ರಾಮಾಪುರದಲ್ಲಿ 15ಕ್ಕೂ ಹೆಚ್ಚು ಸರ್ಕಾರಿ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳಿಗೆ ಅಲರ್ಜಿ

| N/A | Published : Feb 27 2025, 12:34 AM IST / Updated: Feb 27 2025, 12:06 PM IST

ರಾಮಾಪುರದಲ್ಲಿ 15ಕ್ಕೂ ಹೆಚ್ಚು ಸರ್ಕಾರಿ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳಿಗೆ ಅಲರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ರಾಮಾಪುರ ಸರ್ಕಾರಿ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳಿಗೆ ವಿಚಿತ್ರ ಕಾಯಿಲೆ ತಪಾಸಣೆ ನಡೆಯಿತು.

 ಹನೂರು : ತಾಲೂಕಿನ ರಾಮಾಪುರ ಗ್ರಾಮದಲ್ಲಿರುವ ಡಾ.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿನ ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಳೆದ ಒಂದು ವಾರದಿಂದ ಅಲರ್ಜಿ ಕಾಣಿಸಿಕೊಂಡಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಚಿಕಿತ್ಸೆ ಕೊಡಿಸದೇ ಇರುವುದರಿಂದ ಅಲರ್ಜಿ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ನವೆ ಕಾಣಿಸಿಕೊಂಡಿದೆ.ಈ ಬಗ್ಗೆ ಪೋಷಕರು ರೈತ ಸಂಘದ ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ರೈತ ಮುಖಂಡರು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿತ್ತು. ಇದಲ್ಲದೆ ಕುಡಿಯುವ ನೀರಿನ ತೊಟ್ಟಿ ಸ್ವಚ್ಛ ಮಾಡದೇ ಇರುವುದರಿಂದ ಸಣ್ಣ ಸಣ್ಣ ಹುಳುಗಳು ಪತ್ತೆಯಾಗಿದೆ. ಇದೇ ನೀರನ್ನು ವಿದ್ಯಾರ್ಥಿ ನಿಲಯದಲ್ಲಿ ಅಳವಡಿಸಲಾಗಿರುವ ಟ್ಯಾಂಕಿಗೆ ಪೂರೈಕೆ ಮಾಡಿ ವಿದ್ಯಾರ್ಥಿಗಳು ಬಳಸುತ್ತಿರುವುದರಿಂದ ಅಲರ್ಜಿ ಕಾಣಿಸಿಕೊಂಡಿದೆ. ಆಹಾರ ಪದಾರ್ಥಗಳಲ್ಲಿಯೂ ಹುಳು ಬಂದಿದ್ದು ಇದೇ ಪದಾರ್ಥಗಳನ್ನು ಬಳಕೆ ಮಾಡಿ ಉಪಹಾರ ಮಾಡುತ್ತಿರುವುದರಿಂದ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಆಕ್ರೋಶ ಹೊರ ಹಾಕಿದರು.

ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಪ್ರಕಾಶ್ ಸ್ಥಳದಲ್ಲಿ ಇಲ್ಲದೆ ಇರುವುದಕ್ಕೆ ಮೊಬೈಲ್‌ ಕರೆ ಮಾಡಿ ತರಾಟೆಗೆ ತೆಗೆದುಕೊಂಡು, ವಿದ್ಯಾರ್ಥಿ ನಿಲಯಕ್ಕೆ ಕರೆಸಿಕೊಂಡಿದ್ದಾರೆ. ನಂತರ ವಿದ್ಯಾರ್ಥಿ ನಿಲಯದ ಅವಸ್ಥೆಯನ್ನು ಅವರ ಮುಂದೆಯೇ ತೋರಿಸಿದಾಗ ಅಧಿಕಾರಿಯು ಮುಂದೆ ಸರಿಪಡಿಸಿಕೊಳ್ಳುವುದಾಗಿ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ರಾಜ್ಯ ರೈತ ಸಂಘದ ತಾಲೂಕುಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಸರ್ಕಾರ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೋಟ್ಯಂತರ ರು. ಅನುದಾನ ನೀಡಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ, ಮಲಗುವ ಕೋಣೆಯ ಹಾಸಿಗೆಯ ಮೇಲೆ ಮಂಗಗಳು ಮಲಗಿ ಗಲೀಜು ಮಾಡುತ್ತಿದೆ. ಇದೇ ಹಾಸಿಗೆಯ ಮೇಲೆ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ. 

ವಿದ್ಯಾರ್ಥಿಗಳಿಗೆ ಬೆಡ್ ಶೀಟ್ ನೀಡದೆ ಪ್ಲಾಸ್ಟಿಕ್ ಕವರ್ ಕೊಟ್ಟು ಏಕೆ ಮಲಗಿಸುತ್ತಿದ್ದೀರಾ? ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮುಂಜಾಗ್ರತ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿತನ ತೋರಿಸುತ್ತಿದ್ದೀರಾ, ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ? ಇನ್ನು 3 ದಿನಗಳೊಳಗೆ ಸಮಸ್ಯೆ ಬಗೆಹರಿಸಬೇಕು. ನೀರಿನ ತೊಟ್ಟಿ, ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿಗಳಿಗೆ ನೀರು ಪೂರೈಕೆ ಮಾಡಬೇಕು, ಅಲರ್ಜಿ ಕಾಣಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಬೇಕು. ಇಲ್ಲದಿದ್ದರೆ ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳಿಗೆ ಚಿಕಿತ್ಸೆ:

ವಿದ್ಯಾರ್ಥಿಗಳಿಗೆ ಅಲರ್ಜಿ ಕಾಣಿಸಿಕೊಂಡಿರುವುದರಿಂದ ರಾಜ್ಯ ಸಂಘದ ಮನವಿಯ ಮೇರೆಗೆ ತಾಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ನೇತೃತ್ವದ ತಂಡ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ವಿದ್ಯಾರ್ಥಿಗಳು ಆರೋಗ್ಯದ ದೃಷ್ಟಿಯಿಂದ ಬಿಸಿ ನೀರನ್ನು ಕುಡಿಯಬೇಕು ಎಂದು ಸಲಹೆ ನೀಡಿದ್ದಾರೆ. ಚಿಕಿತ್ಸೆಯ ನಂತರ ಶೌಚಾಲಯಕ್ಕೆ ಭೇಟಿ ನೀಡಿದಾಗ ಸ್ವಚ್ಛತೆ ಇಲ್ಲದೆ ಇರುವುದನ್ನು ನೋಡಿದ ತಾಲೂಕು ವೈದ್ಯಾಧಿಕಾರಿ ಸ್ಥಳದಲ್ಲಿಯೇ ಇದ್ದ ಸಿಬ್ಬಂದಿಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ.ಈ ವೇಳೆ ವೈದ್ಯಾಧಿಕಾರಿ ಡಾ.ಮನು, ಡಾ.ಉಲ್ಲಾಸ್ ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆ ನೀಡಿದರು. 

ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿ ನಿಲಯದ ಪ್ರತಿಯೊಬ್ಬ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ನಮ್ಮ ಜವಾಬ್ದಾರಿ. ಈಗಿನ ಸಮಸ್ಯೆಗಳನ್ನು 2-3 ದಿನಗಳಲ್ಲಿ ಬಗೆಹರಿಸುತ್ತೇನೆ. ಪ್ರತಿ ವಾರಕ್ಕೊಮ್ಮೆ ನೀರಿನ ತೊಟ್ಟಿ ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ತಿಳಿಸಿದರು. ಆದರೆ ರೈತರು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ರಾಜಣ್ಣ ಉಪಾಧ್ಯಕ್ಷ ಪಳನಿ ಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.