ಸಾರಾಂಶ
ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ಒಟ್ಟು ಕುಟುಂಬಗಳಲ್ಲಿ ಶೇ.85ರಷ್ಟು ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ ಇರುವವರ) ರೇಷನ್ ಕಾರ್ಡ್‌ಗಳನ್ನು ಹೊಂದಿವೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಭೋಗಸ್ ಬಿಪಿಎಲ್ ಕಾರ್ಡ್‌ಗಳಾಗಿರುವ ಸಾಧ್ಯತೆ ಇದೆ. ಆದ್ದರಿಂದ ಅಂತಹ ಕಾರ್ಡುದಾರರು ತಕ್ಷಣ ತಮ್ಮ ಕಾರ್ಡ್‌ಗಳನ್ನು ಮರಳಿಸಬೇಕು ಮತ್ತು ಮುಂದಿನ ಕಾನೂನು ಕ್ರಮದಿಂದ ಬಚಾವಾಗುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಬಡತನ ರೇಖೆಗಿಂತ ಕೆಳಗೆ ಇರುವವರ ಸಂಖ್ಯೆ ಕೇರಳದಲ್ಲಿ ಶೇ.35 ಆಗಿದ್ದರೆ, ಕರ್ನಾಟಕದಲ್ಲಿ ಶೇ.40ರ ಅಸುಪಾಸಿನಲ್ಲಿದೆ. ಹಾಗಿರುವಾಗ ಮುಂದುವರಿದ ಉಡುಪಿ ಜಿಲ್ಲೆಯಲ್ಲಿ 1.92 ಲಕ್ಷ ಕುಟುಂಬಗಳು (ಶೇ.85ರಷ್ಟು) ಬಡತನ ರೇಖೆಗಿಂತ ಕೆಳಗೆ ಇರುವುದು ಸಾಧ್ಯವಿಲ್ಲ. ಸರ್ಕಾರದಿಂದ ಸಿಗುವ ಸವಲತ್ತು ಇತ್ಯಾದಿ ಕಾರಣಗಳಿಗೆ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದರೆ ಅದು ಕಾನೂನು ಪ್ರಕಾರ ತಪ್ಪು. ಆದ್ದರಿಂದ ಅಂಥವರು ಯಾವುದೇ ದಂಡನೆ ಇಲ್ಲದೇ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದವರು ಹೇಳಿದ್ದಾರೆ.
ಇಲಾಖೆಯ ಅಧಿಕಾರಿಗಳಿಗೆ ಅಂತಹ ಭೋಗಸ್ ಕಾರ್ಡ್‌ಗಳನ್ನು ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಸೂಚಿಸಲಾಗುತ್ತದೆ ಎಂದ ಅವರು, ಅದಕ್ಕೆ ಮೊದಲು ಜನರು ತಾವಾಗಿಯೇ ಅಂತಹ ಕಾರ್ಡ್‌ಗಳನ್ನು ತಂದೊಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸರ್ಕಾರಿ ಉದ್ಯೋಗಿಗಳಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದು ಕಾನೂನು ಬಾಹಿರವಾಗಿದೆ. ಅಂಥವರಿಗೆ ದಂಡ ವಿಧಿಸಿ ಕಾರ್ಡ್ ರದ್ದು ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದು, 6 ತಿಂಗಳಿಂದ ರೇಷನ್ ಪಡೆಯದಿದ್ದವರ ಕಾರ್ಡ್‌ಗಳು ಕೂಡ ತನ್ನಿಂತಾನೇ ರದ್ದಾಗುತ್ತವೆ ಎಂದು ಡಿಸಿ ಹೇಳಿದ್ದಾರೆ.