ದಾವಣಗೆರೆ ಶೇ.80ಕ್ಕಿಂತ ಹೆಚ್ಚು ಮತದಾನದ ಗುರಿ

| Published : May 07 2024, 01:02 AM IST

ಸಾರಾಂಶ

ಇಡೀ ಲೋಕಸಭಾ ಕ್ಷೇತ್ರಾದ್ಯಂತ ಮತದಾರರಾರು ಸ್ವಯಂ ಪ್ರೇರಣೆಯಿಂದ ಮತಗಟ್ಟೆಗೆ ತೆರಳಿ, ತಮ್ಮ ಅಮೂಲ್ಯವಾದ ಮತ ಚಲಾಯಿಸಬೇಕು

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.72.96ರಷ್ಟು ಮತದಾನವಾಗಿದ್ದು, 2024ರ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಶೇಕಡವಾರು ಮತದಾನಕ್ಕೆ ಜಿಲ್ಲೆ, ಕ್ಷೇತ್ರದ ಮತದಾರರು ಮುಂದಾಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮನವಿ ಮಾಡಿದ್ದಾರೆ. ನಗರದ ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜು ಆವರಣದ ಮಸ್ಟರಿಂಗ್ ಕೇಂದ್ರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈ ಸಲ ಶೇ.80ಕ್ಕಿಂತಲೂ ಹೆಚ್ಚು ಮತದಾನ ಆಗಬೇಕೆಂಬ ಗುರಿ ಹೊಂದಿದ್ದೇವೆ ಎಂದರು.

ಇಡೀ ಲೋಕಸಭಾ ಕ್ಷೇತ್ರಾದ್ಯಂತ ಮತದಾರರಾರು ಸ್ವಯಂ ಪ್ರೇರಣೆಯಿಂದ ಮತಗಟ್ಟೆಗೆ ತೆರಳಿ, ತಮ್ಮ ಅಮೂಲ್ಯವಾದ ಮತ ಚಲಾಯಿಸಬೇಕು. ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯುವ ಚುನಾವಣೆಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಸಹ ಈಗಾಗಲೇ ಅಗತ್ಯ ಪರಿಕರಗಳೊಂದಿಗೆ ನಿಯೋಜಿತ ಮತಗಟ್ಟೆಗೆ ತೆರಳಿದ್ದಾರೆ ಎಂದು ಅವರು ತಿಳಿಸಿದರು.

ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲೂ ಮಸ್ಟರಿಂಗ್ ಪ್ರಕ್ರಿಯೆ ಚೆನ್ನಾಗಿ ನಡೆದಿದೆ. ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಪೂರ್ಣಗೊಂಡಿವೆ. ಎಂಟೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 35 ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ 5ರಂತೆ ಯುವಕರಿಂದಲೇ ನಡೆಯುವ ಮತಗಟ್ಟೆಗಳು ಸೇರಿ ಕ್ಷೇತ್ರಾದ್ಯಂತ 63 ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.