ಶೋಷಣೆಗೆ ಒಳಗಾದ ಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿಸಲು ಆಗ್ರಹ

| Published : Apr 28 2025, 12:47 AM IST

ಶೋಷಣೆಗೆ ಒಳಗಾದ ಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವು ಗುತ್ತಿಗೆದಾರರು ಪಿಎಫ್ ಮತ್ತು ಇಎಸ್ಐ ಹಣ ಕಡಿತ ಮಾಡಿದರೂ ಕೂಡ ಆ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳಿವೆ.

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದ ನಾನಾ ಇಲಾಖೆಗಳಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಗುತ್ತಿಗೆ ಪಡೆದವರು ಸರ್ಕಾರದ ನಿಯಮನುಸಾರ ನಿಗದಿಪಡಿಸಿದ ವೇತನ ಪಾವತಿಸದೆ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸದೆ ಶೋಷಣೆ ಮಾಡುತ್ತಿರುವುದರಿಂದ ಸರ್ಕಾರ ಅವರಿಗೆ ನೇರವಾಗಿ ವೇತನ ಪಾವತಿಸಬೇಕು ಎಂದು ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಒತ್ತಾಯಿಸಿದ್ದಾರೆ.ರಾಜ್ಯ ಸರ್ಕಾರ ಕಳೆದ 20 ವರ್ಷಗಳಿಂದ ನಿಯಮಿತವಾಗಿ ನೇಮಕಾತಿ ಮಾಡದ ಕಾರಣ, ವಿಧಾನ ಸೌಧ, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಮೃಗಾಲಯಗಳು, ನೀರು ಸರಬರಾಜು ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾತ್ಕಾಲಿಕ ನೌಕರರು, ಗುತ್ತಿಗೆ ನೌಕರರು ಹಾಗೂ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಗುತ್ತಿಗೆ ನೌಕರರನ್ನು ಒದಗಿಸಲು ಟೆಂಡರ್ ಪಡೆದಿರುವ ಗುತ್ತಿಗೆದಾರರು ಇಲಾಖೆಗಳಿಂದ ಪಡೆಯುವ ವೇತನದ ಮೊತ್ತದಲ್ಲಿ ಶೇ. 30 ರಿಂದ 40 ರವರೆಗೆ ಕಡಿತ ಮಾಡುತ್ತಿದ್ದಾರೆ.ಅಲ್ಲದೆ ಕೆಲವು ಗುತ್ತಿಗೆದಾರರು ಪಿಎಫ್ ಮತ್ತು ಇಎಸ್ಐ ಹಣ ಕಡಿತ ಮಾಡಿದರೂ ಕೂಡ ಆ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳಿವೆ. ಅಲ್ಲದೆ ನಿಯಮಿತವಾಗಿ ಆಯಾಯ ತಿಂಗಳು ವೇತನ ಪಾವತಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಎರಡ್ಮೂರು ತಿಂಗಳಾದರೂ ವೇತನ ಪಾವತಿಸದಿದ್ದಾಗ ಧ್ವನಿ ಎತ್ತುವ ನೌಕರರನ್ನು ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಾರೆ. ಈ ಸಂಬಂಧ ಅನೇಕ ಪ್ರತಿಭಟನೆ ನಡೆದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.ತಾತ್ಕಾಲಿಕ ನೌಕರರಾಗಲಿ ಅಥವಾ ಗುತ್ತಿಗೆ ನೌಕರರಾಗಲಿ ಹತ್ತು ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರೆ ಅಂತಹ ನೌಕರರನ್ನು ಖಾಯಂಗೊಳಿಸಬೇಕು ಎಂದು ಹೈ ಕೋರ್ಟ್ ಆದೇಶ ನೀಡಿದ್ದರೂ ಸರ್ಕಾರ ಆ ಆದೇಶವನ್ನು ಪಾಲಿಸದೆ ಉದಾಸೀನತೆ ತೋರಿಸುತ್ತಿರುವುದು ನ್ಯಾಯವಲ್ಲ. ಕೊಡಲೇ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.ನಾನು ಮೈಸೂರು ಮೇಯರ್‌ ಆಗಿದ್ದಾಗ ನಗರ ಪಾಲಿಕೆ ಪೌರಕಾರ್ಮಿಕರು ಮತ್ತು ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಗುತ್ತಿಗೆ ನೌಕರರನ್ನು ನೇರ ವೇತನ ಪಾವತಿ ವ್ಯವಸ್ಥೆಗೆ ಸೇರಿಸಲಾಯಿತು. ಅಂತೆಯೇ ಇತ್ತೀಚೆಗೆ ರಾಜ್ಯದ ವಿವಿದೆಢೆ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನೇರ ವೇತನ ವ್ಯವಸ್ಥೆ ಕಲ್ಪಿಸಲಾಗಿದೆ. ಗುತ್ತಿಗೆದಾರರು ಹಣ ಕಬಳಿಸುವ ಪರಿಣಾಮ ಕೆಲವು ಇಲಾಖೆಗಳಲ್ಲಿ ಶಾಸಕರು ಮತ್ತು ಸಚಿವರ ಶಿಫಾರಸ್ಸಿನಿಂದ ಸೇರಿರುವ ಗುತ್ತಿಗೆ ನೌಕರರನ್ನು ನೇರ ವೇತನ ಪಾವತಿಯಡಿ ಸೇರಿಸಲಾಗಿದೆ. ಅದೇ ರೀತಿ ಎಲ್ಲಾ ಇಲಾಖೆಗಳಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ ನೌಕರರಿಗೆ ಇಲಾಖೆಗಳಿಂದಲೇ ನೇರ ವೇತನ ಪಾವತಿಸುವಂತೆ ತಾವು ಅದೇಶ ಹೊರಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.