14 ದಿನದಲ್ಲಿ ₹28 ಕೋಟಿಗೂ ಅಧಿಕ ತೆರಿಗೆ ಸಂಗ್ರಹ!

| Published : Apr 26 2025, 12:48 AM IST

ಸಾರಾಂಶ

ಕಳೆದ ಆರ್ಥಿಕ ವರ್ಷದಲ್ಲಿ ಅಂದರೆ 2024-25ರಲ್ಲಿ ಏಪ್ರಿಲ್‌ 1ರಿಂದ ಮಾರ್ಚ್‌ 31ರ ವರೆಗೆ ಸಾಕಷ್ಟು ಪ್ರಯತ್ನ ಪಟ್ಟರೂ ಸಂಗ್ರಹವಾಗಿದ್ದು ಬರೋಬ್ಬರಿ ₹138 ಕೋಟಿ ಮಾತ್ರ

ಶಿವಾನಂದ ಗೊಂಬಿ ಹುಬ್ಬಳ್ಳಿ

ಪ್ರತಿನಿತ್ಯ ಕನಿಷ್ಠವೆಂದರೂ ₹2 ಕೋಟಿ, 14 ದಿನದಲ್ಲಿ ಸರಿಸುಮಾರು ₹28.54 ಕೋಟಿಗೂ ಅಧಿಕ ತೆರಿಗೆ ಸಂಗ್ರಹ!

ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ 14 ದಿನದಲ್ಲಿ ಸಂಗ್ರಹವಾಗಿರುವ ಆಸ್ತಿಕರ ಪಾವತಿಯ ಬಗೆಗಿನ ಒಂದು ಸಾಲಿನ ವಿವರಣೆ.

ಕಳೆದ ಆರ್ಥಿಕ ವರ್ಷದಲ್ಲಿ ಅಂದರೆ 2024-25ರಲ್ಲಿ ಏಪ್ರಿಲ್‌ 1ರಿಂದ ಮಾರ್ಚ್‌ 31ರ ವರೆಗೆ ಸಾಕಷ್ಟು ಪ್ರಯತ್ನ ಪಟ್ಟರೂ ಸಂಗ್ರಹವಾಗಿದ್ದು ಬರೋಬ್ಬರಿ ₹138 ಕೋಟಿ ಮಾತ್ರ. ಆದರೆ, ಪಾಲಿಕೆಯ ನಿರೀಕ್ಷೆ ಮಾತ್ರ ₹ 200 ಕೋಟಿಗೂ ಅಧಿಕವಾಗಿತ್ತು. ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಅಂದರೆ 2025-26ರ ಆಸ್ತಿಕರ ಸಂಗ್ರಹ ಕೆಲಸ ಏ.10ರಿಂದ ಪಾಲಿಕೆ ಶುರು ಮಾಡಿದೆ.

ಸಬ್‌ ರಿಜಿಸ್ಟರ್‌ ವ್ಯಾಲ್ಯೂನಂತೆ ಈ ಎಲ್ಲ ಆಸ್ತಿಗಳ ತೆರಿಗೆಯನ್ನೂ ಹೆಚ್ಚಿಸಿದೆ. ಮಾರುಕಟ್ಟೆ ದರದಂತೆ ಆಸ್ತಿ ಕರ ಎರಡು ಅಥವಾ 3 ಪಟ್ಟು ತೆರಿಗೆ ಹೆಚ್ಚಿಗೆಯಾಗಿದೆ. ಯುಜಿಡಿ ಬಳಕೆದಾರರ ಶುಲ್ಕ (ಯುಜಿಡಿ ಯೂಜರ್ಸ್ ಚಾರ್ಜ್), ಹಾಗೂ ಘನತ್ಯಾಜ್ಯ ನಿರ್ವಹಣೆ ಮೇಲಿನ ಉಪಕರ (ಸೆಸ್) ಖಾಲಿ ನಿವೇಶನದ ಮೇಲಿನ ಘನತ್ಯಾಜ್ಯ ಬಳಕೆದಾರರ ಶುಲ್ಕ, ವಾಣಿಜ್ಯ ಹಾಗೂ ವಸತಿ ಮನೆಗಳ ಘನತ್ಯಾಜ್ಯ ಬಳಕೆದಾರರ ಶುಲ್ಕ ಹೀಗೆ ತೆರಿಗೆ ಜತೆಗೆ ಹಾಕಲಾಗಿತ್ತು. ಅದು ಸಾರ್ವಜನಿಕರಿಗೆ ವಿಪರೀತ ಹೊರೆಯಾಗಿತ್ತು.

ಇದರ ವಿರುದ್ಧ ಸಾರ್ವಜನಿಕರು ತೀವ್ರಾಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಕೆಸಿಸಿಐಯೇ ಸಾರ್ವಜನಿಕರ ಸಭೆ ನಡೆಸಿ ಹೋರಾಟದ ನೇತೃತ್ವವನ್ನೇ ವಹಿಸಿತ್ತು. ಆಸ್ತಿ ತೆರಿಗೆ ಕಡಿಮೆ ಮಾಡುವ ವರೆಗೂ ಟ್ಯಾಕ್ಸ್‌ ಪಾವತಿಸಬೇಡಿ ಎಂದು ಕೂಡ ಕೆಸಿಸಿಐ ಕರೆ ನೀಡಿತ್ತು. ಇದರಿಂದ ಮೂರು ದಿನ ಹೆಚ್ಚಿನ ಜನಸಾಮಾನ್ಯರು ಪಾಲಿಕೆ ಕಚೇರಿಯತ್ತ ಕೂಡ ಸುಳಿಯಲಿಲ್ಲ. ಬೆರಳಿಣಿಕೆ ಜನರಷ್ಟೇ ಹೋಗಿ ತೆರಿಗೆ ಪಾವತಿಸಿ ಬರುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಬಳಿಕ ಕೆಸಿಸಿಐನ ಹೋರಾಟದ ಎಚ್ಚರಿಕೆಯಿಂದ ಒತ್ತಡಕ್ಕೆ ಮಣಿದ ಪಾಲಿಕೆಯು ಯುಜಿಡಿ ಬಳಕೆದಾರರ ಶುಲ್ಕ (ಯುಜಿಡಿ ಯೂಜರ್ಸ್ ಚಾರ್ಜ್), ಹಾಗೂ ಘನತ್ಯಾಜ್ಯ ನಿರ್ವಹಣೆ ಸೆಸ್ ರದ್ದುಗೊಳಿಸಿತು. ಖಾಲಿ ನಿವೇಶನದ ಮೇಲಿನ ಘನತ್ಯಾಜ್ಯ ಯೂಜರ್ಸ್‌ ಚಾರ್ಜ್‌ನ್ನು ಕಡಿಮೆ ಮಾಡಿತು. ನಮ್ಮ ಒತ್ತಡಕ್ಕೆ ಮಣಿದು ಇಷ್ಟಾದರೂ ಕಡಿಮೆ ಮಾಡಿತು ಅಲ್ವಾ ಎಂದು ಕೆಸಿಸಿಐ ತೆರಿಗೆ ಪಾವತಿಸಿ ಎಂದು ತಿಳಿಸಿತು. ಜತೆಗೆ ಸಾರ್ವಜನಿಕರು ಸೆಸ್‌ ಕಡಿಮೆ ಮಾಡಿದೆ ಬಿಡಿ ಎಂದುಕೊಂಡು ತೆರಿಗೆ ಪಾವತಿಸುತ್ತಿದ್ದಾರೆ.

ಪ್ರತಿದಿನ ₹2 ಕೋಟಿ:

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3.38 ಲಕ್ಷ ಆಸ್ತಿಗಳು ಬರುತ್ತವೆ. ಕಳೆದ ವರ್ಷ ₹138 ಕೋಟಿ ತೆರಿಗೆ ಸಂಗ್ರಹಿಸಿರುವ ಪಾಲಿಕೆ ಈ ಸಲ ₹293.54 ಕೋಟಿ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿದೆ. ಈಗ ಸಂಗ್ರಹವಾಗುತ್ತಿರುವ ತೆರಿಗೆಯ ಮೌಲ್ಯ ನೋಡಿದರೆ ಈ ವರ್ಷದ ಅಂತ್ಯದೊಳಗೆ ಸಲೀಸಾಗಿ ಪಾಲಿಕೆ ತನ್ನ ಗುರಿಯನ್ನು ಮುಟ್ಟುವ ಸಾಧ್ಯತೆಯುಂಟು. ಏ.10ರಿಂದ ತೆರಿಗೆ ವಸೂಲಿಯನ್ನು ಪಾಲಿಕೆ ಶುರು ಮಾಡಿಕೊಂಡಿದೆ. ಈವರೆಗೆ 14 ದಿನಗಳಲ್ಲಿ (ಏ. 24ರ ವರೆಗೆ) ₹28.54 ಕೋಟಿಗೂ ಅಧಿಕವಾಗಿದೆ. ಇದರಲ್ಲಿ ಮೂರು ದಿನ ಅತಿಯಾಗಿ ಕಡಿಮೆಯಾಗಿತ್ತು. ಉಳಿದಂತೆ ಪ್ರತಿದಿನ ಕನಿಷ್ಠವೆಂದರೂ ₹2 ಕೋಟಿ ಅಧಿಕ ತೆರಿಗೆ ಸಂಗ್ರಹವಾಗುತ್ತಿದೆ. ರಜೆ ಇದ್ದ ದಿನಗಳಲ್ಲಿ ₹1 ಅಥವಾ ₹1.5 ಕೋಟಿ ಸಂಗ್ರಹವಾಗುತ್ತಿದೆ ಎಂದು ಪಾಲಿಕೆಯ ಕಂದಾಯ ವಿಭಾಗದ ಮೂಲಗಳು ತಿಳಿಸುತ್ತವೆ.

ವಿನಾಯಿತಿ:

ಮೇ 20ರೊಳಗೆ ತೆರಿಗೆ ಪಾವತಿಸಿದರೆ ಶೇ. 5ರಷ್ಟು ವಿನಾಯಿತಿ ಇದೆ. ಹೀಗಾಗಿ ಹೆಚ್ಚು ಜನರು ತೆರಿಗೆ ಪಾವತಿಸುತ್ತಿದ್ದಾರೆ. ಈ ವಿನಾಯಿತಿ ದಿನವನ್ನು ಮೇ 31ರ ವರೆಗೆ ವಿಸ್ತರಿಸಬೇಕೆಂದು ಕೆಸಿಸಿಐ ತಿಳಿಸಿದೆ. ಅದಕ್ಕೆ ಸ್ಪಂದನೆ ಸಿಗುವ ಸಾಧ್ಯತೆ ಇದೆ ಎಂದು ಪಾಲಿಕೆ ತಿಳಿಸುತ್ತದೆ.

ಸದ್ಯದ ಅಂಕಿ ಸಂಖ್ಯೆಗಳ ಪ್ರಕಾರ 3.38 ಲಕ್ಷ ಆಸ್ತಿಗಳಿವೆ. ಹಾಗೆ ನೋಡಿದರೆ ಇವುಗಳ ಸಂಖ್ಯೆ ಇನ್ನಷ್ಟು ಜಾಸ್ತಿಯಿದೆ. ತೆರಿಗೆಯಿಂದ ಹೊರಗುಳಿದಿರುವ ಆಸ್ತಿಗಳನ್ನು ಸೇರ್ಪಡೆ ಮಾಡಲು ಜಿಐಎಸ್‌ ಸಮೀಕ್ಷೆ ಕಾರ್ಯವೂ ಶುರುವಾಗಲಿದೆ. ಅದು ಮುಗಿದರೆ ತೆರಿಗೆ ಸಂಗ್ರಹದ ಗುರಿ ₹400 ಕೋಟಿ ದಾಟಲಿದೆ.

ಮಾರುಕಟ್ಟೆ ದರದಂತೆ ತೆರಿಗೆಯನ್ನೇನೋ ಸಂಗ್ರಹಿಸುತ್ತಿದ್ದೀರಿ. ಆದರೆ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಪಾಲಿಕೆ ಮಾಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

ಏ. 10ರಿಂದ ತೆರಿಗೆ ಸಂಗ್ರಹ ಕೆಲಸ ಶುರುವಾಗಿದೆ. ಮೇ 20ರ ವರೆಗೆ ಶೇ. 5ರಷ್ಟು ವಿನಾಯಿತಿ ಇದೆ. 14 ದಿನದಲ್ಲಿ ₹28.54 ಕೋಟಿ ತೆರಿಗೆ ಸಂಗ್ರಹವಾಗಿದೆ. ಈ ವರ್ಷ ಕರ ಸಂಗ್ರಹ ಚೆನ್ನಾಗಿ ನಡೆದಿದೆ ಎಂದು ಪಾಲಿಕೆ ಕಂದಾಯ ವಿಭಾಗ ಅಧಿಕಾರಿ ಅಶೋಕ ಗುರಣಿ ಹೇಳಿದ್ದಾರೆ.