ಡಂಬಳ: ಗ್ರಾಮದಲ್ಲಿ 10ಕ್ಕೂ ಹೆಚ್ಚು ರೈತರ ಕೊಳವೆಬಾವಿಗಳ(ಬೋರ್‌ವೆಲ್‌) ಕೇಬಲ್ ಕಳ್ಳತನವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಂಗಳವಾರ ಬೆಳಗ್ಗೆ ಮೋಟರ್ ಚಾಲನೆ ಆಗದ ಕಾರಣ ರೈತರು ಪರಿಶೀಲನೆ ಮಾಡಿದಾಗ ಕೇಬಲ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

10 ಬೋರ್‌ವೆಲ್‌ಗಳ ದುಬಾರಿ 350 ಮೀಟರ್‌ಗೂ ಹೆಚ್ಚು ಕೇಬಲ್ ಕಳ್ಳತನವಾಗಿರುವುದು ಬೇಸರದ ಸಂಗತಿ. ಕೂಡಲೇ ಪೊಲೀಸ್ ಅಧಿಕಾರಿಗಳು ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಂಬಳ ಗ್ರಾಮದ ರೈತರಾದ ಮಹೇಶ ಗಡಗಿ, ಬಸವರಾಜ ಹಂಚಿನಾಳ, ಮಾಂತೇಶ ಪ್ಯಾಟಿ, ಶರಣಪ್ಪ ಪ್ಯಾಟಿ, ವಿಕಾಸ ಗಡಗಿ, ಯಂಕಣ್ಣ ಗಡಗಿ ಒತ್ತಾಯಿಸಿದ್ದಾರೆ.

ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ರೈತರು ಠಾಣೆಯ ಮೆಟ್ಟಿಲು ಹತ್ತುತ್ತಿಲ್ಲ. ಕೆಲವು ಘಟನೆಗಳಲ್ಲಿ ಪ್ರಕರಣ ದಾಖಲಾದರೂ ಕಳ್ಳರನ್ನು ಪತ್ತೆ ಹಚ್ಚಿ ಕೇಬಲ್ ಜಪ್ತಿ ಮಾಡುವ ಕಾರ್ಯ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಡೋಣಿ ಗ್ರಾಮ, ಡಂಬಳ ಮತ್ತು ಮೇವುಂಡಿ ಗ್ರಾಮದ ಮಧ್ಯೆ ಇರುವ ಜಮೀನುಗಳಲ್ಲಿ ರೈತರ ವೈರ್, ಕೇಬಲ್, ಪಂಪ್‌ಸೆಟ್‌ಗಳಿಗೆ ಬೇಕಾಗುವ ವಿದ್ಯುತ್ ಉಪಕರಣಗಳನ್ನು ನಿರಂತರವಾಗಿ ಕಳ್ಳತನ ಮುಂದುವರಿದಿದೆ. ಲಕ್ಷಕ್ಕೂ ಅಧಿಕ ಮೌಲ್ಯದ ಕೇಬಲ್ ಕಳ್ಳತನವಾಗಿದೆ. ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ರೈತರಿಗೆ ಪರಿಹಾರ ನೀಡಬೇಕು ಎಂದು ಸ್ವತ್ತು ಕಳೆದುಕೊಂಡ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಡಿವೈಎಸ್ಪಿ ಪ್ರಭುಗೌಡ ಮಾತನಾಡಿ, ರೈತರ ಕೇಬಲ್ ಮತ್ತು ವಿದ್ಯುತ್ ಉಪಕರಣ ಕಳ್ಳತನ ನಮ್ಮ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಕಳ್ಳತನವಾಗದಂತೆ ನೋಡಿಕೊಳ್ಳಲಾಗುವುದು. ಪ್ರತಿದಿನ ಪೊಲೀಸರನ್ನು ನಿಯೋಜನೆ ಮಾಡಿ ಕಳ್ಳರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದರು.ಅಪಘಾತ: ಓರ್ವ ಸಾವು


ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಹತ್ತಿರ ಎರಡು ಬೈಕ್‌ಗಳ ನಡುವೆ ಅಪಘಾತವಾಗಿ ರಸ್ತೆ ಪಕ್ಕದಲ್ಲಿ ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದು ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.ಮೃತನನ್ನು ತಾಲೂಕಿನ ಗಂಗಾಪುರ ಸಕ್ಕರೆ ಕಾರ್ಖಾನೆಯಲ್ಲಿದ್ದ ಬಿಹಾರ ಮೂಲದ ಸಾಹೇಬ ಸಿಬಾಲಕ ಮಹತೋ(32) ಎಂದು ಗುರುತಿಸಲಾಗಿದೆ. ಗಂಗಾಪುರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ರಂಜನಕುಮಾರ ಹರಫಾದೇವನು ಸಾಹೇಬನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಕೊರ್ಲಹಳ್ಳಿ ಕಡೆಯಿಂದ ಮುಂಡರಗಿ ಕಡೆಗೆ ಬರುತ್ತಿದ್ದರು. ಇದೇ ವೇಳೆ ಮತ್ತೊರ್ವ ಬೈಕ್ ಸವಾರ ಮುಂಡರಗಿ ಕಡೆಯಿಂದ ಕೊರ್ಲಹಳ್ಳಿ ಕಡೆಗೆ ಅತಿ ವೇಗವಾಗಿ ನಿಷ್ಕಾಳಜಿತನದಿಂದ ಬೈಕ್ ಚಲಾಯಿಸಿದ್ದರಿಂದಾಗಿ ರಂಜನಕುಮಾರ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಮೂವರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು.ಆಗ ಲಾರಿಯು ಸಾಹೇಬನ ಮೇಲೆ ಹಾಯ್ದು ಹೋಗಿದ್ದರಿಂದ ಸಾಹೇಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.