ಬಿಜೆಪಿಗೆ ಈ ಬಾರಿ ಹೆಚ್ಚಿನ ಮತ: ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ

| Published : May 05 2024, 02:03 AM IST

ಬಿಜೆಪಿಗೆ ಈ ಬಾರಿ ಹೆಚ್ಚಿನ ಮತ: ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ
Share this Article
  • FB
  • TW
  • Linkdin
  • Email

ಸಾರಾಂಶ

2019ರ ಲೋಕಸಭಾ ಚುನಾವಣೆಯಲ್ಲಿ 26 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಬಿಜೆಪಿ ಅಭ್ಯರ್ಥಿಗೆ ನೀಡಿರುವುದರಲ್ಲಿ ಪ್ರಮುಖ ಪಾತ್ರವಿದ್ದು ಈ ಬಾರಿ ಗೆಲುವಿನ ಅಂತರವನ್ನು ಹೆಚ್ಚು ಮಾಡಿ 30 ಸಾವಿರ ತಲುಪುತ್ತೇವೆ. ತಾಕತ್ತಿದ್ದರೆ ಕಾಂಗ್ರೆಸ್ ಇದಕ್ಕೆ ತಡೆ ಹಾಕಲಿ: ದೊಡ್ಡಪ್ಪಗೌಡ ಪಾಟೀಲ್ ನರಿಬೋಳ

ಕನ್ನಡಪ್ರಭ ವಾರ್ತೆ ಕಲಬುರಗಿ/ಜೇವರ್ಗಿ

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ - ಜೆಡಿಎಸ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಜೇವರ್ಗಿ ಮತಕ್ಷೇತ್ರದಲ್ಲಿ ಡಾ. ಉಮೇಶ್ ಜಾಧವ್ ಅವರಿಗೆ ಈ ಬಾರಿ 30 ಸಾವಿರ ಲೀಡ್ ನೀಡುತ್ತವೇವೆ. ಕ್ಷೇತ್ರದ ಶಾಸಕರಾದ ಡಾ. ಅಜಯ್ ಸಿಂಗ್ ಕಾಂಗ್ರೆಸ್‌ಗೆ ಇಷ್ಟು ಲೀಡ್‌ ಕೊಡಲಿ ನೋಡೋಣ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ತೀವ್ರ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಅಂಬೇಡ್ಕರ್ ಭವನದ ಮೈದಾನದಲ್ಲಿ ನಡೆದ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಪರ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿ, 2019ರ ಲೋಕಸಭಾ ಚುನಾವಣೆಯಲ್ಲಿ 26 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಬಿಜೆಪಿ ಅಭ್ಯರ್ಥಿಗೆ ನೀಡಿರುವುದರಲ್ಲಿ ಪ್ರಮುಖ ಪಾತ್ರವಿದ್ದು ಈ ಬಾರಿ ಗೆಲುವಿನ ಅಂತರವನ್ನು ಹೆಚ್ಚು ಮಾಡಿ 30 ಸಾವಿರ ತಲುಪುತ್ತೇವೆ. ತಾಕತ್ತಿದ್ದರೆ ಕಾಂಗ್ರೆಸ್ ಇದಕ್ಕೆ ತಡೆ ಹಾಕಲಿ ಎಂದು ಸವಾಲೆಸೆದರು.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಲ್ಲಿ 1,81,000 ಮತಗಳಿದ್ದು ನಮ್ಮ ಪಕ್ಷದ ಕಾರ್ಯಕರ್ತರನ್ನು ಚೆನ್ನಾಗಿ ನೋಡಿಕೊಳ್ಳಿ ಕಹಿಯನ್ನು ಮರೆತು ಬಿಡೋಣ ಎಂದು ಬಿಜೆಪಿಗೆ ಕಿವಿಮಾತು ಹೇಳಿ ಮೈತ್ರಿ ಧರ್ಮವನ್ನು ಕಾಪಾಡಿ ಜಾಧವ್ ಅವರನ್ನು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದರು.

ಶಾಸಕ ಅಜಯ್‌ ಸಿಂಗ್‌ ಅಭಿವೃದ್ಧಿಯನ್ನು ಪೂರ್ಣ ಕಡೆಗಣಿಸಿದ್ದಾರೆ. ಜಾತಿಯ ವಿಷ ಬಿತ್ತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಂಡಕಾರಿದರು. ಮಲ್ಲಬಾದ ಏತ ನೀರಾವರಿಗೆ 400 ಕೋಟಿಯಷ್ಟು ಹಣ ಬಿಡುಗಡೆ ಮಂಜೂರಾತಿ ಆಗಿದ್ದರೂ ನಯಾ ಪೈಸೆ ಬಿಡುಗಡೆ ಮಾಡಲಿಲ್ಲ . ಕೊನೆಯ ಹಂತದ ರೈತರ ಹೊಲಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಆಂದೋಲದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಮುಂದಿನ ದಿನಗಳಲ್ಲಿ ಗೆದ್ದು ಬರುವ ಸಂಸದರು ನೀರುಣಿಸಲು ಪ್ರಯತ್ನಿಸಬೇಕು. ಕೆಬಿಜೆಎನ್ ಎಲ್ ಗೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ ಕುಮಾರಸ್ವಾಮಿ ಅವರು ಅನುದಾನ ಬಿಡುಗಡೆ ಮಾಡಿದ್ದರು. ಅಭಿವೃದ್ಧಿ ಬಿಜೆಪಿ ಜೆಡಿಎಸ್ಸಿನಿಂದ ಮಾತ್ರ ಸಾಧ್ಯವೆಂದರು.

ಕುಮಾರಣ್ಣ ಕೇಂದ್ರ ಸಚಿವರಾಗುವುದು ಖಚಿತ ಡಾ. ಉಮೇಶ್ ಜಾಧವ್ ವಿಶ್ವಾಸ:

ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಬಿಜೆಪಿ ಮೈತ್ರಿಯಿಂದ 28ಕ್ಕೆ 28 ಕ್ಷೇತ್ರಗಳು ಮೈತ್ರಿ ಕೂಟಕ್ಕೆ ದಕ್ಕಲಿದೆ. ಆ ಮೂಲಕ ಕುಮಾರಸ್ವಾಮಿಯವರು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗೋದಷ್ಟೇ ಅಲ್ಲ ಪ್ರಮುಖ ಖಾತೆಯನ್ನು ಹೊಂದಲಿದ್ದಾರೆ, ಇದರಿಂದ ರಾಜ್ಯದ ಪ್ರಗತಿಗೆ ವೇಗ ದೊರೆಯಲಿದೆ. ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಇದಕ್ಕೆ ಜೇವರ್ಗಿಯೇ ಸಾಕ್ಷಿ ಎಂದರು.

ಅಭಿವೃದ್ಧಿಯ ಕುರಿತು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ ಕೋಲಿ ಸಮಾಜಕ್ಕೆ 15 ವರ್ಷಗಳ ಕಾಲವಾದರೂ ಮಲ್ಲಿಕಾರ್ಜುನ ಖರ್ಗೆ ಅವರು ನ್ಯಾಯ ಕೊಡಲಿಲ್ಲ ಆದರೆ ಬಿಜೆಪಿ ಮೋದಿ ಸರಕಾರವು ಅರ್ಜುನ್ ಮುಂಡ ಕೇಂದ್ರ ಸಚಿವರಾಗಿದ್ದು ಕೂಲಿ ಸಮಾಜಕ್ಕೆ ಮೀಸಲಾತಿಯನ್ನು ನೀಡುವುದಾಗಿ ಲಿಖಿತವಾಗಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸುಳ್ಳು ಹೇಳುವುದರಲ್ಲಿ ಕಾಲಹರಣ ಮಾಡುತ್ತಿದೆ. 2110 ಕೋಟಿ ರೂಪಾಯಿ ವೆಚ್ಚದ ಭಾರತ್ ಮಾಲಾ ರಸ್ತೆ ಗುರುಮಠಕಲ್ ಸೇರಿದಂತೆ ಅತ್ಯಧಿಕ ವಲಸೆ ತೆರಳುತ್ತಿರುವ ಕಲ್ಬುರ್ಗಿ ಜಿಲ್ಲೆಯ ತಾಲೂಕುಗಳ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಮೆಗಾ ಜವಳಿ ಪಾರ್ಕ್ ಮಂಜೂರಾಗಿದೆ ಎಂದರು.