ಸಾರಾಂಶ
ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾತ್ರವಲ್ಲದೇ ಬ್ಯಾನ್ ಆಗಿರುವ ಔಷಧಿಯಿಂದ ಚಿಕಿತ್ಸೆ ನೀಡಿದ್ದಕ್ಕಾಗಿ ರಾಜ್ಯದ ವಿವಿಧ ಭಾಗಗಳಲ್ಲಿ 100ಕ್ಕೂ ಬಾಣಂತಿಯರ ಸಾವಾಗಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಶ್ರೀರಾಮುಲು ಹೇಳಿದರು.
ಗದಗ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾತ್ರವಲ್ಲದೇ ಬ್ಯಾನ್ ಆಗಿರುವ ಔಷಧಿಯಿಂದ ಚಿಕಿತ್ಸೆ ನೀಡಿದ್ದಕ್ಕಾಗಿ ರಾಜ್ಯದ ವಿವಿಧ ಭಾಗಗಳಲ್ಲಿ 100ಕ್ಕೂ ಬಾಣಂತಿಯರ ಸಾವಾಗಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಶ್ರೀರಾಮುಲು ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಂಗರ್ ಲ್ಯಾಕ್ಟೇಟ್ ಸೆಲ್ಯೂಷನ್ ಎಂಬ ಐವಿ ದ್ರಾವಣದಿಂದ ಬಾಣಂತಿಯರ ಸಾವಾಗಿದೆ. ಸೆಪ್ಟೆಂಬರ್ 2023ರಲ್ಲಿ ಇದೇ ಸರ್ಕಾರ ಈ ಔಷಧಿಯನ್ನು ಬ್ಯಾನ್ ಮಾಡಿದೆ. ಬ್ಯಾನ್ ಆಗಿರುವ ಕಂಪನಿಯಿಂದ ಸರ್ಕಾರ ಔಷಧಿ ಖರೀದಿ ಮಾಡಿದೆ. ಈ ಔಷಧಿ ಯೋಗ್ಯ ಅಲ್ಲ ಎಂಬ ಕಾರಣಕ್ಕೆ ಸರ್ಕಾರವೇ ಬ್ಯಾನ್ ಮಾಡಿದೆ, ಆದರೂ ಅದೇ ಔಷಧಿ ಬಾಣಂತಿಯರಿಗೆ ಸರ್ಕಾರವೇ ನೀಡಿದೆ ಎಂದರೆ ಏನರ್ಥ? ಸರ್ಕಾರದ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವಾಗಿದೆ. ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಇದೇ ರೀತಿ ಸಾಕಷ್ಟು ಬಾಣಂತಿಯರ ಸಾವಾಗಿದೆ. ಆದರೆ ಸರ್ಕಾರ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ನಾನು ಎರಡು ಬಾರಿ ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದೇನೆ, ಈ ಬಗ್ಗೆ ನನಗೂ ಜ್ಞಾನ ಇದೆ, ಮೂರು ದಿನಗಳಲ್ಲಾದ ಸರಣಿ ಸಾವಿನ ಬಗ್ಗೆ ಮಾಹಿತಿ ಪಡೆದಿದ್ದೇನೆ. ಯಾವುದೇ ಔಷಧ ಜನರಿಗೆ ಕೊಡಬೇಕಾದರೆ ಡ್ರಗ್ಸ್ ಆ್ಯಂಡ್ ಲಾಜಿಸ್ಟಿಕ್ಸ್ ವೇರ್ ಹೌಸ್ ಇರುತ್ತದೆ. ಅಲ್ಲಿ ಔಷಧೀಯ ಗುಣಮಟ್ಟದ ಟೆಸ್ಟ್ ಆಗುತ್ತದೆ. ಆ ಟೆಸ್ಟ್ ಆದ ಮೇಲೆಯೇ ಸಾರ್ವಜನಿಕರಿಗೆ ಕೊಡಬೇಕು ಎಂದು ಹೇಳಿದರು.
ಮಾರ್ಚ್‌ದಿಂದ ಇಲ್ಲಿಯವರೆಗೂ ಸಾಕಷ್ಟು ಬಾಣಂತಿಯರ ಸಾವಾಗಿವೆ. ಕೋಲಾರ, ಪಾವಗಡ, ತುಮಕೂರು ದಾವಣಗೆರೆ ಸೇರಿ ರಾಜ್ಯದ ಹಲವು ಜಿಲ್ಲೆಯಲ್ಲಿ ಬಾಣಂತಿಯರ ಸಾವು ಸಂಭವಿಸಿವೆ. ಬಾಣಂತಿಯರ ಸಾವಿಗೆ ಕಾರಣ ಯಾರು? ಗುಣಮಟ್ಟದ ಔಷಧಿ ಕೊಡದ ಕಾರಣ ಬಾಣಂತಿಯರ ಸಾವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಧಿಕಾರಿಗಳು ಕ್ವಾಲಿಟಿ ಚೆಕ್ ಮಾಡಬೇಕಿತ್ತು. ಯಾವ ಕಾರಣಕ್ಕಾಗಿ ನಿರ್ಲಕ್ಷ್ಯ ಮಾಡಿದ್ದಾರೆ? ನಿರ್ಲಕ್ಷ್ಯ ಮಾಡಿದವರು ಯಾರು ಎನ್ನುವುದರ ಬಗ್ಗೆಯೂ ತನಿಖೆಯಾಗಬೇಕು. ಪಶ್ಚಿಮ ಬಂಗಾಳದಲ್ಲಿ ಈ ಕಂಪನಿ ಬ್ಯಾನ್ ಆಗಿದೆ. ನಮ್ಮ ರಾಜ್ಯ ಸರ್ಕಾರವೇ ಈ ಕಂಪನಿ ಬ್ಯಾನ್ ಮಾಡಿದೆ, ಸರ್ಕಾರ ಕ್ವಾಲಿಟಿ ಚೆಕ್ ಮಾಡಿಲ್ಲ. ಸರ್ಕಾರ, ಸಚಿವರು, ಅಧಿಕಾರಿಗಳ ನಿರ್ಲಕ್ಷ್ಯ ಕಾರಣ, ಇಷ್ಟೊಂದು ದೊಡ್ಡ ಅನಾಹುತವಾಗಿ ಹಲವಾರು ತಿಂಗಳು ಕಳೆದು ನೂರು ಜನ ಸತ್ತ ಬಳಿಕ ಸಿಎಂ ಈಗ ಮಾತನಾಡಿದ್ದಾರೆ. ನೂರು ಬಾಣಂತಿಯರ ಸಾವಿನ ಹೊಣೆ ಯಾರು ಎಂದು ಪ್ರಶ್ನಿಸಿದರು.
ಬಾಣಂತಿಯರ ಸಾವು, ಇದು ಸರ್ಕಾರದ ಪ್ರಾಯೋಜಿತ ಕೊಲೆ:
ರಾಜ್ಯದಲ್ಲಿ ನಡೆದಿರುವ ಬಾಣಂತಿಯರ ಸಾವು ಪ್ರಕರಣವು ಸರ್ಕಾರದ ಪ್ರಾಯೋಜಿತ ಕೊಲೆ ಎಂದರೆ ತಪ್ಪಾಗಲಾರದು, ಸಿಎಂ, ಸಚಿವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡ ದುರಂತ ಆಗಿ ಹೋಗಿದೆ. ಕಳಪೆ ಗುಣಮಟ್ಟದ ಔಷಧಿ ವಿತರಣೆ ತಕ್ಷಣವೇ ನಿಲ್ಲಿಸಬೇಕು. ಬಾಣಂತಿಯರ ಸಾವು ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು. ನಿವೃತ್ತ ನ್ಯಾಯಮೂರ್ತಿ, ಅಧಿಕಾರಿಗಳಿಂದ ತನಿಖೆ ಬೇಡ, ಸಿಬಿಐಗೆ ಕೊಟ್ಟರೆ ಎಲ್ಲರೂ ಜೈಲಿಗೆ ಹೋಗಬೇಕಾಗುತ್ತದೆ. ಬಾಣಂತಿಯರ ಸಾವಿಗೆ ಕಾರಣವಾದ ಸರ್ಕಾರಕ್ಕೆ ನೈತಿಕತೆ ಇಲ್ಲ, ತಕ್ಷಣವೇ ಆರೋಗ್ಯ ಸಚಿವರು ರಾಜಿನಾಮೆ ನೀಡಬೇಕು ಎಂದು ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತ ಪಡಿಸಿದರು.