ಜ.22ರ ನಂತರ ಅಯೋಧ್ಯೆಗೆ ಕರ್ನಾಟಕದಿಂದ 12ಕ್ಕೂ ಹೆಚ್ಚು ರೈಲು

| Published : Jan 16 2024, 01:51 AM IST / Updated: Jan 16 2024, 07:29 PM IST

ಜ.22ರ ನಂತರ ಅಯೋಧ್ಯೆಗೆ ಕರ್ನಾಟಕದಿಂದ 12ಕ್ಕೂ ಹೆಚ್ಚು ರೈಲು
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮುಗಿಯುತ್ತಿದ್ದಂತೆ, ನೈರುತ್ಯ ರೈಲ್ವೆ ವಲಯ ರಾಜ್ಯದ ವಿವಿಧೆಡೆಯಿಂದ ಸುಮಾರು 12ಕ್ಕೂ ಅಧಿಕ ವಿಶೇಷ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ.

ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅತ್ತ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮುಗಿಯುತ್ತಿದ್ದಂತೆ, ಇತ್ತ ನೈರುತ್ಯ ರೈಲ್ವೆ ವಲಯ ರಾಜ್ಯದ ವಿವಿಧೆಡೆಯಿಂದ ಸುಮಾರು 12ಕ್ಕೂ ಅಧಿಕ ವಿಶೇಷ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ. 

ಶೀಘ್ರದಲ್ಲೇ ರೈಲುಗಳ ಸಮಯ ಹಾಗೂ ದಿನ ನಿಗದಿಪಡಿಸಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗುವುದು. ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ಜ.22ರಂದು ನಡೆಯಲಿದೆ. ಅದಾದ ಬಳಿಕ ಮಂದಿರ ವೀಕ್ಷಣೆಗೆ ಎಲ್ಲೆಡೆ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಗಳು ತೆರಳಲಿದ್ದಾರೆ. 

ಇವರ ಅನುಕೂಲಕ್ಕಾಗಿ ಅಲ್ಲಿಗೆ ನೇರವಾಗಿ ರೈಲ್ವೆ ಸಂಪರ್ಕ ಕಲ್ಪಿಸುವ ಯೋಚನೆ ಜನಪ್ರತಿನಿಧಿಗಳದ್ದು. ಅದಕ್ಕೆ ತಕ್ಕಂತೆ ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಈ ಹಿಂದೆ ವಾರಣಾಸಿ ಪ್ರವಾಸಕ್ಕೆ ವ್ಯವಸ್ಥೆ ಮಾಡಿದಂತೆಯೇ ಇಲ್ಲೂ ಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರ ಗುಂಪುಗಳನ್ನು ವಿಂಗಡಿಸಿ ಒಬ್ಬರೋ, ಇಬ್ಬರೋ ನಾಯಕರನ್ನಾಗಿ ಮಾಡಿ ಅಯೋಧ್ಯೆ ಪ್ರವಾಸಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಎಲ್ಲ ಭಕ್ತರ ಮನೆಗಳಿಗೆ ಮುಟ್ಟಿಸಲಾಗುತ್ತಿದೆ. ಆದರೆ, ಜ.22ರಂದು ಎಲ್ಲರಿಗೂ ಅಯೋಧ್ಯೆಗೆ ತೆರಳಲು ಅವಕಾಶವಿಲ್ಲ. ಸದ್ಯದ ಮಾಹಿತಿ ಪ್ರಕಾರ ಅತ್ತ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠೆ ಮುಗಿಯುತ್ತಿದ್ದಂತೆ ಇತ್ತ ರೈಲುಗಳ ಸಂಚಾರವೂ ಆರಂಭವಾಗಲಿವೆ. 

ಹುಬ್ಬಳ್ಳಿ- 3, ಬೆಳಗಾವಿ-2, ಶಿವಮೊಗ್ಗ-2, ಮೈಸೂರು-2 ಸೇರಿದಂತೆ ಬೇರೆ, ಬೇರೆ ಊರುಗಳಿಂದ ಸುಮಾರು 12ಕ್ಕೂ ಹೆಚ್ಚು ರೈಲುಗಳು ಸಂಚರಿಸುವ ಸಾಧ್ಯತೆ ಇದೆ.

ಒಂದು ರೈಲು ಹೋಗಿ ಬಂದ ಬಳಿಕ ಮತ್ತೊಂದು ರೈಲು ಆ ಊರಿನಿಂದ ಹೊರಡಲಿದೆ. ಅಯೋಧ್ಯೆಯಲ್ಲಿ ರಶ್‌ ಆಗಬಾರದು ಎಂಬ ಮುಂದಾಲೋಚನೆಯಿಂದ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.

ಈ ರೈಲುಗಳಿಗೆ ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್‌ ಬುಕ್‌ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೌಂಟರ್‌ ಟಿಕೆಟ್‌ ಪಡೆಯಲು ಅವಕಾಶ ಇಲ್ಲ. ಎಷ್ಟು ಟಿಕೆಟ್‌ ಬುಕ್‌ ಮಾಡುತ್ತಾರೆ ಎಂಬುದನ್ನು ನೋಡಿಕೊಂಡ ಮೇಲೆಯೇ ರೈಲು ಸಂಚರಿಸಲಿವೆಯಂತೆ. ಐಆರ್‌ಸಿಟಿಸಿಯೇ ಟಿಕೆಟ್‌ ಬುಕ್ಕಿಂಗ್‌ನ್ನೆಲ್ಲ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆಗೆ ಎಷ್ಟು ರೈಲುಗಳನ್ನು ಬಿಡಬೇಕು ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ. ಬೇಡಿಕೆ ಬಂದ ಮೇಲೆ ಇಲಾಖೆ ನಿರ್ಧರಿಸಲಿದೆ. ಇಲಾಖೆಯ ನಿರ್ದೇಶನದ ಮೇಲೆ ಅಂತಿಮಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಶ್ರೀರಾಮನ ದರ್ಶನಕ್ಕೆ ಭಕ್ತರನ್ನು ಕರೆದುಕೊಂಡು ಹೋಗುವ ಯೋಚನೆ ಇದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಂದಲೂ ಭಕ್ತರನ್ನು ಕರೆದುಕೊಂಡು ಹೋಗುವ ಯೋಚನೆ ಇದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.