ಮೊರೇರ ಬೆಟ್ಟದ ಶಿಲಾಸಮಾಧಿ, ಗುಹಾ ಚಿತ್ರಗಳ ಪ್ರದರ್ಶನಕ್ಕೆ ಆಯ್ಕೆ

| Published : Jul 18 2025, 12:51 AM IST

ಮೊರೇರ ಬೆಟ್ಟದ ಶಿಲಾಸಮಾಧಿ, ಗುಹಾ ಚಿತ್ರಗಳ ಪ್ರದರ್ಶನಕ್ಕೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೊರೇರ ಬೆಟ್ಟದಲ್ಲಿರುವ ಚಿತ್ರಗಳನ್ನು ಸೆರೆಹಿಡಿಯಲು ಬೆಂಗಳೂರಿನ ಪ್ರಸಿದ್ಧ ಛಾಯಾಗ್ರಾಹಕ ದಿನೇಶ ಹೆಗಡೆ ನೇತೃತ್ವದ 8 ಜನರ ತಂಡ ಆಗಮಿಸಿದೆ. ಜು. 14ರಂದು ಆಗಮಿಸಿರುವ ತಂಡ ಜು.20ರ ವರೆಗೆ ಹಿರೇಬೆಣಕಲ್ 5 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಬರುವ ಮೊರೇರ ಇತಿಹಾಸದ ಚಿತ್ರ ಮತ್ತು ಗುಹೆ ಚಿತ್ರಗಳನ್ನು ಸೆರೆಹಿಡಿಯಲಿದೆ.

ರಾಮಮೂರ್ತಿ ನವಲಿ

ಗಂಗಾವತಿ:

ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಆಯ್ಕೆ ಮಾಡಿದ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದಾಗಿರುವ ಹಾಗೂ ವಿಶ್ವದ ಪ್ರಾಗೈತಿಹಾಸವನ್ನು ಇಂದಿಗೂ ಗಟ್ಟಿಯಾಗಿ ಹಿಡಿದುಕೊಂಡಿರುವ ತಾಲೂಕಿನ ಹಿರೇಬೆಣಕಲ್‌ನ ಮೊರೇರ ಬೆಟ್ಟದ ಶಿಲಾ ಸಮಾಧಿ ಮತ್ತು ಗುಹೆ ಚಿತ್ರಗಳನ್ನು ಬೆಂಗಳೂರಿನ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ. ಇದರ ಅಂಗವಾಗಿ ಛಾಯಾಚಿತ್ರ ತಂಡವೊಂದು ಇಲ್ಲಿಗೆ ಆಗಮಿಸಿದೆ.

ಇತ್ತೀಚಿಗೆ ಹಿರೇಬೆಣಕಲ್ ಮೋರೆರ ಬೆಟ್ಟಕ್ಕೆ ಆಗಮಿಸಿದ್ದ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಇಲ್ಲಿರುವ ಗುಹೆ ಚಿತ್ರ ಮತ್ತು ಮೋರೆರ ಶಿಲಾ ಸಮಾಧಿಗಳ ಚಿತ್ರವನ್ನು ಚಿತ್ರೀಕರಿಸಿ ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಅಳವಡಿಸಬೇಕೆಂದು ಸೂಚಿಸಿದ್ದರಿಂದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಈ ಕ್ರಮಕೈಗೊಂಡಿದೆ.

ಛಾಯಾಗ್ರಾಹಕರ ತಂಡ:

ಮೊರೇರ ಬೆಟ್ಟದಲ್ಲಿರುವ ಚಿತ್ರಗಳನ್ನು ಸೆರೆಹಿಡಿಯಲು ಬೆಂಗಳೂರಿನ ಪ್ರಸಿದ್ಧ ಛಾಯಾಗ್ರಾಹಕ ದಿನೇಶ ಹೆಗಡೆ ನೇತೃತ್ವದ 8 ಜನರ ತಂಡ ಆಗಮಿಸಿದೆ. ಜು. 14ರಂದು ಆಗಮಿಸಿರುವ ತಂಡ ಜು.20ರ ವರೆಗೆ ಹಿರೇಬೆಣಕಲ್ 5 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಬರುವ ಮೊರೇರ ಇತಿಹಾಸದ ಚಿತ್ರ ಮತ್ತು ಗುಹೆ ಚಿತ್ರಗಳನ್ನು ಸೆರೆಹಿಡಿಯಲಿದೆ.

ಆ. 15ರಂದು ಉದ್ಘಾಟನೆ:

ಇಲ್ಲಿ ಸೆರೆಹಿಡಿರುವ ಚಿತ್ರಗಳನ್ನು ಬೆಂಗಳೂರಿನ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಆ.15ರ ಸ್ವಾತಂತ್ರ್ಯೋತ್ಸವ ದಿನದಂದು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಸೂಚನೆ ಮೇರೆಗೆ ಛಾಯಾಗ್ರಾಹಕರ ತಂಡ ಹಿರೇಬೆಣಕಲ್‌ ಬೆಟ್ಟಕ್ಕೆ ಆಗಮಿಸಿದೆ.ಹಿರೇಬೆಣಕಲ್ ಮೊರೇರ ಶಿಲಾ ಸಮಾಧಿ ಮತ್ತು ಗುಹೆಗಳ ಬಗ್ಗೆ ಪ್ರವಾಸಿಗರಿಗೆ ತಿಳಿಯಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ವೀಕ್ಷಿಸಲು ಬರಬೇಕೆನ್ನುವ ಉದ್ದೇಶದಿಂದ ಛಾಯಾಗ್ರಾಹಕರ ತಂಡ ಆಗಮಿಸಿದೆ. ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಈ ಚಿತ್ರಗಳು ಪ್ರರ್ದಶನವಾಗಲಿದ್ದು ದೇಶ-ವಿದೇಶದಿಂದ ಬರುವ ಪ್ರವಾಸಿಗರಿಗೆ ನೋಡಲು ಅನುಕೂಲವಾಗುತ್ತದೆ.

ಸುರೇಶ ಇಟ್ನಾಳ್‌, ಜಿಲ್ಲಾಧಿಕಾರಿ ಕೊಪ್ಪಳ

ಮೊರೇರ ಬೆಟ್ಟದಲ್ಲಿನ ಚಿತ್ರಗಳನ್ನು ಸೆರೆಹಿಡಿಯಲು ಬೆಂಗಳೂರಿನಿಂದ ಪರಿಣಿತರ ತಂಡ ಆಗಮಿಸಿದ್ದು ವೆಂಕಟಪ್ಪ ಆರ್ಲ್‌ ಗ್ಯಾಲರಿಯಲ್ಲಿ ಆ.15ರಂದು ಇವುಗಳನ್ನು ಸಚಿವರು ಉದ್ಘಾಟಿಸಲಿದ್ದಾರೆ.

ಡಾ. ಆರ್. ಶೇಜಸ್ವರ, ಉಪ ನಿರ್ದೇಶಕ, ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆ