ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಒತ್ತುವರಿಯಾಗಿರುವ ಜಾಗವನ್ನು ದೇವಸ್ಥಾನಕ್ಕೆ ಮರು ಸ್ವಾಧೀನ ಪಡಿಸಿಕೊಳ್ಳುವ ಕಾರ್ಯ ಮುಂದುವರಿದಿದ್ದು, ಗುರುವಾರ ನಗರದ ತೆಂಕಿಲ ಎಂಬಲ್ಲಿ 3 ಕಡೆಗಳಲ್ಲಿ ಸುಮಾರು 1 ಎಕ್ರೆಗೂ ಮಿಕ್ಕಿ ದೇವಸ್ಥಾನದ ಜಾಗವನ್ನು ದೇವಳದ ಸುಪರ್ದಿಗೆ ಮರುವಶಕ್ಕೆ ಪಡೆದುಕೊಳ್ಳಲಾಯಿತು. ಈ ಜಾಗಕ್ಕೆ ಬೇಲಿ ಹಾಕಿ ದೇವಳದ ನಿವೇಶನವೆಂದು ನಾಮ ಫಲಕ ಅಳವಡಿಸಲಾಯಿತು.ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ದೇವಳದ ವಿವಿಧ ಅಭಿವೃದ್ದಿ ಕಾರ್ಯ ಮತ್ತು ಜಾಗ ಸ್ವಾಧೀನ ಕಾರ್ಯ ಮಾಡುತ್ತಿದ್ದೇವೆ. ನಾವು ದೇವಳಕ್ಕೆ ಸಂಬಂಧಿಸಿದ ಜಾಗ ಒತ್ತುವರಿ ಮಾಡಿ ಸುಮಾರು 25 ಕೋಟಿಯಷ್ಟು ಮೌಲ್ಯದ ಜಾಗವನ್ನು ದೇವಳಕ್ಕೆ ಮರುವಶ ಮಾಡಿಕೊಟ್ಟಿದ್ದೇವೆ. ದೇವಾಲಯದ ಜಾಗವನ್ನು ಮಾತುಕತೆಯನ್ನು ನಡೆಸುವ ಮೂಲಕ ಹಿಂಪಡೆಯುವ ಕಾರ್ಯ ಮಾಡಲಾಗುತ್ತಿದೆ. ಕೆಲವರು ಸಮಯಾವಕಾಶ ಕೇಳಿದ್ದು, ಅದನ್ನು ನೀಡಲಾಗಿದೆ. ದೇವಸ್ಥಾನದ ಜಾಗಗಳಲ್ಲಿ ಕುಟುಂಬದ ದೈವ ದೇವರಿಗೆ ಗುಡಿಗಳನ್ನು ಕಟ್ಟುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ತೆಂಕಿಲ ಅಂಗನವಾಡಿ ಸಮೀಪ ಎರಡು ನಿವೇಶನ ಹಾಗೂ ತೆಂಕಿಲ ಕಮ್ನಾರು ಕಾಲನಿ ಹೋಗುವ ರಸ್ತೆಯ ಬದಿಯಲ್ಲಿ ಒಂದು ನಿವೇಶನವನ್ನು ಗುರುವಾರ ಜೆಸಿಬಿ ಮೂಲಕ ಸ್ವಚ್ಛ ಮಾಡಿ, ತಂತಿ ಬೇಲಿ ಅಳವಡಿಸಿ, ದೇವಸ್ಥಾನಕ್ಕೆ ಸೇರಿದ ಜಾಗ ಎಂಬ ಫಲಕ ಅಳವಡಿಸಲಾಯಿತು. ಈ ಮೂರು ಜಾಗದಲ್ಲೂ ಕಟ್ಟಡಗಳಿರದೆ, ಖಾಲಿ ಜಾಗದಲ್ಲಿ ತೆಂಗಿನ ಮರಳಿದ್ದು, ಅವುಗಳನ್ನು ಉಳಿಸಿಕೊಳ್ಳಲಾಗಿದೆ.
ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ನಗರ ವಲಯ ಅಧ್ಯಕ್ಷ ಲೋಕೇಶ್ ಗೌಡ ಪಡ್ಡಾಯೂರು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಮದಾಸ ಗೌಡ, ಕುಂಜಾರು ಶ್ರೀ ಜನಾರ್ಧನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರೋಹನ್ ಪೂಜಾರಿ ಮಾವಿನಕಟ್ಟೆ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಕೆ. ವಿ., ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಇದ್ದರು.