ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಕಂದಾಯ ಇಲಾಖೆ ಹಾಗೂ ಭೂ ಮಾಪನ ಇಲಾಖೆಗಳು ಸಾರ್ವಜನಿಕರಿಗೆ ಸಮಸ್ಯೆ ಕೇಂದ್ರಗಳಾಗಿವೆ. ಕಚೇರಿಗೆ ಬರುವ ಅರ್ಜಿದಾರರಿಗೆ ನೇರವಾಗಿ ಉತ್ತರ ನೀಡಿ ಕಳಿಸಿ ಕಂಬ ಸುತ್ತುವ ಕೆಲಸ ಮಾಡಿಸಬೇಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.ಪಟ್ಟಣದ ಸಿದ್ದರಾಮಯ್ಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಸುತ್ತೋಲೆಗಳಿಗೆ ತಾಲೂಕು ಆಡಳಿತದಿಂದ ಸ್ಪಂದನೆ ಸಿಗುತ್ತಿಲ್ಲ. ತಾಲೂಕು ಆಡಳಿತ ನಡೆಸುವ ಎಲ್ಲಾ ಅಧಿಕಾರಿಗಳಿಗೆ ಅಪಾರವಾದ ಒತ್ತಡವಿದೆಯಾದರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತಹಾಗಬೇಕು. ಕಂದಾಯ ಮತ್ತು ಭೂಮಾಪನ ಇಲಾಖೆ ಸರಿಯಾದರೆ ತಾಲೂಕಿನ ಬಹುತೇಕ ಸಾರ್ವಜನಿಕರ ಮತ್ತು ರೈತರ ಸಮಸ್ಯೆ ಬಗೆಹರಿಸಬಹುದು ಎಂದರು.
ಬಗರ್ ಹುಕುಂ ಸಾಗುವಳಿದಾರರಿಗೆ ಇದೆ ಜು.15ರಂದು ಸಾಗುವಳಿ ಚೀಟಿ ನೀಡಲಾಗುವುದು. ಈ ಸಂಬಂಧ ನಾವೇ ಖುದ್ದಾಗಿ ತೆರಳಿ ಸ್ಥಳ ಪರಿಶೀಲನೆ ಮಾಡಲಾಗುವುದು. ಈಗ 1999ರ ಹಿಂದೆ ಫಾರಂ ನಂಬರ್ 53ರಲ್ಲಿ ಅರ್ಜಿ ಹಾಕಿರುವ ಫಲಾನುಭವಿಗಳಿಗೆ ಮಾತ್ರ ಸಾಗುವಳಿ ಚೀಟಿ ನೀಡಲಾಗುವುದು. ಫಾರಂ ನಂಬರ್ 57ರಲ್ಲಿ ಅರ್ಜಿ ಹಾಕಿರುವವರಿಗೆ ನಂತರದ ದಿನಗಳಲ್ಲಿ ಸಾಗುವಳಿ ಚೀಟಿ ನೀಡಲಾಗುವುದು. ಯಾವುದೇ ರೈತರು ಸಾಗುವಳಿ ಚೀಟಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಬೇಡ ಎಂದರು.ಗ್ರಾಮೀಣ ಪ್ರದೇಶದಲ್ಲೂ ನಿವೇಶನ ರಹಿತರಿಗೆ ನಿವೇಶನ ಕೊಡಲು ಚಿಂತನೆ ನಡೆದಿದೆ. ಮುಂದಿನ ತಿಂಗಳು ನಡೆಯುವ ಅಧಿವೇಶದ ಬಳಿಕ ನಿವೇಶನ ನೀಡಲಾಗುವುದು. ಪ್ರತಿ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಜಾಗಗಳನ್ನು ನೀಡಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು ಈ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರಿ ಜಾಗ ಹುಡುಕುವಂತೆ ಸೂಚಿಸಲಾಗಿದೆ ಎಂದರು.
ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆ ಹುದ್ದೆಗಳು ಖಾಲಿಯಿದ್ದು ವಿದ್ಯಾರ್ಹತೆಗೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು. ತಾಲೂಕಿನಾದ್ಯಂತ ರಸ್ತೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆ ಗಡಿ ಹೆಗ್ಗೆರೆ ಗ್ರಾಮದಿಂದ ಹೊಸದುರ್ಗ ದವರೆಗೆ ಬಾಕಿ ಇರುವ ರಸ್ತೆ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಹೊಸದುರ್ಗ ತಾಲೂಕನ್ನು ಗಣಿಬಾದಿತ ಪ್ರದೇಶದ ವ್ಯಾಪ್ತಿಗೆ ಸೇರಿಸಲಾಗಿದ್ದು ಅದರಲ್ಲಿಯೂ ಅನುದಾನ ಸಿಗಲಿದೆ. ಈ ಅನುದಾನದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ ಸೇರಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ವಿವಿಧ ಇಲಾಖೆಗಳಲ್ಲಿ ನೀಡಲಾಗುವ ಯೋಜನೆಗಳ ಹಕ್ಕು ಪತ್ರ ಹಾಗೂ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.