ಸಾರಾಂಶ
ಹೊನ್ನಾಳಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಒಂದೂ ಮುಕ್ಕಾಲು ಎಕರೆ ಪ್ರದೇಶದಲ್ಲಿ ಬೆಳೆಸಿದ್ದ 4 ವರ್ಷದ ಸಾವಿರಾರು ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕೊಚ್ಚಿ ಹಾಕಿದ ಘಟನೆ ಹೊನ್ನಾಳಿ ತಾಲೂಕು ಮುಕ್ತೇನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಮುಕ್ತೇನಹಳ್ಳಿ ಗ್ರಾಮದ ಭಾನುವಳ್ಳಿ ಪರಮೇಶ್ವರಪ್ಪ ಎಂಬ ರೈತ ತಮ್ಮ ಕುಟುಂಬಕ್ಕೆ ಸೇರಿದ ಒಂದೂ ಮುಕ್ಕಾಲು ಎಕರೆ ಜಮೀನಿನಲ್ಲಿ 4 ವರ್ಷದ ಹಿಂದೆ ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಆಗಿನಿಂದಲೂ ಮನೆ ಮಂದಿಯೆಲ್ಲಾ ಸೇರಿ, ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಈಗ ಅದೇ ಸಾಲು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ರಾತ್ರೋ ರಾತ್ರಿ ಕತ್ತರಿಸಿ ಹಾಕಿರುವುದು ರೈತರ ಆಕ್ರೋಶಕ್ಕೂ ಗುರಿಯಾಗಿದೆ.
ಪರಮೇಶ್ವರಪ್ಪ ಅಥವಾ ಕುಟುಂಬದವರ ಮೇಲಿನ ವೈಷಮ್ಯದಿಂದಲೇ ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ, ಸಂತ್ರಸ್ತ ರೈತ ಪರಮೇಶ್ವರಪ್ಪ ಯಾರ ಮೇಲೆಯೂ ಶಂಕೆ ವ್ಯಕ್ತಪಡಿಸಿಲ್ಲ.
ಇನ್ನು ಕೆಲವೇ ವರ್ಷಗಳಿಗೆ ಅಡಿಕೆ ಸಸಿಗಳು ಫಲ ನೀಡುತ್ತಿತ್ತು. ಆದರೆ ಅಡಿಕೆ ಮರ ಕಡಿದುಹಾಕಿದವರ ಬಗ್ಗೆ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಪೊಲೀಸ್ ಇಲಾಖೆ ಕರೆಸಿ, ಪರಿಶೀಲನೆ ನಡೆಸಿದರು. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಪರಿಹಾರಕ್ಕೆ ರೇಣುಕಾಚಾರ್ಯ ಒತ್ತಾಯ: ಮುಕ್ತೇನಹಳ್ಳಿ ಗ್ರಾಮದಲ್ಲಿ ರೈತ ಭಾನುವಳ್ಳಿ ಪರಮೇಶ್ವರಪ್ಪನವರ ಅಡಿಕೆ ತೋಟಕ್ಕೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ, ಸಂತ್ರಸ್ತ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸುಮಾರು ಒಂದು ಮುಕ್ಕಾಲು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸಾವಿರಾರು ಅಡಿಕೆ ಗಿಡಗಳನ್ನು ನಾಶಪಡಿಸಿದ್ದಾರೆಂದರೆ ವೈಯಕ್ತಿಕ ಅಥವಾ ಹಳೆಯ ವೈಷಮ್ಯವೇ ಕಾರಣವಾಗಿರಬಹುದು. ದುಷ್ಕರ್ಮಿಗಳನ್ನು ಪೊಲೀಸರು ಪತ್ತೆ ಮಾಡಿ, ಬಂಧಿಸಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ನಷ್ಟಕ್ಕೀಡಾದ ರೈತ ಪರಮೇಶ್ವರಪ್ಪ ಮತ್ತು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೇಣುಕಾಚಾರ್ಯ ಒತ್ತಾಯಿಸಿದರು.
ಪರಿಹಾರಕ್ಕೆ ಶಾಂತನಗೌಡ ಭರವಸೆ: ಮುಕ್ತೇನಹಳ್ಳಿ ರೈತ ಭಾನುವಳ್ಳಿ ಪರಮೇಶ್ವರಪ್ಪ ಹೊಲಕ್ಕೆ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆ ತಕ್ಷಣ ಪತ್ತೆ ಮಾಡಿ, ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಸಾವಿರಾರು ಅಡಿಕೆ ಗಿಡ ನಾಶವಾದ ಹಿನ್ನೆಲೆಯಲ್ಲಿ ಸಂತ್ರಸ್ತ ರೈತ ಪರಮೇಶ್ವರಪ್ಪಗೆ ಸೂಕ್ತ ಪರಿಹಾರ ನೀಡಬೇಕು. ಪರಮೇಶ್ವರಪ್ಪ ಬಯಸಿದರೆ ಸಾವಿರಾರು ಅಡಿಕೆ ಸಸಿಗಳನ್ನು ನೀಡಿ, ಗೊಬ್ಬರವನ್ನು ಕೊಡಿಸುತ್ತೇನೆ. ಹೊಸದಾಗಿ ರೈತ ಅಡಿಕೆ ಸಸಿ ಬೆಳೆಯಲಿ ಎಂದು ಶಾಸಕ ಶಾಂತನಗೌಡ ಕನ್ನಡಪ್ರಭಕ್ಕೆ ತಿಳಿಸಿದರು.
(Representative Image is used))