ಸಾರಾಂಶ
ಬಾಡಗ - ಬಾಣಂಗಾಲ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿರಾಜಪೇಟೆ ತಾಲೂಕಿನ ಬಾಡಂಗ ಬಾಣಂಗಾಲ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಕಾಡಾನೆಗಳು ತೋಟ-ಗದ್ದೆಗಳಿಗೆ ನುಗ್ಗಿ ಹಾವಳಿ ಇಡುತ್ತಿರುವುದರಿಂದ ಲಕ್ಷಾಂತರ ರು. ಮೌಲ್ಯದ ಬೆಳೆ ನಾಶವಾಗುತ್ತಿದೆ.ಗ್ರಾಮದ ಕಾಫಿ ತೋಟಗಳಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಂಡುಬಂದಿದ್ದು, ತೋಟದ ಕಾರ್ಮಿಕರು ಕಾಫಿ ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಅರಣ್ಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿ ಕಾಡಾನೆಗಳನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು.
ವಿರಾಜಪೇಟೆ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮತ್ತು ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.---------------------------------
ಹುಲಿ ದಾಳಿಯಿಂದ ಹಸು ಕಳೆದುಕೊಂಡ ಸಂತ್ರಸ್ತರ ಮನೆಗೆ ಶಾಸಕ ಭೇಟಿಶ್ರೀಮಂಗಲ: ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಈಚೆಗೆ ಹುಲಿ ದಾಳಿಯಿಂದ ಹಸು ಕಳೆದುಕೊಂಡ ಸಂತ್ರಸ್ತ ಬೆಳೆಗಾರ ನೂರೆರ ರಮೇಶ್ ಅವರನ್ನು ಶನಿವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ಮಾಡಿ ಮುಂದಿನ ಅಗತ್ಯವಾದ ಮುಂಜಾಗ್ರತ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರೀರ ನವೀನ್, ಟಿ. ಶೆಟ್ಟಿಗೇರಿ ವಲಯ ಅಧ್ಯಕ್ಷ ತೀತಿರ ಪ್ರಭು, ಇಟ್ಟಿರ ಪೊನ್ನಣ್ಣ, ಭವಿನ್ ಕುಶಾಲಪ್ಪ, ನೂರೆರ ಮನೋಜ್, ಮನೋಹರ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.