ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಜಲಾಶಯಕ್ಕೆ ಸೋಮವಾರ 80 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್ ನೀರನ್ನು ಬಿಡುತ್ತಿರುವುದರಿಂದ ಕಾವೇರಿ ನದಿ ವ್ಯಾಪ್ತಿ ಪ್ರವಾಹ ಉಂಟಾಗಿದ್ದು, ಮುಂಜಾಗ್ರತ ಕ್ರಮವಾಗಿ ತಗ್ಗು ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ನೀರಾವರಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಯಾವುದೇ ಸಮಯದಲ್ಲಾದರೂ ಮತ್ತಷ್ಟು ನೀರನ್ನು ಕಾವೇರಿ ನದಿಗೆ ಬಿಡುವ ಸಾಧ್ಯತೆ ಇರುವುದರಿಂದ ಹಲವು ಪ್ರದೇಶಗಳು ಮುಳುಗಡೆ ಭೀತಿ ಇದೆ. ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ ಎಂದು ಪಕ್ಷಿಧಾಮದ ಉಪ ಅರಣ್ಯಾಧಿಕಾರಿ ರವಿ ತಿಳಿಸಿದ್ದಾರೆ.
ಪಶ್ಚಿಮವಾಹಿನಿಯಲ್ಲಿನ ಮಂಟಪಗಳು, ಪಟ್ಟಣದ ಸ್ನಾನಘಟ್ಟದ ಮಂಟಪಗಳು, ಶ್ರೀಸಾಯಿ ಮಂದಿರ ಈಗಾಗಲೇ ಭಾಗಶಃ ಜಲಾವೃತಗೊಂಡಿವೆ. ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಹುತೇಕ ಮುಳುಗಡೆ ಹಂತಕ್ಕೆ ತಲುಪುತ್ತಿದೆ. ಇನ್ನಷ್ಟು ಹೆಚ್ಚಿನ ನೀರು ಹರಿದು ಬಂದರೆ ವೆಲ್ಲೆಸ್ಲೀ ಸೇತುವೆ ಸೇರಿದಂತೆ ನದಿ ತೀರದ ತಗ್ಗು ಪ್ರದೇಶಗಳು ಮುಳುಗಡೆಯಾಗಲಿವೆ.ನದಿ ಅಕ್ಕಪಕ್ಕದ ತಗ್ಗು ಪ್ರದೇಶದ ಬಹುತೇಕ ಜಮೀನುಗಳಿಗೆ ನೀರು ನುಗ್ಗಿದೆ. ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಪಟ್ಟಣದ ಚೆಕ್ ಪೋಸ್ಟ್ ಬಳಿ ಶ್ರೀಸಾಯಿ ಮಂದಿರ ಪ್ರವಾಹದಿಂದಾಗಿ ಮುಳುಗಡೆಗೊಂಡು ನೀರು ಜಲಾವೃತವಾಗಿದೆ.
ಮುಂಗೃತಾ ಕ್ರಮವಾಗಿ ಸಾರ್ವಜನಿಕರು ಕಾವೇರಿ ನದಿಗಿಳಿಯದಂತೆ ಎಚ್ಚರಿಕೆ ವಹಿಸಿ ಜಿಲ್ಲಾ ಹಾಗೂ ತಾಲೂಕು ಆಡಳಿತದಿಂದ ನದಿ ತೀರ ಪ್ರದೇಶಗಳಲ್ಲಿ ಪ್ರವೇಶ ನಿರ್ಬಂಧಿಸಿ ಪೊಲೀಸ್ ಬ್ಯಾರಿಗೇಡ್ ಸೇರಿದಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ನಿಮಿಷಾಂಬ ದೇವಾಲಯದ ಬಳಿ ಭಕ್ತರ ಸ್ನಾನ ಘಟ್ಟ, ಸ್ನಾನಗೃಹ ಜಲಾವೃತಗೊಂಡಿವೆ. ಪಶ್ಚಿಮ ವಾಹಿನಿ ಬಳಿ ಪುರಾತನ ಸ್ಮಾರಕಗಳ ಕಟ್ಟಡಗಳು,ಕಾವೇರಿ ಸಂಗಮ ಹಾಗೂ ಸ್ನಾನಘಟ್ಟ ಶ್ರಾದ್ಧಾಕೇಂದ್ರ ಮುಳುಗಡೆಗೊಂಡಿವೆ.ಪ್ರವಾಹ ಮುನ್ನೆಚ್ಚರಿಕೆ ಸೂಚನೆ:
ಜಲಾಶಯದಿಂದ ಸುಮಾರು 80 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ. ಈ ಪ್ರಮಾಣವು ಇನ್ನಷ್ಟು ಹೆಚ್ಚಾಗುವುದರಿಂದ ಕಾವೇರಿ ನದಿ ತಗ್ಗು ಪ್ರದೇಶದ ನದಿ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೆಆರ್‌ಎಸ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯಂತ್ ಸೂಚನೆ ನೀಡಿದ್ದಾರೆ.ವೆಲ್ಲೆಸ್ಲೀ ಸೇತುವೆ ಮೇಲೆ ಸಾರ್ವಜನಿಕರು ಓಡಾಟದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನದಿ ತೀರದ ಪ್ರದೇಶಗಳಾದ ಕಾರೇಕುರ, ರಂಗನತಿಟ್ಟು, ಶ್ರೀರಂಗಪಟ್ಟಣ ಟೌನಿನ ಸ್ನಾನಘಟ್ಟ, ವೆಲ್ಲೆಸ್ಲಿ ಸೇತುವೆ, ನಿಮಿಷಾಂಭ ದೇವಸ್ಥಾನ, ಘೋಸಾಯ್ ಘಾಟ್, ಪಶ್ಚಿಮವಾಹಿನಿ ಸ್ಥಳಗಳಲ್ಲಿ ಸಾರ್ವಜನಿಕರು ನದಿ ಬಳಿ ತೆರಳದಂತೆ ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧಿಸಿ ಬ್ಯಾರಿಗೇಡ್‌ಗಳನ್ನು ಅಳವಡಿಸಲು ಪೊಲೀಸರನ್ನು ನಿಯೋಜಿಸಿ ತಹಸೀಲ್ದಾರ್ ಚೇತನಾ ಯಾದವ್ ಆದೇಶ ಹೊರಡಿಸಿದ್ದಾರೆ.