ಸಾರಾಂಶ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು
ಕನ್ನಡಪ್ರಭ ವಾರ್ತೆ ಮೈಸೂರು
ರಾಜೇಂದ್ರ ಶ್ರೀಗಳವರನ್ನು ನೆನೆಯುವುದೇ ಪುಣ್ಯದ ಕೆಲಸ. ಅವರು ಮಾಡಿದ ಸಾಧನೆಯಿಂದ ಎಂದೆಂದಿಗೂ ನಮ್ಮ ಜೊತೆ ಇದ್ದಾರೆ. ಬಸವಣ್ಣನವರು ಭಕ್ತಿ ಕಲ್ಯಾಣವನ್ನು ಕಟ್ಟಿದಂತೆ, ರಾಜೇಂದ್ರ ಶ್ರೀಗಳವರು ಭಕ್ತಿ ಕಲ್ಯಾಣಮಯವಾದ ಸಮಾಜವನ್ನು ಕಟ್ಟಿದರು. ಭಕ್ತಿಯಿಂದ ಸಾಧಿಸಲಾಗದೆ ಇರುವುದು ಯಾವುದೂ ಇಲ್ಲ ಎಂಬ ಅಚಲವಾದ ನಂಬಿಕೆಯಿಂದ ಲೋಕ ಕಲ್ಯಾಣದ ಕಾರ್ಯದಲ್ಲಿ ಶ್ರೀಗಳು ನಿರತರಾಗಿದ್ದರು. ಅವರ ಪ್ರತಿಯೊಂದು ಸಾಧನೆಯ ಹೆಜ್ಜೆಯಲ್ಲಿ ಭಕ್ತಿ ಎಂಬುದೇ ಪ್ರಧಾನವಾಗಿದೆ ಎಂದು ಗೌರವ ಪ್ರಾಧ್ಯಾಪಕ ಎಚ್.ಬಿ. ದೇವಣ್ಣ ಹೇಳಿದರು.ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ನಡೆದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110ನೇ ಜಯಂತಿಯಲ್ಲಿ ಮಾತನಾಡಿದ ಅವರು, ಶ್ರೀಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹವಾದದ್ದು. ಜನರ ಶೈಕ್ಷಣಿಕ ಅಗತ್ಯವನ್ನು ಪೂರೈಸಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು ಎಂದರು.ಸಮ್ಮುಖ ವಹಿಸಿದ್ದ ಬೆಟ್ಟದಪುರದ ಸಲಿಲಾಖ್ಯ ಮಠದ ಶ್ರೀ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಹಾತ್ಮರನ್ನು ನೆನೆಯುವುದೇ ಘನವಾದ ಮುಕ್ತಿಯಾಗಿದೆ. ಅದರಂತೆ ರಾಜೇಂದ್ರ ಶ್ರೀಗಳವರನ್ನು ನೆನೆಯುವುದು, ಸ್ಮರಿಸುವುದು ಮುಕ್ತಿಯ ಮಾರ್ಗವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಮಹಾಚೇತನದಂತೆ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಹೊತ್ತಿಸಿದ ಅರಿವಿನ ಬೆಳಕಿನಲ್ಲಿ ಹಲವು ಕುಟುಂಬಗಳು ಸುಂದರವಾದ ಬದುಕನ್ನು ಕಂಡುಕೊಂಡಿವೆ ಎಂದು ಸ್ಮರಿಸಿದರು.ಇದೇ ವೇಳೆ ವಿವಿಧ ದತ್ತಿ ಬಹುಮಾನಗಳನ್ನು ವಿತರಿಸಲಾಯಿತು. ರಾಜೇಂದ್ರ ಶ್ರೀಗಳವರ ಜಯಂತಿ ಸ್ಮರಣಾರ್ಥ ನಡೆಸಿದ ಮೈಸೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ. ಪ್ರಭುಸ್ವಾಮಿ ಇದ್ದರು. ಕ್ಷೀರಾ ಶಾನುಭೋಗ್ ಮತ್ತು ಅದಿತಿ ಹೆಗ್ಡೆ ಪ್ರಾರ್ಥಿಸಿದರು. ಡಾ.ಎನ್. ರಾಜೇಂದ್ರಪ್ರಸಾದ್ ನಿರೂಪಿಸಿದರು. ಎಸ್. ನಂಜುಂಡಸ್ವಾಮಿ ವಂದಿಸಿದರು.