಲೀಕರು ದಿವಾಳಿಯಾಗುವ ಸ್ಥಿತಿಯಾಗಿದೆ ಎಂದರು.ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಆರ್.ಶಿವಕುಮಾರ್ ಮಾತನಾಡಿ, ಬ್ರಾಂಡ್ ಬೆಂಗಳೂರು ನಗರ ಮಾಡಲು ಮುಂದಾಗಿರುವ ಸರ್ಕಾರ ಮೊದಲು ಏಷ್ಯಾದ ಅತಿ ದೊಡ್ಡ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಶೀಘ್ರವಾಗಿ ಕ್ರಮಕೈಗೊಂಡು ಉದ್ಯಮಿಗಳು ಹಾಗೂ ಕಾರ್ಮಿಕರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಒಟ್ಟಾರೆ ಲಕ್ಷಾಂತರ ಕಾರ್ಮಿಕರ ಕುಟುಂಬಕ್ಕೆ ಆಸರೆಯಾಗಿರುವ ಏಷ್ಯಾದ ಅತಿದೊಡ್ಡ ಕೈಗಾರಿಕೆಗಳನ್ನು ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆಗಳ ಅವ್ಯವಸ್ಥೆ ನೋಡಿದರೆ, ಸರ್ಕಾರದ ನಿರ್ಲಕ್ಷ್ಯ ದೊಡ್ಡದಾಗಿ ಕಾಣಿಸುತ್ತಿದೆ.