ಉಜಳಂಬದಲ್ಲಿ 3 ಕೋಟಿಗೂ ಅಧಿಕ ಗಾಂಜಾ ಜಪ್ತಿ

| Published : Oct 07 2024, 01:38 AM IST

ಸಾರಾಂಶ

ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯ ಉಜಳಂಬ ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ಗಾಂಜಾ ಜಪ್ತಿ ಮಾಡಿರುವುದು.

ಬೀದರ್‌: ಅಕ್ರಮವಾಗಿ ಬೆಳೆದಿದ್ದ ₹3 ಕೋಟಿಗೂ ಅಧಿಕ ಬೆಲೆ ಬಾಳುವ ಗಾಂಜಾವನ್ನು ಜಿಲ್ಲೆಯ ಪೊಲೀಸರು ಕಾರ್ಯಾಚಾರಣೆ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ. ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯ ಉಜಳಂಬ ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಜಮೀನಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸಮ್ಮುಖದಲ್ಲಿ ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಲಾಗಿದೆ.

ಮಹಾರಾಷ್ಟ್ರದ ಉಮರ್ಗಾ ಮೂಲದ ವ್ಯಕ್ತಿಗೆ ಸೇರಿದ್ದ ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆಯಲಾಗಿತ್ತು. ಸುಮಾರು 350 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಗಾಂಜಾ ಬೆಳೆದ ಜಮೀನು ಕರ್ನಾಟಕ ರಾಜ್ಯದ ಸರ್ವೇ ನಂಬರನಲ್ಲಿದ್ದರೆ ಜಮೀನಿನ ಮಾಲೀಕ ಬಸವರಾಜ ಎಂಬಾತ ಮಹಾರಾಷ್ಟ್ರ ಮೂಲದವನಾಗಿದ್ದಾನೆ. ಜಮೀನಿನಲ್ಲಿ ಬೆಳೆದ 6 ರಿಂದ 7 ಅಡಿ ಎತ್ತರದ ಸುಮಾರು 700ಕ್ಕೂ ಹೆಚ್ಚು ಗಿಡಗಳನ್ನು ಕಿತ್ತು ಹಾಕಲಾಗಿದೆ ಎಂದು ಎಸ್ಪಿ ಪ್ರದೀಪ ಗುಂಟಿ ತಿಳಿಸಿದ್ದಾರೆ. ಇನ್ನು ಪೊಲೀಸರ ಕಾರ್ಯಾಚರಣೆ ಜಾರಿಯಲ್ಲಿದೆ.

ಸ್ವತಃ ಎಸ್ಪಿ ಪ್ರದೀಪ ಗುಂಟಿ ಅವರು ಗಾಂಜಾ ಗಿಡ ಕಿತ್ತು ಸೀಜ್ ಮಾಡಿಸಿದ್ದಾರೆ. ಹುಮನಾಬಾದ ಡಿವೈಎಸ್ಪಿ ನ್ಯಾಮೆಗೌಡ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ಇದ್ದರು. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿಲ್ಲ.