ಮಳೆಗೆ ಕೆರೆ ಅಂಚಿನ 20ಕ್ಕೂ ಹೆಚ್ಚು ಮನೆಗಳು ಜಲಾವೃತ

| Published : May 20 2024, 01:39 AM IST

ಸಾರಾಂಶ

ಬೆಂಗಳೂರಿನ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಯಲಹಂಕದ ಪುಟ್ಟೇನಹಳ್ಳಿ ಕೆರೆ ಅಂಚಿನ ರಮಣಶ್ರೀ ಗಾರ್ಡೇನಿಯಾ ಲೇಔಟ್ ಹಾಗೂ ನಾರ್ತ್ ಹುಡ್ ಅಪಾರ್ಟ್‌ಮೆಂಟ್‌ ಸೇರಿದಂತೆ ಸುಮಾರು 20ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

ಯಲಹಂಕ ಸೇರಿದಂತೆ ಉತ್ತರ ಬೆಂಗಳೂರು ಭಾಗದಲ್ಲಿ ಶನಿವಾರ ಭಾರೀ ಮಳೆ ಸುರಿದಿದೆ. ಮಳೆ ನೀರು ಹರಿದು ಹೋಗಲು ಸೂಕ್ತ ಅವಕಾಶ ಇಲ್ಲದೇ ಸುಮಾರು ಮೂರು ಅಡಿಗೂ ಅಧಿಕ ಪ್ರಮಾಣದ ನೀರು ಇಡೀ ಪ್ರದೇಶವನ್ನು ಆವರಿಸಿದೆ. ಜನರು ಬೋಟ್‌ ಬಳಸಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು. ರಸ್ತೆ ಹಾಗೂ ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದವು. ಬಿಬಿಎಂಪಿಯ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ನಿಂತ ನೀರನ್ನು ಪಂಪ್‌ ಬಳಕೆ ಮಾಡಿ ತೆರವುಗೊಳಿಸಿದ್ದಾರೆ.

ಕಳೆದ ಒಂದು ವಾರದಿಂದ ನೀರು ಶೇಖರಣೆ ಆಗುತ್ತಿದ್ದಂತೆ ಆತಂಕದಲ್ಲಿ ಈಗಾಗಲೇ ಹಲವರು ಮನೆಗಳನ್ನು ಖಾಲಿ ಮಾಡಿಕೊಂಡು ಹೋಗಿದ್ದರು. ಸ್ಥಳೀಯ ನಿವಾಸಿಗಳು ಈ ಬಗ್ಗೆ ಒಂದು ವಾರದ ಹಿಂದೆಯೇ ಬಿಬಿಎಂಪಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮನ್ವಯ ಕೊರತೆ

ಪುಟ್ಟೇನಹಳ್ಳಿ ಕೆರೆ ಅರಣ್ಯ ಇಲಾಖೆಯ ಅದೀನದಲ್ಲಿದೆ. ಬಿಬಿಎಂಪಿಯಿಂದ ಪುಟ್ಟೇನಹಳ್ಳಿ ಕೆರೆಯ ದಂಡೆಯವರೆಗೆ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ. ಪುಟ್ಟೇನಹಳ್ಳಿ ಕೆರೆಗೆ ರಾಜಕಾಲುವೆ ಸಂಪರ್ಕ ನೀಡಲು ಮೂರು ಮೀಟರ್‌ ಕಾಮಗಾರಿ ಮಾಡಬೇಕು. ಆದರೆ, ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿದು ಬರುತ್ತಿರುವುದರಿಂದ ಅರಣ್ಯ ಇಲಾಖೆ ಅವಕಾಶ ನೀಡಿಲ್ಲ. ಪಾಲಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ವಯ ಕೊರತೆಯ ಪರಿಣಾಮ ಜನರು ಸಂಕಷ್ಟಕ್ಕೆ ಒಳಗಾಗಬೇಕಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮಲೆನಾಡಿನಂತಾದ ಬೆಂಗಳೂರು

ಶನಿವಾರ ಇಡೀ ರಾತ್ರಿ ನಗರದ ವಿವಿಧ ಭಾಗದಲ್ಲಿ ಮಳೆ ಸುರಿದಿದೆ. ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಕೆಲವೆಡೆ ದಿಢೀರ್ ಮಳೆ ಸುರಿಯಿತು. ಕೋರಮಂಗಲ, ಡೈರಿ, ವೃತ್ತ, ಬೆಳ್ಳಂದೂರು, ಇಂದಿರಾನಗರ, ವಿಜಯನಗರ, ಮೆಜೆಸ್ಟಿಕ್, ವಿದ್ಯಾರಣ್ಯಪುರ, ಹೆಬ್ಬಾಳ, ರಾಜರಾಜೇಶ್ವರಿನಗರ, ಯಶವಂತಪುರ, ಚಾಮರಾಜಪೇಟೆ, ಜೆ.ಪಿ.ನಗರ, ಜಯನಗರ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ಕೆ.ಆರ್‌ವೃತ್ತ, ಕಾವೇರಿ ಥಿಯೇಟರ್, ಓಕಳಿಪುರ ಬ್ರಿಡ್ಜ್, ಶಿವಾನಂದ ವೃತ್ತದಲ್ಲಿನ ರೈಲ್ವೆ ಬ್ರಿಡ್ಜ್ ಕೆಳಗೆ ರಸ್ತೆ ಮೇಲೆ ನೀರು ನಿಂತು ಜನರು ಪರದಾಡಿದರು.

15ಕ್ಕೂ ಅಧಿಕ ಮರ ಧರೆಗೆ

ಶನಿವಾರ ಮತ್ತು ಭಾನುವಾರ ನಗರದಲ್ಲಿ ಸುರಿದ ಮಳೆಗೆ ಒಟ್ಟು 15 ಮರ ಹಾಗೂ 49 ರೆಂಬೆ, ಕೊಂಬೆಗಳು ಧರೆಗುರುಳಿವೆ. ಯಲಹಂಕ ವಲಯದಲ್ಲಿ 7 ಮರ ಹಾಗೂ 10 ಕೊಂಬೆಗಳು ಬಿದ್ದಿವೆ. ದಾಸರಹಳ್ಳಿಯಲ್ಲಿ 2 ಮರ, 4 ಕೊಂಬೆ ಉಳಿದ ವಲಯದಲ್ಲಿ ತಲಾ 1 ಮರ ಧರೆಗುರುಳಿವೆ. ಮರಗಳನ್ನು ಬಿಬಿಎಂಪಿಯಿಂದ ತೆರವುಗೊಳಿಸಲಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.

ವಿಶೇಷ ಆಯುಕ್ತರಿಂದ ಪರಿಶೀಲನೆ

ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ। ಕೆ.ಹರೀಶ್ ಕುಮಾರ್, ವಿಪತ್ತು ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಭಾನುವಾರ ಗಾಳಿ ಆಂಜನೇಯ ಸ್ವಾಮಿ‌ ದೇವಸ್ಥಾನ, ಕ.ವಿ.ಕಾ, ನಾಯಂಡಹಳ್ಳಿ, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಎಚ್‌ಎಸ್‌ಆರ್ ಲೇಔಟ್ ಬಳಿಯ ರಾಜಕಾಲುವೆ ಪರಿಶೀಲಿಸಿದರು. ರಾಜಕಾಲುವೆಗಳಲ್ಲಿ ಸಂಪೂರ್ಣ ಹೂಳು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಯಲಹಂಕದಲ್ಲಿ ಅತೀ ಹೆಚ್ಚು 5.2 ಸೆಂ.ಮೀಟರ್‌ ಮಳೆ

ಭಾನುವಾರ ಯಲಹಂಕದಲ್ಲಿ ಅತಿ ಹೆಚ್ಚು 5.2 ಸೆಂ.ಮೀ ಮಳೆಯಾಗಿದೆ. ಹಂಪಿನಗರ 4.7, ಪೀಣ್ಯ ಕೈಗಾರಿಕಾ ಪ್ರದೇಶ 4.4, ಚೌಡೇಶ್ವರಿ ವಾರ್ಡ್‌ 4.3, ಮಾರುತಿ ಮಂದಿರ, ಹೊರಮಾವು ಹಾಗೂ ಕೋನೇನ ಅಗ್ರಹಾರದಲ್ಲಿ ತಲಾ 3.6, ಮಾರತ್‌ ಹಳ್ಳಿ 3, ದೊಡ್ಡಾನೆಕುಂದಿ, ಬಾಗಲಗುಂಟೆಯಲ್ಲಿ ತಲಾ 2.7, ಕೊಡಿಗೆಹಳ್ಳಿ 2.6, ವನ್ನಾರ್‌ ಪೇಟೆ, ನಂದಿನಿ ಲೇಔಟ್‌ನಲ್ಲಿ ತಲಾ 2.5, ಚೊಕ್ಕಸಂದ್ರ 2.3, ಬಸವನಗುಡಿ 2.2, ಜಕ್ಕೂರು 2.1, ಕಾಟನ್‌ಪೇಟೆ, ಚಾಮರಾಜಪೇಟೆ, ವಿದ್ಯಾರಣ್ಯಪುರ, ನಾಯಂಡಹಳ್ಳಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.