ಸಾರಾಂಶ
ತಾಲೂಕಿನಲ್ಲಿ ಕಾರ್ಮಿಕ ಇಲಾಖೆಯಿಂದ ನೋಂದಾಯಿಸಲ್ಪಟ್ಟ 5,500 ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಇದ್ದಾರೆ.
- ಶಾಸಕ ಜಿ.ಡಿ. ಹರೀಶ್ ಗೌಡರಿಂದ ವಿತರಣೆ
---------ಕನ್ನಡಪ್ರಭ ವಾರ್ತೆ ಹುಣಸೂರು ಕಾರ್ಮಿಕ ಇಲಾಖೆ ಮತ್ತು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ 300ಕ್ಕೂ ಹೆಚ್ಚು ವಿವಿಧ ವೃತ್ತಿಯಾಧಾರಿತ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ಶಾಸಕ ಜಿ.ಡಿ. ಹರೀಶ್ ಗೌಡ ವಿತರಿಸಿದರು.ಪಟ್ಟಣದ ನಗರಸಭೆಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಕಿಟ್ ಗಳನ್ನು ವಿತರಿಸಿದ ನಂತರ ಅವರು ಮಾತನಾಡಿದರು.ತಾಲೂಕಿನಲ್ಲಿ ಕಾರ್ಮಿಕ ಇಲಾಖೆಯಿಂದ ನೋಂದಾಯಿಸಲ್ಪಟ್ಟ 5,500 ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಇದ್ದಾರೆ. ಆದರೆ ಸರ್ಕಾರದಿಂದ 300 ಮಂದಿಗೆ ಮಾತ್ರ ಕಿಟ್ ಗಳನ್ನು ಪೂರೈಸಲಾಗಿದೆ. ಹಾಗಾಗಿ ತಾಲೂಕಿನ ಎಲ್ಲ ಕಾರ್ಮಿಕರಿಗೆ ಕಿಟ್ ಗಳು ಸಿಗುವಂತಾಗಲು ನಾನು ಕಾರ್ಮಿಕ ಸಚಿವರಲ್ಲಿ ಚರ್ಚಿಸಿ ಕ್ರಮವಹಿಸಲಿದ್ದೇನೆ. ಸುರಕ್ಷತಾ ಕಿಟ್ ಗಳು ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಸರ್ಕಾರ ನೀಡುತ್ತಿದ್ದು, ಇವೆಲ್ಲವನ್ನೂ ಕರ್ತವ್ಯದ ವೇಳೆ ಕಡ್ಡಾಯವಾಗಿ ನೀವು ಬಳಸಿರಿ. ಅಲ್ಲದೇ ಇಲಾಖೆಯಲ್ಲಿ ಕಾರ್ಮಿಕರಿಗಾಗಿ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ, ದುರ್ಬಲತೆ ಪಿಂಚಣಿ, ವೃತ್ತಿಯಾಧಾರಿತ ಟೂಲ್‌ಕಿಟ್‌ಗಳು, ಹೆರಿಗೆ ಸೌಲಭ್ಯ,ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ಅಪಘಾತ ಪರಿಹಾರ ಮುಂತಾದ ಸೌಲಭ್ಯಗಳಿದ್ದು, ಅಧಿಕಾರಿಗಳು ಕಾರ್ಮಿಕ ಕುಟುಂಬಗಳಿಗೆ ಅರಿವು ಮೂಡಿಸಿ ಸೌಲಭ್ಯಗಳನ್ನು ಪಡೆಯುವಂತೆ ಮಾಡಲು ಶ್ರಮಿಸಬೇಕೆಂದು ಸೂಚಿಸಿದರು.ಕೆ.ಆರ್. ನಗರ ತಾಲೂಕು ಕಾರ್ಮಿಕ ನಿರೀಕ್ಷಕ ಎಚ್.ಕೆ. ಗೋವಿಂದರಾಜ್, ಹುಣಸೂರು ತಾಲೂಕು ಕಾರ್ಮಿಕ ನಿರೀಕ್ಷಕ ಮಂಜುನಾಥ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ರಾಘು ಕಲ್ಕುಣಿಕೆ, ಪೌರಾಯುಕ್ತೆ ಕೆ. ಮಾನಸ, ಕಾರ್ಮಿಕ ಇಲಾಖೆ ಸಿಬ್ಬಂದಿ ಮತ್ತು ಕಾರ್ಮಿಕರು ಇದ್ದರು.