ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ನಾನು ಈ ರಾಜ್ಯದ ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷನಾಗಿರುವುದಕ್ಕಿಂತ ಮಿಗಿಲಾಗಿ ನಿಮ್ಮ ಸೇವಕನಾಗಿ ಇಲ್ಲಿಗೆ ಬಂದಿದ್ದು ಈ ಕ್ಷೇತ್ರದ ಜನತೆಗೆ ನನ್ನ ಸೇವೆ ಸದಾ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಾಳೆಹೊನ್ನೂರು ಪೀಠದ ಪೂಜ್ಯ ಗಂಗಾಧರ ಸ್ವಾಮೀಜಿ ನನ್ನ ಜೀವನವನ್ನೇ ಬದಲಿಸಿದ ಮಹಾನ್ ಸಂತರು. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದಗಳಂತೆ, ಇಂದು ಈ ಚಿಕ್ಕದಾದ, ಚೊಕ್ಕದಾದ ಧಾರ್ಮಿಕ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ಆಗಮಿಸಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿ ಗುರುಗಳಿಗೆ ನಮಿಸಿದರು.
ನಾನು ನಂಬುವ ಅಜ್ಜಯ್ಯ ಅವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ನಾಡು ಧರ್ಮದ ಸಾಮ್ರಾಜ್ಯವಾಗಲಿ, ಭಕ್ತಿಯ ನೆಲೆ ಬೀಡಾಗಲಿ, ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ, ಧರ್ಮಕ್ಕಾಗಿ ಆಳಿರಿ, ಧರ್ಮಕ್ಕಾಗಿ ತಾಳಿರಿ ಎಂಬ ಸಂದೇಶ ಸಾರಿದ್ದು ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತಿದ್ದೇನೆ. ನಮ್ಮ ತಾಯಿ, ತಂದೆ, ಗುರು ನಮ್ಮ ಬದುಕಿನ ಮೂರು ಭಾಗಗಳಾಗಿದ್ದು ಈ ನಾಡಿನ ಜನತೆಗೆ ಸಂಸ್ಕೃತಿ, ಶಾಂತಿ, ನೆಮ್ಮದಿ ಸಿಗಲಿ ಎಂದು ಗುರುಗಳಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ದೇವರು, ಧರ್ಮವನ್ನ ನಾವು ಎಂದೂ ಮರೆಯಬಾರದು. ಈ ಹಿಂದೆ ನಮ್ಮ ಹಿರಿಯರು ಮನೆ ಹುಷಾರು, ಮಠ ಹುಷಾರು ಎಂಬ ಮಾರ್ಗದರ್ಶನ ನೀಡಿರುವಂತೆ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದು ಇಂದು ಶ್ರೀಗಳು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಮಗೆಲ್ಲಾ ದರ್ಶನ ನೀಡಿ ಆಶೀರ್ವದಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಈ ಊರಿನವರು ಸಂಘಟಿತರಾಗಿ, ಸಹಕಾರ ನೀಡಿ ಈ ಧರ್ಮ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಮೆಟ್ಟಿಲು ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ರಂಭಾಪುರಿ ಶ್ರೀಗಳ ಧಾರ್ಮಿಕ ಇತಿಹಾಸ, ಪರಂಪರೆ ಬಹಳ ವಿಶೇಷವಾದುದು. ಧರ್ಮ ಉಳಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ನಮಗೂ ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ನನಗೆ ಈ ಮಠ ಹಾಗೂ ಶ್ರೀಗಳ ಬಗ್ಗೆ ಅಪಾರ ಗೌರವವಿದೆ, ನನಗೂ ಈ ಮಠಕ್ಕೂ ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧವಿದ್ದು ಈ ಕಾರ್ಯಕ್ರಮಕ್ಕೆ ಶ್ರೀಗಳು ಬರುತ್ತಿರುವ ಮಾಹಿತಿ ಸಿಕ್ಕ ಕೂಡಲೇ ನನ್ನ ಎಲ್ಲಾ ಕೆಲಸ ಬಿಟ್ಟು, ಇಲ್ಲಿಗೆ ಬಂದು ಅವರ ದರ್ಶನ ಹಾಗೂ ಆಶೀರ್ವಾದ ಪಡೆದಿದ್ದೇನೆ, ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ನಾವು ನಮ್ಮ ಈ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು " ಎಂದು ತಿಳಿಸಿದರು.ಬಾಕ್ಸ್..............
ಸಿದ್ದೇಶ್ವರಸ್ವಾಮಿ ಬೆಟ್ಟಕ್ಕೆ ನೂರಾರು ವರ್ಷಗಳ ಇತಿಹಾಸನಮ್ಮ ಕ್ಷೇತ್ರದಲ್ಲಿರುವ ನೂರಾರ ವರ್ಷಗಳ ಹಳೆಯದಾದ ಪುಣ್ಯಕ್ಷೇತ್ರ ಇದಾಗಿದ್ದು ಬೆಟ್ಟದ ಮೇಲೆ ಈಗಲೂ ನೀರು ಜಿನುಗುತ್ತದೆ, ಇದನ್ನು ಅಭಿಷೇಕಕ್ಕೆ ಬಳಸಲಾಗುತ್ತದೆ, ಭಕ್ತಿ ಇರುವ ಕಡೆ ಭಗವಂತನಿದ್ದಾನೆ. ರಂಭಾಪುರಿ ಶ್ರೀಗಳು ಇಲ್ಲಿಗೆ ಬಂದು ಈ ಶಿವನು ನೆಲಿಸಿರುವ ಸ್ಥಾನಕ್ಕೆ ಹೊಸ ರೂಪ ನೀಡಲು ಪ್ರಯತ್ನ ಮಾಡುತ್ತಿದ್ದಾರೆ, ನಮ್ಮ ಕ್ಷೇತ್ರದ ಜನರು ಸಹ ಅವರ ಜೊತೆ ಕೈ ಜೋಡಿಸಿ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಬಿಜ್ಜಹಳ್ಳಿ ಉತ್ತಮ ಇತಿಹಾಸ ಹೊಂದಿರುವ ಕ್ಷೇತ್ರ. ಇಲ್ಲಿನ ಭಕ್ತಾದಿಗಳು ಇಂದಿಗೂ ಪೂಜೆ ಪುನಸ್ಕಾರ ಮಾಡಿಕೊಂಡು ಇಲ್ಲಿನ ಪರಂಪರೆ ಉಳಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಡಿ.ಕೆ.ಸುರೇಶ್ ಹಾಗೂ ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇವೆ. ಬಹುತೇಕ ಎಲ್ಲಾ ದೇವರು ಬೆಟ್ಟದ ಮೇಲೆ ಇದ್ದಾರೆ. ಉದಾಹರಣೆಗೆ ಚಾಮುಂಡಿಬೆಟ್ಟ ನಾನು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಈ ದೇವಸ್ಥಾನಕ್ಕೂ ಮೆಟ್ಟಿಲು ಹತ್ತಿ ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸುತ್ತೇನೆ. ನಮ್ಮ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವರು ನಿಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ. ಅವರು ಈ ರೀತಿ ನಿಮ್ಮ ಕೆಲಸಗಳನ್ನು ಮಾಡುವುದಿಲ್ಲ, ನಿಮ್ಮ ತಾಲೂಕು ಈ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಎಂದು ನೀವು ಗಮನದಲ್ಲಿಟ್ಟುಕೊಳ್ಳಿ. ನೀವೆಲ್ಲರೂ ಬೆಂಗಳೂರು ದಕ್ಷಿಣ ಜಿಲ್ಲೆಯವರು. ನಮ್ಮ ಗೌರವ, ಪರಂಪರೆಯನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗೋಣ ಎಂದು ಕರೆ ನೀಡಿದರು.