ಭಾರೀ ಮಳೆಗೆ 60 ಎಕರೆ ಬೆಳೆ ನಾಶ

| Published : Oct 25 2025, 01:00 AM IST

ಸಾರಾಂಶ

ನಷ್ಟಕ್ಕೊಳಗಾದ ಸಂತ್ರಸ್ತರಿಗೆ ಸರ್ಕಾರದ ಮಾರ್ಗಸೂಚಿಯಂತೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ ಶಾಸಕರು, ಮನೆ ಮತ್ತು ಬೆಳೆ ಕಳೆದುಕೊಂಡವರು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕಳೆದ ಒಂದು ತಿಂಗಳಿನಿಂದ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಪರಿಣಾಮ 50ಕ್ಕೂ ಅಧಿಕ ಮನೆಗಳು ಬಿದ್ದು ಹೋಗಿದ್ದು, ಇದರ ಜತೆಗೆ 60 ಎಕರೆ ಬೆಳೆ ನಾಶವಾಗಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಮಳೆಯಿಂದ ಬಿದ್ದು ಹೋದ ಮನೆಗಳು ಮತ್ತು ಗಳಿಗೆಕೆರೆ ಗ್ರಾಮದ ಬಳಿ ಅಧಿಕಾರಿಗಳೊಂದಿಗೆ ಬೆಳೆ ಹಾನಿ ಪರಿಶೀಲಿಸಿ ಮಾತನಾಡಿದ ಅವರು, ಈ ಸಂಬಂದ ಖುದ್ದು ಭೇಟಿ ಮಾಡಿ ನಷ್ಟದ ಅಂದಾಜು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ನಷ್ಟಕ್ಕೊಳಗಾದ ಸಂತ್ರಸ್ತರಿಗೆ ಸರ್ಕಾರದ ಮಾರ್ಗಸೂಚಿಯಂತೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ ಶಾಸಕರು, ಮನೆ ಮತ್ತು ಬೆಳೆ ಕಳೆದುಕೊಂಡವರು ಕಂದಾಯ, ಕೃಷಿ ಮತ್ತು ಜಲ ಸಂಪನ್ಮೂಲಇಲಾಖೆಯ ಅಧಿಕಾರಿಗಳಿಗೆ ಛಾಯಾಚಿತ್ರ ಮತ್ತು ಸೂಕ್ತ ದಾಖಲೆ ನೀಡಬೇಕು ಎಂದು ಸಲಹೆ ನೀಡಿದರು.

ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು, ಈ ಸಂಬಂಧ ನನಗೆ ವರದಿ ನೀಡಿದರೆ ಹೆಚ್ಚಿನ ಪರಿಹಾರ ಕೊಡಿಸಲು ಮುಖ್ಯಮಂತ್ರಿ ಗಳು, ಉಪ-ಮುಖ್ಯಮಂತ್ರಿಗಳು, ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.

ಮಳೆಯಿಂದ ಹಾಳಾಗಿರುವ ರಸ್ತೆಗಳ ಕಾಮಗಾರಿಗಳನ್ನು ತುರ್ತಾಗಿ ನಿರ್ವಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆದೇಶಿಸಿದ ಅವರು, ಇದರ ಜತೆಗೆ ಭಾಗಶಃ ಮನೆ ಕಳೆದುಕೊಂಡ ಸಂತಸ್ರರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಸಿಕೊಡುವ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಲಪಾತೋತ್ಸವ:ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ನವೆಂಬರ್ ಅಂತ್ಯದ ವೇಳೆಗೆ ವೈಭವದಿಂದ ಜಲಪಾತೋತ್ಸವ ನಡೆಸುವುದಾಗಿ ಶಾಸಕರು ಮಾಹಿತಿ ನೀಡಿದರು.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ನಾನು ಪತ್ರ ಬರೆದಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅವರು, ಅಗತ್ಯ ಅನುದಾನ ನೀಡುವ ವಾಗ್ದಾನ ನೀಡಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಪೂರ್ವಭಾವಿ ಸಭೆ ನಡೆಸಿ ಜಲಪಾತೋತ್ಸವ ನಡೆಸುವ ದಿನಾಂಕದ ನಿಗದಿಪಡಿಸುವುದಾಗಿ ಪ್ರಕಟಿಸಿದರು.

ತರಕಾರಿ ಮಾರುಕಟ್ಟೆ ಉದ್ಘಾಟನೆ:ಕೆ.ಆರ್‌. ನಗರ ಪಟ್ಟಣದಲ್ಲಿ ಪುರಸಭೆ ವತಿಯಿಂದ ನೂತನವಾಗಿನಿರ್ಮಾಣ ಮಾಡಿರುವ ಕೃಷ್ಣರಾಜೇಂದ್ರ ತರಕಾರಿ ಮಾರುಕಟ್ಟೆ ಸಂಕುಲವನ್ನು ಶೀಘ್ರದಲ್ಲಿಯೆ ಉದ್ಘಾಟನೆ ಮಾಡಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಮಾರುಕಟ್ಟೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ವಿದ್ಯುತ್ ಸಂರ್ಪಕ ಕಲ್ಪಿಸಿದ ಕೂಡಲೇ ಉದ್ಘಾಟನಾ ದಿನಾಂಕ ನಿಗದಿಪಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತ್ವರಿತವಾಗಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.

ಹಂಪಾಪುರ ಗ್ರಾಪಂ ಅಧ್ಯಕ್ಷೆ ವಿದ್ಯಾನಾರಾಯಣ್, ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ತಾಪಂ ಇಒವಿ.ಪಿ. ಕುಲದೀಪ್, ಸಹಾಯಕ ಕೃಷಿ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ್, ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿಶುಕುಮಾರ್, ಸಹಾಯಕ ಎಂಜಿನಿಯರ್ ಕಿರಣ್, ಕಂದಾಯಾಧಿಕಾರಿ ಪ್ರಕಾಶ್, ಪಿಡಿಒ ಅಶ್ವಿನಿ, ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ. ಪ್ರಶಾಂತ್, ನಿರ್ದೇಶಕ ಎಂ.ಎಸ್. ಅನಂತ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್. ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಡಿ.ಸಿ. ರವಿ ಇದ್ದರು.