ಸಾರಾಂಶ
ಯಡಿಯೂರಪ್ಪ ಕಪ್ ವಾಲಿಬಾಲ್ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕ್ರೀಡಾಪಟುಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದು, ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಹಕಾರಿಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕರ್ನಾಟಕ ವಾಲಿಬಾಲ್ ಸಂಸ್ಥೆ, ಜಿಲ್ಲಾ ವಾಲಿಬಾಲ್ ಸಂಸ್ಥೆ, ಗೆಳೆಯರ ಬಳಗ, ನೆಹರು ಕ್ರೀಡಾಂಗಣ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ತಾಲೂಕು ದೈಹಿಕ ಶಿಕ್ಷಕರ ಸಂಘದ ಆಶ್ರಯದಲ್ಲಿ ಶಿವಮೊಗ್ಗ ತಾಲೂಕುಮಟ್ಟದ ಪ್ರೌಢಶಾಲಾ ಬಾಲಕರಿಗೆ ಆಯೋಜಿಸಲಾಗಿದ್ದ ಯಡಿಯೂರಪ್ಪ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ಏಷ್ಯನ್‌ನಲ್ಲಿ ಪ್ರಥಮ ಬಾರಿಗೆ 107 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಖೇಲೋ ಇಂಡಿಯಾ ಮೂಲಕ ದೇಶದ ಎಲ್ಲ ಪ್ರತಿಭಾನ್ವಿತರನ್ನು ಹುಡುಕಿ ಅವರಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಇಲ್ಲಿಯೂ ನಾವು ಖೇಲೋ ಇಂಡಿಯಾ ಮೂಲಕ ಕ್ರೀಡಾ ಪ್ರತಿಭೆಗಳನ್ನು ಹೊರತರಲು ಪ್ರಯತ್ನಿಸಲಾಗುತ್ತಿದೆ. ನಮ್ಮ ತಂದೆ ಹೆಸರಿನಲ್ಲಿ ಶಾಲಾ ಮಕ್ಕಳಿಗಾಗಿ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಎಂಎಲ್ ಸಿ ರುದ್ರೇಗೌಡ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಯಡಿಯೂರಪ್ಪ ಅವರ ಹೆಸರಿನಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಅವರ ಸ್ನೇಹಿತರು ಆಯೋಜಿಸುತ್ತಿರುವುದು ಒಳ್ಳೆಯದು. ಬಿಎಸ್‌ವೈ ನಮ್ಮ ಜಿಲ್ಲೆಯ ಧೀಮಂತ ನಾಯಕರು. ಬಹಳಷ್ಟು ಕೆಲಸ ಮಾಡಿದ್ದಾರೆ. ಒಳಾಂಗಣ ಕ್ರೀಡಾಂಗಣ ನಿರ್ಮಿಸಿದ್ದಾರೆ. ಗೋಪಾಳಗೌಡ ಬಡಾವಣೆಯಲ್ಲಿ ಸ್ವಿಮಿಂಗ್ ಪೂಲ್, ಇಂಡೋರ್ ವಾಲಿಬಾಲ್ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಶಿರಾಳಕೊಪ್ಪದಲ್ಲಿಯೂ ಒಳಾಂಗಣ ಕ್ರೀಡಾಂಗಣ ಮಾಡಲಾಗುತ್ತಿದೆ. ಅವರು ಅಧಿಕಾರದಲ್ಲಿ ಇದ್ದಾಗ ಇದೆಲ್ಲದಕ್ಕೂ ಆದ್ಯತೆ ನೀಡಿದ್ದರು. ಇನ್ನೂ ಹೆಚ್ಚಿನ ಅನುಕೂಲಗಳು ಆಗಬೇಕಿದೆ. ಪ್ರತಿಭಾನ್ವಿತ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಸರ್ಕಾರದಿಂದ ಹೆಚ್ಚಿನ ಸಹಕಾರ ಸಿಗಬೇಕಿದೆ ಎಂದರು.ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಉಪಸ್ಥಿತರಿದ್ದರು.
- - - -ಫೋಟೋ:ಶಿವಮೊಗ್ಗ ತಾಲೂಕುಮಟ್ಟದ ಪ್ರೌಢಶಾಲಾ ಬಾಲಕರಿಗಾಗಿ ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ಪ್ರಶಸ್ತಿ ವಿತರಿಸಿ, ಅಭಿನಂದಿಸಲಾಯಿತು.