ಹಲ್ಲಿ ಬಿದ್ದ ಸಾಂಬಾರು ಸೇವಿಸಿ 53ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

| Published : Nov 13 2024, 12:01 AM IST

ಹಲ್ಲಿ ಬಿದ್ದ ಸಾಂಬಾರು ಸೇವಿಸಿ 53ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಹಲ್ಲಿ ಬಿದ್ದಿದ್ದ ಸಾಂಬಾರು ಸೇವಿಸಿ 53ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿತು.

ಕಂಪ್ಲಿ: ಹಲ್ಲಿ ಬಿದ್ದಿದ್ದ ಸಾಂಬಾರು ಸೇವಿಸಿ 53ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿತು.

ಮಧ್ಯಾಹ್ನ ಬಿಸಿ ಊಟ ಮಾಡುವ ವೇಳೆ ಸಾಂಬಾರಿನಲ್ಲಿ ಹಲ್ಲಿ ಬಿದ್ದಿದ್ದು ಅನ್ನದೊಂದಿಗೆ ಸಾಂಬಾರು ಸೇವಿಸಿದ ಮಕ್ಕಳಲ್ಲಿ ಹೊಟ್ಟೆನೋವು, ವಾಂತಿ ಕಂಡು ಬಂದಿದ್ದು ಅಸ್ವಸ್ಥಗೊಂಡಿದ್ದರು. ಚಿಕಿತ್ಸೆಗಾಗಿ ಮಕ್ಕಳನ್ನು ಕೂಡಲೇ ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಈ ಕುರಿತು ಮಾಹಿತಿ ತಿಳಿದ ಪೋಷಕರು ಗಾಬರಿಗೊಂಡು ಅಳುತ್ತ ಆಸ್ಪತ್ರೆ ಬಳಿ ಜಮಾಯಿಸಿದ್ದರು. ಸದ್ಯ 53ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 3 ಜನರನ್ನು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ರೀತಿಯ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಅರುಣ್ ತಿಳಿಸಿದರು.

ಸ್ಥಳಕ್ಕೆ ಶಾಸಕ ಜೆ.ಎನ್. ಗಣೇಶ್, ತಹಸೀಲ್ದಾರ್ ಶಿವರಾಜ್ ಶಿವಪುರ ಭೇಟಿ ನೀಡಿ, ಪರಿಶೀಲಿಸಿ ಮಕ್ಕಳ ಆರೋಗ್ಯ ಸ್ಥಿತಿ ವಿಚಾರಿಸಿದರು. ಶಾಲೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ತಂಡ ಭೇಟಿ ನೀಡಿ ಬಿಸಿಯೂಟ ತಯಾರಿಕೆಗೆ ಬಳಸಿದ ಆಹಾರ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್ಎಲ್ ವರದಿಗೆ ಕಳುಹಿಸಿದರು.ಇಬ್ಬರು ಬಾಣಂತಿಯರ ಸಾವು

ಬಳ್ಳಾರಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ಬಾಣಂತಿಯರು ಮೃತಪಟ್ಟಿರುವ ಘಟನೆ ಮಂಗಳವಾರ ಸಂಭವಿಸಿದೆ. ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ನಂದಿನಿ (24), ಬಸರಕೋಡು ಗ್ರಾಮದ ಲಲಿತಮ್ಮ (26) ಮೃತ ಬಾಣಂತಿಯರು.

ಮೃತ ಈ ಇಬ್ಬರು ಹೆರಿಗೆಗೆಂದು ನಗರದ ಜಿಲ್ಲಾಸ್ಪತ್ರೆಗೆ ಸೋಮವಾರ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಈ ಇಬ್ಬರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ಇವರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಕಾಮಾಲೆ ಮತ್ತು ಲಿವರ್‌, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್‌ಗೆ ದಾಖಲಿಸಿದ್ದು, ಸೋಮವಾರ ಬೆಳಗ್ಗೆ ಲಲಿತಮ್ಮ, ಮಂಗಳವಾರ ನಂದಿನಿ ಕೊನೆಯುಸಿರೆಳೆದಿದ್ದಾರೆ. ಇಬ್ಬರಿಗೂ ಜನಿಸಿದ ಶಿಶುಗಳು ಆರೋಗ್ಯವಾಗಿವೆ’. ಇಬ್ಬರನ್ನೂ ಉಳಿಸಿಕೊಳ್ಳಲು ವೈದ್ಯರು ಶಕ್ತಿ ಮೀರಿ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿನ ಒಟಿ ವಿಭಾಗದಿಂದ ಏನಾದರೂ ಇನ್‌ಫೆಕ್ಷನ್‌ ಆಗಿರುವ ಬಗ್ಗೆ ಸಹ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ತಿಳಿಸಿದ್ದಾರೆ.